Ayodhya: ಕನ್ನಡ ಕಿರುತೆರೆಯಲ್ಲಿ ಮೊದಲ ಪ್ರಯೋಗ: ಅಯೋಧ್ಯೆ ರಾಮಮಂದಿರದಲ್ಲಿ ಈ ಧಾರಾವಾಹಿ ತಂಡ
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಒಂದಕ್ಕಿಂತ ಒಂದು ಉತ್ತಮ ಧಾರಾವಾಹಿಗಳು ಬರುತ್ತಿದ್ದು, ವೀಕ್ಷಕರನ್ನು ಸೆಳೆಯಲು ಧಾರಾವಾಹಿ ತಂಡ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ವಿಭಿನ್ನವಾದ ಕಥೆ, ಪ್ರೇಕ್ಷಕರಿಗೆ ಪ್ರಿಯವಾಗುವ ನಟ-ನಟಿಯರು, ವಿಶೇಷ ಸಂಚಿಕೆಗಳು, ಮಹಾ ಸಂಚಿಕೆಗಳು, ಎರಡು ಧಾರಾವಾಹಿಗಳ ಸಮ್ಮಿಲನ, ವಿಶೇಷ ಸ್ಥಳಗಳಲ್ಲಿ ಚಿತ್ರೀಕರಣ ಹೀಗೆ ಒಂದಾದ ಮೇಲೊಂದು ಹೊಸ ಪ್ರಯತ್ನ ಮಾಡುತ್ತಿದ್ದಾರೆ.
ರಿಯಾಲಿಟಿ ಶೋಗಳ ಅಬ್ಬರದ ನಡುವೆ ಧಾರಾವಾಹಿಗಳು ಕೂಡ ಅತ್ಯಾಕರ್ಷಕವಾಗಿ ಮೂಡಿ ಬರುತ್ತಿದ್ದು, ಕಿರುತೆರೆ ಪ್ರೇಕ್ಷಕರಿಗೆ ಪ್ರತಿ ದಿನವೂ ಹಬ್ಬದೂಟ. ಹೀಗಾಗಿ ಟಿಆರ್‌ಪಿ ಜಿದ್ದಾಜಿದ್ದಿಯಲ್ಲಿ ಅನೇಕ ಧಾರಾವಾಹಿಗಳಿದ್ದು, ಮೊದಲಿನಂತೆ ಒಂದೇ ಧಾರಾವಾಹಿ ಹೆಚ್ಚಿನ ಟಿಆರ್‌ಪಿ ಗಳಿಸುತ್ತಿಲ್ಲ, ಬದಲಿಗೆ ಟಿಆರ್‌ಪಿ ಪಟ್ಟಿಯಲ್ಲಿ ಧಾರಾವಾಹಿಗಳ ಹೆಸರು ಬದಲಾಗುತ್ತಲೇ ಇರುತ್ತದೆ. ಇದಕ್ಕೆ ಧಾರಾವಾಹಿ ತಂಡದ ವಿಭಿನ್ನ ಪ್ರಯತ್ನ ಹಾಗೂ ಶ್ರಮವೇ ಕಾರಣ.

ಪ್ರತಿ ವಾಹಿನಿಯಲ್ಲೂ ಹೊಸತನ ತನದ ಧಾರಾವಾಹಿಗಳು ಬರುತ್ತಿದ್ದು, ಇದೀಗ ಖಾಸಗಿ ವಾಹಿನಿಯಲ್ಲಿ ಬರುವ ಧಾರಾವಾಹಿ ತಂಡ ವಿನೂತನ ಪ್ರಯತ್ನ ನಡೆಸಿದೆ. ಕನ್ನಡ ಕಿರುತೆರೆಯ ಕನ್ಯಾದಾನ ಧಾರಾವಾಹಿ ತಂಡವು, ಇತ್ತೀಚಿಗಷ್ಟೆ ಲೋಕಾರ್ಪಣೆಗೊಂಡ ದೇಶದ ಅತ್ಯುನ್ನತ ದೇವಸ್ಥಾನ ಅಯೋಧ್ಯೆಯ ಶ್ರೀರಾಮನ ಮಂದಿರದಲ್ಲಿ ಚಿತ್ರೀಕರಣ ಮಾಡುವ ಮೂಲಕ ಕಿರುತೆರೆಯಲ್ಲೇ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಕನ್ಯಾದಾನ ಧಾರಾವಾಹಿ ಇತ್ತೀಚಿಗೆ ಬಹಳ ವಿಶೇಷವಾಗಿ ಮೂಡಿ ಬರುತ್ತಿದ್ದು, ಧಾರಾವಾಹಿ ಚಿತ್ರೀಕರಣವನ್ನು ರಾಜ್ಯದ ವಿಶೇಷ ಧಾರ್ಮಿಕ ಸ್ಥಳಗಳಲ್ಲಿ ಚಿತ್ರೀಕರಿಸಿ ವಿಶೇಷವಾದ ಸಂಚಿಕೆಗಳ ಮೂಲಕ ಜನರನ್ನು ರಂಜಿಸಿತ್ತು. ಇದೀಗ ಅಯೋಧ್ಯೆಯ ಶ್ರೀರಾಮನ ಮಂದಿರದಲ್ಲಿ ಚಿತ್ರೀಕರಣ ಮಾಡುವ ಮೂಲಕ ಮತ್ತೊಂದು ಪ್ರಯೋಗ ಮಾಡಿದೆ. ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಪ್ರೋಮೋಗಳು ಈಗಾಗಲೇ ಪ್ರಸಾರವಾಗುತ್ತಿದೆ.
ಕನ್ಯಾದಾನ ಧಾರಾವಾಹಿಯ ರಾಮನವಮಿಯ ದಿನ ಈ ವಿಶೇಷವಾದ ಸಂಚಿಕೆ ಪ್ರಸಾರವಾಗಲಿದೆ. ಅಂದು ಈ ಧಾರಾವಾಹಿಯ ತಂಡ ಅಯೋಧ್ಯೆಯ ಭವ್ಯತೆಯನ್ನು ಹಾಗೂ ಐತಿಹಾಸಿಕ ಕ್ಷಣವನ್ನು ಕಿರುತೆರೆ ಪ್ರೇಕ್ಷಕರಿಗೆ ತೋರಿಸಲಿದೆ. ಈ ವಿಶೇಷ ಸಂಚಿಕೆಯನ್ನು ವೀಕ್ಷಿಸಲು ವೀಕ್ಷಕರು ಕೂಡ ಕಾತುರರಾಗಿದ್ದಾರೆ.ಕನ್ಯಾದಾನ ಐದು ಹೆಣ್ಣು ಮಕ್ಕಳು ಹಾಗೂ ತಂದೆಯ ಬಾಂಧವ್ಯದ ಬಗ್ಗೆ ವಿಶೇಷವಾದಂತಹ ಕತೆ ಹೊಂದಿರುವ ಧಾರಾವಾಹಿಯಾಗಿದೆ.












Click it and Unblock the Notifications