ವಿಜಯ್ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರುನಾಡ ಬೆಡಗಿ ಯಾರು ಗೊತ್ತಾ?
ತಮಿಳು ನಟ ದಳಪತಿ ವಿಜಯ್ ಅವರ ಚಿತ್ರರಂಗಕ್ಕೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ತುಂಬಾ ಬೇಸರವುಂಟು ಮಾಡಿರುವ ವಿಚಾರ. ಆದರೆ, ಕೊನೆಯದಾಗಿ ಒಂದು ಸಿನಿಮಾ ಮಾಡುವುದಾಗಿ ವಿಜಯ್ ಘೋಷಿಸಿದ್ದು, ಈ ಸಿನಿಮಾದ ಮೇಲೆ ಎಲ್ಲರ ಚಿತ್ತವಿದೆ. ಇನ್ನು ವಿಜಯ್ ಕೊನೆಯ ಸಿನಿಮಾದಲ್ಲಿ ನಾಯಕಿ ಯಾರಾಗಬಹುದು? ಎನ್ನುವ ಕುತೂಹಲ ಕೂಡ ಇತ್ತು.
ಈ ಗೊಂದಲಗಳಿಗೆ ಇಂದು ತೆರೆಬಿದ್ದಿದ್ದು, ವಿಜಯ್ ಕೊನೇ ಸಿನಿಮಾದಲ್ಲಿ ನಮ್ಮ ಕರುನಾಡಿನ ಬೆಡಗಿಯೇ ನಾಯಕಿಯಾಗಿ ನಟಿಸಲಿದ್ದಾರೆ. ಹೌದು ಕರಾವಳಿ ಬೆಡಗಿ ಪೂಜಾ ಹೆಗ್ಡೆ ಅವರೇ ವಿಜಯ್ ಅವರ ಕೊನೆ ಸಿನಿಮಾದ ನಾಯಕಿ ಎಂದು ಅಧಿಕೃತ ಘೋಷಣೆಯಾಗಿದೆ.

ಸದ್ಯಕ್ಕೆ ಈ ಸಿನಿಮಾಗೆ ದಳಪತಿ 69 ಎನ್ನುವ ಶೀರ್ಷಿಕೆ ಇಡಲಾಗಿದ್ದು, ಈ ಸಿನಿಮಾದ ಮೂಲಕ ವಿಜಯ್ ತಮ್ಮ ಸಿನಿ ಕೆರಿಯರ್‌ಗೆ ವಿದಾಯ ಹೇಳಲು ಮುಂದಾಗಿದ್ದಾರೆ. ಜನಪ್ರಿಯ ನಿರ್ದೇಶಕ ಎಚ್.ವಿನೋದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಈ ಹಿಂದೆಯೂ ಪೂಜಾ ಹೆಗ್ಡೆ ವಿಜಯ್ ಜೊತೆಗೆ ನಟಿಸಿದ್ದರು. ಬೀಸ್ಟ್ ಸಿನಿಮಾದಲ್ಲಿ ಈಗಾಗಲೇ ವಿಜಯ್ ಜೊತೆ ತೆರೆ ಹಂಚಿಕೊಂಡಿರುವ ಪೂಜಾ ಮತ್ತೊಮ್ಮೆ ಅವಕಾಶ ಗಿಟ್ಟಿಸಿಕೊಂಡಿರುವುದು ವಿಶೇಷ. ಬೀಸ್ಟ್ ಸಿನಿಮಾದ ಹಲಮೀತಿ ಹಬೀಬೋ ಎನ್ನುವ ಸಾಂಗ್ ಹಾಗೂ ಸ್ಟೆಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ಈಗ ವಿಜಯ್ ಕೊನೆಯ ಸಿನಿಮಾ ಆಗಿರುವುದರಿಂದ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಈ ಚಿತ್ರಕ್ಕೆ ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರೇ ಮೋಡಿ ಮಾಡಲಿದ್ದಾರೆ. ಪೂಜಾ ಹೆಗ್ಡೆ ಜೊತೆಗೆ ಬಾಲಿವುಡ್‌ನ ಬಾಬಿ ಡಿಯೋಲ್, ಪ್ರಕಾಶ್ ರಾಜ್ ಸೇರಿದಂತೆ ಇನ್ನೂ ಹಲವರು ಈ ಸಿನಿಮಾದಲ್ಲಿದ್ದಾರೆ. ಪಾತ್ರಗಳ ಬಗ್ಗೆ ಕೆವಿಎನ್ ಪ್ರೊಡಕ್ಷನ್ ಅಪ್ಡೇಟ್ ನೀಡುತ್ತಲೇ ಇದ್ದು, ಇನ್ನಷ್ಟು ಮಂದಿಯ ಹೆಸರು ರಿವೀಲ್ ಆಗಲಿದೆ.
ನಟ ವಿಜಯ್ ಫೆಬ್ರವರಿಯಲ್ಲೇ ತಮ್ಮ ಪಕ್ಷ ಶುರು ಮಾಡುವುದಾಗಿ ಘೋಷಿಸಿದ್ದರು. ಅದರಂತೆ ವಿಜಯ್ ಟಿವಿಕೆ ಪಕ್ಷವನ್ನು ಪ್ರಾರಂಭಿಸುವುದಾಗಿ ಮಾಹಿತಿ ನೀಡಿದ್ದರು. ಪಾರದರ್ಶಕ, ಜಾತಿ ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ರಾಜಕೀಯ ಬದಲಾವಣೆಯೆ ನಮ್ಮ ಉದ್ದೇಶ ಎಂದು ವಿಜಯ್ ಹೇಳಿಕೊಂಡಿದ್ದರು.
ತಮಿಳುನಾಡು ವಿಧಾನಸಭೆಗೆ 2026ರಲ್ಲಿ ನಡೆಯುವ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಸ್ಪರ್ಧಿಸಲಿದೆ. ಈಗಾಗಲೇ ಪಕ್ಷದ ಧ್ವಜ ಕೂಡ ರಿವೀಲ್ ಮಾಡಿರುವ ಅವರಿಗೆ ಆನೆಯ ಚಿಹ್ನೆಯಿಂದ ಸಂಕಷ್ಟ ಎದುರಾಗಿತ್ತು. ಕೊನೆಗೆ ಅದರಲ್ಲೂ ವಿಜಯ್ ಗೆದ್ದಿದ್ದಾರೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಮ್ಮ ಗುರಿ ಎಂದು ವಿಜಯ್ ಹಲವು ಬಾರಿ ಹೇಳಿದ್ದಾರೆ. ಈ ವಿಚಾರವಾಗಿ ವಿಜಯ್ ಅಭಿಮಾನಿಗಳು ಕಣ್ಣೀರು ಹಾಕಿದ್ದೂ ಉಂಟು. ತೆರೆಮೇಲೆ ಇನ್ಮುಂದೆ ನೆಚ್ಚಿನ ನಟನನ್ನು ನೋಡಲು ಆಗುವುದಿಲ್ಲವಲ್ಲಾ? ಎಂದು ಬೇಸರ ಕೂಡ ವ್ಯಕ್ತಡಿಸುತ್ತಿದ್ದಾರೆ.












Click it and Unblock the Notifications