CCL 2025: ಪಂಜಾಬ್ ವಿರುದ್ಧ ರೋಚಕ ಸೋಲು ಕಂಡರೂ ಸೆಮಿಫೈನಲ್ ತಲುಪಿದ ಕರ್ನಾಟಕ ಬುಲ್ಡೋಜರ್ಸ್
ಸೂರತ್‌ನಲ್ಲಿ ನಡೆದ ಸಿಸಿಎಲ್ 2025ರ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪಂಜಾಬ್ ದಿ ಶೇರ್ ವಿರುದ್ಧ 2 ರನ್‌ಗಳಿಂದ ರೋಚಕ ಸೋಲನುಭವಿಸಿದೆ. ಕೊನೆಯ ಪಂದ್ಯ ಸೋತರೂ ಮೂರು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್‌ನಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಟಾಸ್ ಗೆದ್ದ ಪಂಜಾಬ್ ದಿ ಶೇರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 121 ರನ್ ಕಲೆಹಾಕಿತು. ಬಬ್ಬಲ್ ರೈ 20 ಎಸೆತಗಳಲ್ಲಿ 38 ರನ್ ಗಳಿಸಿದರೆ, ರಾಹುಲ್ ಜೈಟ್ಲಿ 7 ಎಸೆತಗಳಲ್ಲಿ 18 ರನ್ ಗಳಿಸಿದರು. ನಿಂಜಾ 17 ರನ್ ಗಳಿಸಿದರೆ, ನಾಯಕ ಅನುಜ್ ಖುರಾನ 8 ಎಸೆತಗಳಲ್ಲಿ 21 ರನ್ ಗಳಿಸುವ ಮೂಲಕ ಪಂಜಾಬ್ ದಿ ಶೇರ್ ದೊಡ್ಡ ಮೊತ್ತ ಗಳಿಸಲು ಸಹಾಯ ಮಾಡಿದರು. ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್ ಬೌಲಿಂಗ್‌ನಲ್ಲಿ ಅಶಿಸ್ತು ತೋರಿದರು ಬರೋಬ್ಬರಿ 21 ಇತರೆ ರನ್ ಬಿಟ್ಟುಕೊಟ್ಟಿದ್ದು ತಂಡಕ್ಕೆ ದುಬಾರಿಯಾಯಿತು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 91 ರನ್ ಕಲೆಹಾಕುವ ಮೂಲಕ 30 ರನ್‌ಗಳ ಹಿನ್ನಡೆ ಅನುಭವಿಸಿತು. ರಾಜೀವ್ ಹನು 26 ಎಸೆತಗಳಲ್ಲಿ 40 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಸ್ಫೋಟಕ ಇನ್ನಿಂಗ್ಸ್ ಬರಲಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಪಂಜಾಬ್ ದಿ ಶೇರ್ ತಂಡವನ್ನು 94 ರನ್‌ಗಳಿಗೆ ಕಟ್ಟಿಹಾಕಿತು. ರಾಜೀವ್ ಹನು, ಗೋಲ್ಡನ್ ಸ್ಟಾರ್ ಗಣೇಶ್, ಸುನೀಲ್ ರಾವ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಪಂಜಾಬ್ 10 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 94 ರನ್ ಕಲೆಹಾಕಿತು.
125 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಫೋಟಕ ಆರಂಭ ಪಡೆಯಿತು. ಮಂಜುನಾಥ್ ಗೌಡ 7 ಎಸೆತಗಳಲ್ಲಿ 15 ರನ್ ಗಳಿಸಿದರೆ, ಡಾರ್ಲಿಂಗ್ ಕೃಷ್ಣ 26 ಎಸೆತಗಳಲ್ಲಿ 42 ರನ್ ಗಳಿಸಿದರು. ಕಿಚ್ಚ ಸುದೀಪ್ ರನ್ ಗಳಿಸುವ ಮುನ್ನವೇ ರನೌಟ್ ಆದರು.
ರಾಜೀವ್ ಹನು 9 ಎಸೆತಗಳಲ್ಲೇ 24 ರನ್ ಗಳಿಸಿ ಮಿಂಚಿದರು. ಕೊನೆಯ ಓವರ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಗೆಲುವಿಗೆ ಕೇವಲ 7 ರನ್ ಬೇಕಿತ್ತು, ಆದರೆ ಕರಣ್ ಆರ್ಯನ್ ಸುಲಭವಾಗಿ ರನ್ ಓಡುವ ಅವಕಾಶವಿದ್ದರೂ ಓಡಲು ನಿರಾಕರಿಸಿದ್ದು ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿತು. ಮೂರು ಎಸೆತಗಳಲ್ಲಿ ಮೂರು ವಿಕೆಟ್ ಕಳೆದುಕೊಂಡ ಕರ್ನಾಟಕ ಕೊನೆಗೆ 2 ರನ್‌ಗಳಿಂದ ಸೋಲಿ ಕಂಡಿತು.












Click it and Unblock the Notifications