Darshan Thoogudeepa: ದರ್ಶನ್ ತೂಗುದೀಪ್ ಅಭಿಮಾನಿಗಳ ಮೇಲೆ ಪೊಲೀಸ್ ಪಡೆಯಿಂದ ಲಾಠಿ ಚಾರ್ಜ್!
ದರ್ಶನ್ ತೂಗುದೀಪ್ ಅವರು ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿದ್ದಾರೆ. ಅಭಿಮಾನ ಎನ್ನುವುದು ಒಳ್ಳೆಯದು, ಆದರೆ ಅದೇ ಅಭಿಮಾನ ಮಿತಿ ಮೀರಿದರೆ ಏನಾಗುತ್ತದೆ? ಎಂಬುದಕ್ಕೆ ಇಂದು ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ. ದರ್ಶನ್ ತೂಗುದೀಪ್ ಅವರು ಅಭಿನಯ ಮಾಡಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದ 'ಕರಿಯ' ಸಿನಿಮಾ ಇಂದು ರೀ ರಿಲೀಸ್ ಆಗಿತ್ತು. ಹೀಗೆ ಥಿಯೇಟರ್ ಸ್ಕ್ರೀನ್ ಮೇಲೆ & ಥಿಯೇಟರ್ ಹೊರಗಡೆಯೂ ಸಂಭ್ರಮ ಮೊಳಗಿರುವಾಗ ಕೆಲವು ಅಭಿಮಾನಿಗಳ ಅತಿರೇಕ ಎಂತಹ ಕೆಟ್ಟ ಪರಿಸ್ಥಿತಿ ತಂದಿತ್ತು ಗೊತ್ತಾ?
ದರ್ಶನ್ ತೂಗುದೀಪ್ ಇದೀಗ ಬಳ್ಳಾರಿ ಜೈಲು ಸೇರಿದ ನಂತರ ಮತ್ತೊಂದು ರೀತಿ ತಿಕ್ಕಾಟವು ಶುರುವಾಗಿದೆ. ಅದರಲ್ಲೂ ನ್ಯೂಸ್ ಚಾನೆಲ್‌ಗಳ ವಿರುದ್ಧ ದರ್ಶನ್ ತೂಗುದೀಪ್ ಅಭಿಮಾನಿ ಬಳಗ ಆಕ್ರೋಶ ಹೊರ ಹಾಕುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದೆ. ಇದು ಸಾಲದು ಎನ್ನುವಂತೆ ಇವತ್ತು ಬ್ಯಾನರ್ ಕೂಡ ಮಾಡಿ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಆದರೆ ಹೀಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಲು ಒಂದು ಮಾರ್ಗ ಇರುತ್ತದೆ, ಒಂದು ಗಡಿ ಇರುತ್ತದೆ. ಅದನ್ನು ಮೀರಿ ವರ್ತಿಸಿದ ಕೆಲವು ಅಭಿಮಾನಿಗಳಿಂದ ಇವತ್ತು ಚಿತ್ರಮಂದಿರದ ಮುಂದೆ ದೊಡ್ಡ ಗಲಾಟೆಯೇ ಶುರುವಾಗಿತ್ತು.

ಕುಡಿದು ಬಂದ ಕೆಲವರಿಂದ ಗಲಾಟೆ?
'ಕರಿಯ' ಸಿನಿಮಾ ಪ್ರದರ್ಶನಕ್ಕೆ ಮೊದಲೇ ಕಿರಿಕ್ ಶುರುವಾಗಿತ್ತು. ಆಗ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗಕ್ಕೆ ಪೊಲೀಸರು ನೇರ ಎಚ್ಚರಿಕೆ ನೀಡಿ, ಯಾವುದೇ ನಿಯಮ ಮೀರುವ ಹಾಗೂ ಬೇರೆಯವರಿಗೆ ತೊಂದರೆ ನೀಡುವ ಕೆಲಸ ಮಾಡಬೇಡಿ ಎಂದು ವಾರ್ನ್ ಮಾಡಿದ್ದರು. ಹೀಗೆ ಎಚ್ಚರಿಕೆ ನೀಡಿದ್ದರೂ ಅದನ್ನ ಪಾಲಿಸದ ಕೆಲವರು ಗಲಾಟೆಯನ್ನ ಶುರು ಮಾಡಿಬಿಟ್ಟರು.
ಅದ್ರಲ್ಲೂ ಮಾಧ್ಯಮಗಳ ಬಗ್ಗೆ ದರ್ಶನ್ ತೂಗುದೀಪ್ ಅವರ ಕೆಲವು ಫ್ಯಾನ್ಸ್ ಬಾಯಿಗೆ ಬಂದ ರೀತಿ ಮಾತನಾಡ್ತಾ, ಗಲಾಟೆ ಶುರು ಮಾಡಿದ್ದರು ಎನ್ನಲಾಗಿದೆ. ಮತ್ತೊಂದು ಕಡೆಯಲ್ಲಿ ಮದ್ಯ ಸೇವನೆ ಅಂದ್ರೆ ಎಣ್ಣೆ ಹೊಡೆದು ಬಂದ ಕೆಲವರು ವ್ಯತಿರಿಕ್ತವಾಗಿ ವರ್ತಿಸಿದರು ಎಂದು ಆರೋಪ ಮಾಡಲಾಗಿದೆ. ಈ ಸಮಯದಲ್ಲಿ ಥಿಯೇಟರ್ ಎದುರು ಭದ್ರತೆಗೆ ಅಂತಾ ನಿಯೋಜನೆ ಆಗಿದ್ದ ಪೊಲೀಸರು ಲಾಠಿಗೆ ಕೆಲಸ ಕೊಟ್ಟರು.
ಪ್ರತಿಭಟನೆ ಮಾಡಲು ದಾರಿ ಇದೆ...
ಒಟ್ನಲ್ಲಿ ಇದೇಲ್ಲಾ ಏನೇ ಇರಲಿ, ಪ್ರಜಾಪ್ರಭುತ್ವದ ದೇಶದಲ್ಲಿ ಬದುಕುವಾಗ ಅದಕ್ಕೆ ಅದರದ್ದೇ ಮೌಲ್ಯ ಇರುತ್ತದೆ ಎಂಬುದನ್ನ ಅರಿತುಕೊಳ್ಳಬೇಕು. ಯಾಕೆ ಅಂದ್ರೆ ಮಾಧ್ಯಮಗಳು ಕೂಡ ಪ್ರಜಾಪ್ರಭುತ್ವದ ಒಂದು ಅಂಗ. ಪ್ರಜಾಪ್ರಭುತ್ವದ 4ನೇ ಅಂಗ ಎಂದು, ಮಾಧ್ಯಮಗಳನ್ನು ಕರೆಯಲಾಗುತ್ತದೆ. ಹೀಗಿದ್ದಾಗ ಮಾಧ್ಯಮಗಳ ವರದಿ ತಪ್ಪಾಗಿದ್ದರೆ ಅದನ್ನ ವಿರೋಧಿಸಲು & ಅದರ ಬಗ್ಗೆ ಪ್ರತಿಭಟಿಸಲು ಕಾನೂನು ರೀತಿಯ ಹಾದಿ ಇರುತ್ತದೆ. ಆದರೆ ಹೀಗೆಲ್ಲಾ ಮಾನ ಹರಾಜು ಆಗುವಂತೆ ಮಾತನಾಡುವುದು, ಕೆಟ್ಟ ಭಾಷೆ ಬಳಸಿ ಬೈಯುವುದು ಸರಿಯಲ್ಲ ಎಂಬ ಮಾತನ್ನು ಇದೀಗ ಕನ್ನಡಿಗರು ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಜೋರಾಗಿದೆ.












Click it and Unblock the Notifications