Kiccha Sudeep: ಒಂದು ಪಡೆ ನಮ್ಮೊಂದಿಗೆ ಯುದ್ಧಕ್ಕೆ ರೆಡಿಯಾಗ್ತಿದೆ, ನಾವೂ ಸಿದ್ಧ: ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಅಭಿನಯದ "ಮಾರ್ಕ್" ಸಿನಿಮಾ ಇದೇ ಡಿಸೆಂಬರ್ 25ಕ್ಕೆ ರಿಲೀಸ್ ಆಗುತ್ತಿದೆ. ಇತ್ತೀಚೆಗೆ ಚಿತ್ರತಂಡ ಹುಬ್ಬಳ್ಳಿಯಲ್ಲಿ ಮಾರ್ಕ್ ಸಿನಿಮಾದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿತ್ತು. ಈ ವೇಳೆ ಸುದೀಪ್ ವೇದಿಕೆಯಲ್ಲಿ ಮಾತನಾಡುತ್ತಾ ತಮ್ಮ ವಿರೋಧಿಗಳಿಗೆ ಎಚ್ಚರಿಯ ಸಂದೇಶವೊಂದನ್ನು ರವಾನಿಸಿದ್ದಾರೆ. "ನಾನು ಇಲ್ಲಿಯವರೆಗೆ ಸುಮ್ಮನಿದ್ದೆ, ಆದ್ರೆ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಿ.." ಎಂದು ತಮ್ಮ ಅಭಿಮಾನಿಗಳಿಗೆ ಸುದೀಪ್ ಕರೆ ನೀಡಿದ್ದಾರೆ.
'ನನಗೆ ಮಾತನಾಡುವುದಕ್ಕೆ ತುಂಬಾ ಆಸೆ ಇದೆ. ಆದ್ರೆ ಕಂಟ್ರೋಲ್ ಮಾಡಿಕೊಂಡು ಮಾತನಾಡುತ್ತೇನೆ. ಕೆಲವು ಮಾತನ್ನು ಹುಬ್ಬಳ್ಳಿಗೆ ಬಂದು ಈ ವೇದಿಕೆಯಲ್ಲಿ ಮಾತನಾಡಿದ್ರೆ ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ಅಲ್ಲಿಗೆ ತಟ್ಟುತ್ತೆ. ಈ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಮಾಡಿದ್ದೀವಿ' ಎಂದಿದ್ದಾರೆ ಸುದೀಪ್. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

'ಒಂದು ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ'
'ಡಿಸೆಂಬರ್ 25ಕ್ಕೆ ಬಾಗಿಲು ತಟ್ಟುತ್ತೀನಿ ಅಂತ ಭರವಸೆ ನೀಡಿದ್ದೆ. ಅದರಂತೆ ಥಿಯೇಟರ್‌ನಲ್ಲಿ ನಮ್ಮ ಸಿನಿಮಾ ಬಿಡುಗಡೆಯಾಗುತ್ತೆ, ಆದ್ರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ. ಈ ವೇದಿಕೆಯಿಂದಲೇ ಹೇಳ್ತಿದ್ದೀನಿ ಯುದ್ಧಕ್ಕೆ ನಾವು ಸಿದ್ಧ. ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧ' ಎಂದು ಸವಾಲ್ ಹಾಕಿದ್ದಾರೆ.
'ಕೆಲವೊಮ್ಮೆ ನನಗೆ ಅನಿಸುತ್ತೆ, ಸೈಲೆಂಟಾಗಿ ಇರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗಾಗಿ, ನೀವೆಲ್ಲ ಚೆನ್ನಾಗಿ ಇರ್ಬೇಕು ಅನ್ನೋ ಕಾರಣಕ್ಕೆ ನಾನು ಬಾಯಿ, ಎಲ್ಲದನ್ನೂ ಮುಚ್ಕೊಂಡು ಇದ್ದೆ ಹೊರತು, ನನಗೆ ಬಾಯಿಲ್ಲ ಎಂದರ್ಥವಲ್ಲ. ನನ್ನ ಸಹನೆಯಿಂದಾಗಿ ಬಹಳಷ್ಟು ಕಲ್ಲಿನ ತೂರಾಟ ನಿಮ್ಮ ಮೇಲೆ ಬೀಳುತ್ತಿದೆ. ಅದನ್ನು ನೀವೆಲ್ಲ ತಡೆಯುತ್ತಾ ಬಂದಿದ್ದೀರಿ. ಆದರೆ ಇವಾಗ ಹೇಳ್ತಿದ್ದೀನಿ, ನೀವು ತಡೆಯುವವರೆಗೆ ತಡೀರಿ, ಮಾತನಾಡುವ ಸಮಯದಲ್ಲಿ ಮಾತಾಡಿ' ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
'ಮಾರ್ಕ್ ಒಂದು ಅದ್ಭುತವಾದ ಸಿನಿಮಾ. ಅದನ್ನು ನೀವೆಲ್ಲ ಸೊಗಸಾಗಿ ಸ್ವಾಗತಿಸುತ್ತೀರ ಎಂದು ಭಾವಿಸಿದ್ದೇನೆ. ಅದರಲ್ಲಿ ತುಂಬಾ ಜನರ ಕನಸುಗಳಿವೆ. ಡಿಸೆಂಬರ್ 25ರಂದು ಮಾರ್ಕ್ ಸಿನಿಮಾವನ್ನು ನೋಡಿ ಹುಬ್ಬಳ್ಳಿ ಮಂದಿಯ ಕೂಗಾಟ ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು' ಎಂದು ಸುದೀಪ್ ಹೇಳಿದ್ದಾರೆ.
"ಮಾರ್ಕ್" ನಟ ಕಿಚ್ಚ ಸುದೀಪ್ ಅವರು ಬಹುನಿರೀಕ್ಷಿತ ಸಿನಿಮಾ ಆಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಮತ್ತು 'ಮಸ್ತ್ ಮಲೈಕಾ' ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾಗಾಗಿ ಸುದೀಪ್ ಅವರ ಪುತ್ರಿ ಸಾನ್ವಿ ಹಾಡಿರುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದರಲ್ಲಿ ಸುದೀಪ್ ಪಕ್ಕಾ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಭರ್ಜರಿ ಆಕ್ಷನ್ ಮತ್ತು ಡೈಲಾಗ್‌ಗಳಿಂದ ಕೂಡಿದೆ. ಈ ಕ್ರಿಸ್‌ಮಸ್ ದಿನವೇ ಮಾರ್ಕ್ ತೆರೆಕಾಣುತ್ತಿದೆ.












Click it and Unblock the Notifications