Kantara Chapter 1: ಕಾಂತಾರ ಚಿತ್ರತಂಡದ ವಿರುದ್ಧ ತನಿಖೆಗೆ ಆದೇಶ: ಅಷ್ಟಕ್ಕೂ ಆಗಿದ್ದೇನು?
ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಯಶಸ್ವಿನ ಬಳಿಕ ಕಾಂತಾರ ಚಾಪ್ಟರ್ 1 ಸಿನಿಮಾ ಮಾಡುತ್ತಿರುವುದು ಸದ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿರುವ ಕಾಂತಾರ ಚಾಪ್ಟರ್ 1 ಅಕ್ಟೋಬರ್ 2ರಂದು ತೆರೆ ಕಾಣಲಿದೆ. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಕಾಂತಾರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರತಂಡ ಮಾಡಿರುವ ಯಡವಟ್ಟಿನಿಂದ ಸಂಕಷ್ಟ ಎದುರಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೆರೂರು ಗ್ರಾಮದ ಬಳಿ ಕಾಂತಾರ ಚಾಪ್ಟರ್ 1 ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ಚಿತ್ರೀಕರಣದ ನೆಪದಲ್ಲಿ ಅರಣ್ಯಕ್ಕೆ ಹಾನಿಯುಂಟು ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಚಿತ್ರತಂಡ ಸಿನಿಮಾದ ಚಿತ್ರೀಕರಣಕ್ಕಾಗಿ ಗೋಮಾಳ ಜಾಗವನ್ನು ಪರವಾನಿಗೆ ಪಡೆದುಕೊಂಡಿದ್ದು, ಅರಣ್ಯ ಜಾಗದಲ್ಲಿ ಮರಗಳನ್ನು ಕಡಿದು, ಸ್ಫೋಟಕಗಳನ್ನು ಬಳಸಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಅಲ್ಲದೇ ಈ ಭಾಗದಲ್ಲಿ ಇರುವ ವನ್ಯಜೀವಿಗಳಿಗೆ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ವನ್ಯಜೀವಿಗಳಿಗೆ ಹಾನಿಯಾಗಿದ್ದಲ್ಲಿ ಚಿತ್ರೀಕರಣ ನಿಲ್ಲಿಸುವಂತೆ ಸ್ಥಳೀಯ ಅರಣ್ಯಾಧಿಕಾರಿಗಳಿಗಳಿಗೆ ಆದೇಶ ಹೊರಡಿಸಿದ್ದಾರೆ. ಕಾಂತಾರ ( ಚಾಪ್ಟರ್ 1) ಚಿತ್ರೀಕರಣಕ್ಕೆ ನೀಡಿದ ಅನುಮತಿ ದುರುಪಯೋಗ ಆರೋಪ ಅಥವಾ ಸ್ಫೋಟಕ ಬಳಸಿರುವ ಬಗ್ಗೆ ಅಸಲಿ ವಿಚಾರ ಪರಿಶೀಲನೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಆದೇಶ ಹೊರಡಿಸಿದ್ದಾರೆ.
ಸಚಿವರ ಆದೇಶದಲ್ಲಿರುವುದೇನು?
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತೆ ಬಳಿ ಇರುವ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಜನವರಿ 3ರಿಂದ ಜನವರಿ 25ರವರೆಗೆ ಕಾಂತಾರಾ ಚಾಪ್ಟರ್ 1 ಚಿತ್ರೀಕರಣಕ್ಕೆ ಷರತ್ತುಬದ್ಧ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಕಾಂತಾರಾ ತಂಡ ಕಾಡಿನಂಚಿನ ಪರಿಭಾವಿತ ಅರಣ್ಯ ಪ್ರದೇಶದ ಬಳಿ ನಡೆಸುತ್ತಿರುವ ಚಿತ್ರೀಕರಣದ ವೇಳೆ ಸ್ಫೋಟಕ ಬಳಸುತ್ತಿದ್ದು. ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿರುತ್ತದೆ. ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ. ಒಂದೊಮ್ಮೆ ಚಿತ್ರತಂಡದಿಂದ ಷರತ್ತುಗಳ ಉಲ್ಲಂಘನೆಯಾಗಿ, ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಯಾವುದೇ ಹಾನಿ ಆಗಿದ್ದಲ್ಲಿ ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲು ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.











Click it and Unblock the Notifications