Kiccha Sudeep: ನನ್ನ ಸಿನಿಮಾ ಸೋಲಿಸಲು 9,000 ಲಿಂಕ್ ಲೀಕ್, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಿಚ್ಚ ಸುದೀಪ್
ಕನ್ನಡ ಸಿನಿಮಾ ರಂಗದಲ್ಲಿ ನಟ ಕಿಚ್ಚ ಸುದೀಪ್ ಅವರು ಯುದ್ಧ ಘೋಷಣೆ ಮಾಡಿದ್ದಾರೆ, ಆ ಮೂಲಕ ಸಮಾಜಕ್ಕೆ ವ್ಯತಿರಿಕ್ತ ಸಂದೇಶ ಹೋಗಿ ಸಮಾಜದ ನೆಮ್ಮದಿ ಹಾಳಾಗುತ್ತೆ ಅಂತೆಲ್ಲ ಹೊರಗೆ ಕೆಲವರು ಚರ್ಚೆ ಮಾಡಿದ್ದರು. ಅದರಲ್ಲೂ, ಕಿಚ್ಚ ಸುದೀಪ್ ಅವರ ಈ ಯುದ್ಧ ಹೇಳಿಕೆ ಸಂಚಲನ ಸೃಷ್ಟಿ ಮಾಡಿತ್ತು. ಆದರೆ ತಾವು ಹೇಳಿದ್ದ ಆ ಯುದ್ಧ ಯಾವುದರ ವಿರುದ್ಧ? ಅನ್ನೋ ಕುರಿತು ಸ್ಪಷ್ಟನೆ ಕೊಟ್ಟಿದ್ದ ನಟ ಸುದೀಪ್ ಅವರು, ಈಗ ತಮ್ಮ ಸಿನಿಮಾದ ಎಷ್ಟು ಪೈರಸಿ ಲಿಂಕ್ ಲೀಕ್ ಆಗಿವೆ ಅನ್ನೋ ಸ್ಫೋಟಕ ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ ಈ ಪೈರಸಿ ಎಂಬುದು ಒಂದು ಭೂತದಂತೆ ಕಾಡುತ್ತಿದೆ, ಯಾವುದೇ ನಟ & ನಟಿಯರ ಸಿನಿಮಾ ಆಗಿದ್ದರೂ ತಕ್ಷಣ ಆನ್‌ಲೈನ್ ಮೂಲಕ ಎಲ್ಲರ ಕೈಗೆ ಸಿಗುತ್ತಿದೆ ಎನ್ನುವ ಭಾರಿ ಗಂಭೀರ ಆರೋಪ ಇದೆ. ಬೆಳಗ್ಗೆ ರಿಲೀಸ್ ಆಗಿದ್ದ ಕನ್ನಡ ಸಿನಿಮಾ ಮಧ್ಯಾಹ್ನದ ಹೊತ್ತಿಗೆ ಪೈರಸಿ ಆಗಿ, ಕಳ್ಳದಾರಿ ಮೂಲಕ ಲಕ್ಷಾಂತರ ಜನರ ಮೊಬೈಲ್‌ಗೆ ತಲುಪುತ್ತಿರುವ ಆರೋಪ ಚರ್ಚೆಗೂ ವೇದಿಕೆ ಒದಗಿಸಿದೆ. ಅಲ್ಲದೆ ಕೋಟಿ ಕೋಟಿ ರೂಪಾಯಿ ಹಣ ಸುರಿದು, ವರ್ಷಗಟ್ಟಲೇ ಪರದಾಡಿ ಸಿನಿಮಾ ಮಾಡಿದ್ದ ನಿರ್ಮಾಪಕ, ನಿರ್ದೇಶಕ ಹಾಗೂ ನಟರಿಗೆ ಇದು ದೊಡ್ಡ ಹಾನಿ ಮಾಡುತ್ತಿದೆ ಎಂಬ ಆಕ್ರೋಶದ ಸಮಯದಲ್ಲೇ ಕಿಚ್ಚ ಸುದೀಪ್ ಅವರು ಪೈರಸಿಯ ಕರಾಳತೆ ಬಿಚ್ಚಿಟ್ಟಿದ್ದಾರೆ.

9,000 ಲಿಂಕ್ ಲೀಕ್ ಆಗಿದೆಯಂತೆ!
ಹೌದು, ನಟ ಸುದೀಪ್ ಅವರೇ ಇದೀಗ ಹೇಳಿರುವಂತೆ ಅವರ ಹೊಸ ಸಿನಿಮಾ ಮಾರ್ಕ್ ಚಿತ್ರಕ್ಕೆ ಸಂಬಂಧಿಸಿದಂತೆ ಸುಮಾರು 9,000ಕ್ಕೂ ಹೆಚ್ಚು ಲಿಂಕ್ ಲೀಕ್ ಆಗಿದೆಯಂತೆ. ಈ ಮೂಲಕ ತಮ್ಮ ಸಿನಿಮಾ ಸೋಲಿಗೆ ವ್ಯವಸ್ಥಿತವಾಗಿಯೇ ಷಡ್ಯಂತ್ರ ಮಾಡಲಾಗಿದೆ ಎಂಬುದನ್ನು ನಟ ಕಿಚ್ಚ ಸುದೀಪ್ ಅವರು ಈಗ ಬಿಚ್ಚಿಟ್ಟಿದ್ದಾರೆ.
ಅಲ್ಲದೆ ಇದೇ ಪೈರಸಿ ವಿರುದ್ಧ ನಾವು ಯುದ್ಧ ಸಾರಿದ್ದು, ಆದರೆ ಕೆಲವರು ಇದಕ್ಕೆ ಬೇರೆ ಅರ್ಥ ಕೊಟ್ಟರು. ಈಗ ಎಲ್ಲರಿಗೂ ಅರ್ಥ ಆಗಿರುತ್ತೆ ಪೈರಸಿ ಅಂದ್ರೆ ಎಷ್ಟು ಕಂಟಕ ಅಂತಾ ಎಂದು ನಟ ಸುದೀಪ್ ಅವರು ತಿಳಿಸಿದ್ದಾರೆ. ಇದೀಗ ಸುದೀಪ್ ಅವರ ಮಾತುಗಳು ವೈರಲ್ ಆಗುತ್ತಿದ್ದು, ಅದರ ಲಿಂಕ್ ಇಲ್ಲಿದೆ ನೀವೇ ಕೇಳಿ.
7 ಕೋಟಿ ಕನ್ನಡಿಗರ ಮಹದಾಸೆ ಏನು?
ಕನ್ನಡಿಗರು ಕಟ್ಟಿ ಬೆಳೆಸಿರುವ ಕನ್ನಡ ಸಿನಿಮಾ ರಂಗ ಉಳಿಯಬೇಕು & ಬೆಳೆಯಬೇಕು ಅನ್ನೋದೆ 7 ಕೋಟಿ ಕನ್ನಡಿಗರ ಮಹದಾಸೆ. ಸಿನಿಮಾ ಯಾವುದೇ ನಟರದ್ದು ಆಗಿರಲಿ, ಅದು ನಟ ದರ್ಶನ್ ಅವರದ್ದೋ, ನಟ ಸುದೀಪ್ ಅವರದ್ದೋ, ನಟ ಶಿವರಾಜ್‌ಕುಮಾರ್ ಅವರದ್ಧೋ, ನಟ ಉಪೇಂದ್ರ ಅವರದ್ದೋ... ಹೀಗೆ ಯಾರದ್ದೇ ಸಿನಿಮಾ ಆಗಿದ್ದರೂ ಅದು ಮೊದಲಿಗೆ ಕನ್ನಡ ಸಿನಿಮಾ. ಈ ಕಾರಣಕ್ಕೆ ಪೈರಸಿ ವಿರುದ್ಧ ನಾವು ಸಮರ ಸಾರಿ ಕನ್ನಡ ಸಿನಿಮಾಗಳನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಈಗ ಕನ್ನಡ ಸಿನಿಮಾ ಅಭಿಮಾನಿಗಳು ಪ್ರತಿಪಾದಿಸುತ್ತಿದ್ದಾರೆ.












Click it and Unblock the Notifications