CCL 2025: ಕರ್ನಾಟಕ ಬುಲ್ಡೋಜರ್ಸ್ ಟ್ರೋಫಿ ಕನಸು ಭಗ್ನ
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2025ರ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗುವ ಕರ್ನಾಟಕ ಬುಲ್ಡೋಜರ್ಸ್ ಕನಸು ಭಗ್ನಗೊಂಡಿದೆ. ಶನಿವಾರ ಮೈಸೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಚೆನ್ನೈ ರ್‍ಹಿನೋಸ್ ಎದುರು ಸೋಲು ಕಂಡಿದ್ದು, ಪಂದ್ಯಾವಳಿಯಿಂದ ಹೊರಬಿದ್ದಿದೆ. ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಕರ್ನಾಟಕ ಬುಲ್ಡೋಜರ್ಸ್ ಈ ಬಾರಿ ಸೆಮಿಫೈನಲ್‌ನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ.
ಟಾಸ್ ಗೆದ್ದ ಚೆನ್ನೈ ರ್‍ಹಿನೋಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿತು. ರಾಜೀವ್ ಹನು 28 ಎಸೆತಗಳಲ್ಲಿ 53 ರನ್ ಗಳಿಸಿ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

ಬಳಿಕ ಬ್ಯಾಟಿಂಗ್ ಮಾಡಿದ ಚೆನ್ನೈ ರ್‍ಹಿನೋಸ್ 10 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 105 ರನ್ ಗಳಿಸುವ ಮೂಲಕ 6 ರನ್‌ಗಳ ಹಿನ್ನಡೆ ಅನುಭವಿಸಿತು. ನಾಯಕ ವಿಕ್ರಾಂತ್ 34 ಎಸೆತಗಳಲ್ಲಿ ಅಜೇಯ 65 ರನ್ ಗಳಿಸುವ ಮೂಲಕ ಏಕಾಂಗಿ ಹೋರಾಟ ನೀಡಿದರು.
6 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 123 ರನ್ ಕಲೆಹಾಕಿತು. ಈ ಮೂಲಕ ಒಟ್ಟಾರೆ 129 ರನ್‌ಗಳ ಮುನ್ನಡೆ ಸಾಧಿಸಿತು. ನಾಯಕ ಸುದೀಪ್ 14 ಎಸೆತಗಳಲ್ಲಿ 23 ರನ್ ಗಳಿಸಿದರೆ, ಜಯರಾಮ್ ಕಾರ್ತಿಕ್ 26 ರನ್ ಗಳಿಸಿದರು. ಡಾರ್ಲಿಂಗ್ ಕೃಷ್ಣ 12 ಎಸೆತಗಳಲ್ಲಿ 28 ರನ್ ಗಳಿಸಿದರೆ, ಮಂಜುನಾಥ್ ಗೌಡ 11 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 35 ರನ್ ಗಳಿಸಿದರು.
130 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ರ್‍ಹಿನೋಸ್ ಮೊದಲ ಎರಡು ಎಸೆತಗಳಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 26 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ವಿಕ್ರಾಂತ್ ಮತ್ತು ಅಜಯ್ ನಾಲ್ಕನೇ ವಿಕೆಟ್‌ಗೆ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಕರ್ನಾಟಕ ಗೆಲುವನ್ನು ಕಸಿದುಕೊಂಡರು.
ಅಜಯ್ 30 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 65 ರನ್ ಗಳಿಸಿದರೆ, ವಿಕ್ರಾಂತ್ 22 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 50 ರನ್ ಗಳಿಸಿದರು. ಈ ಬಾರಿ ಪ್ರಶಸ್ತಿ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿದ್ದ ಅಭಿಮಾನಿಗಳಿಗೆ ಈ ಸೋಲು ನಿರಾಸೆ ತಂದಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟ ನೋಡಲು ಮೈಸೂರು ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಸೋಲು ನಿರಾಸೆ ತಂದರು, ನೆಚ್ಚಿನ ನಟರನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟರು.












Click it and Unblock the Notifications