Actress Nandini: ಕನ್ನಡ ಕಿರುತೆರೆಯ ನಟಿ ನಂದಿನಿ ಆತ್ಮಹತ್ಯೆ: ಬದುಕು ದುರಂತ ಅಂತ್ಯ
ಬೆಂಗಳೂರು: ಕನ್ನಡದ ಕಿರುತೆರೆಯಲ್ಲಿ ತಮ್ಮ ನಟನೆ ಮೂಲಕವೇ ಜನಪ್ರಿಯತೆ ಪಡೆದಿದ್ದ 'ಗೌರಿ' ಧಾರವಾಹಿ ಖ್ಯಾತಿಯ ನಟಿ ನಂದಿನಿ (Serial Actress Nandini) ಅವರು ಇಂದು ಸೋಮವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾಗಿದರು. ನಂದಿನಿ ಡೆತ್‌ನೋಟ್ ಬರೆದಿಟ್ಟು ಆರ್‌ಆರ್ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.
ಕನ್ನಡ ಹಾಗೂ ತಮಿಳು ಧಾರವಾಹಿಯಲ್ಲಿ ನಟಿಸಿ ಮನೆ ಮಾತಾಗಿದ್ದರು. ಕನ್ನಡದಲ್ಲಿ 'ಗೌರಿ' ಧಾರವಾಹಿಯಲ್ಲಿ ಅವರು ತಮ್ಮ ಪಾತ್ರದಿಂದಲೇ ಜನಪ್ರಿಯತೆ ಪಡೆದುಕೊಂಡಿದ್ದರು. ಕನ್ನಡದಲ್ಲಿ 'ಜೀವ ಹೂವಾಗಿದೆ, ನೀನಾದೆ ನಾ, ಸಂಘರ್ಷ, ಮಧುಮಗಳು' ಧಾರವಾಹಿಯಲ್ಲಿ ನಟಿಸಿದ್ದರು. ಬಣ್ಣದ ಲೋಕದಲ್ಲಿ ಅದ್ಭುತ ಯಶಸ್ಸು ಕಾಣಬೆಂಕೆಂದು ನಂದಿನಿ ಆಸೆ ಹೊಂದಿದ್ದರು. ಆದರೆ ಅವರ ಬದುಕು ಈ ಸಾವಿನೊಂದಿಗೆ ದುರಂತ ಅಂತ್ಯ ಕಂಡಿದೆ.

'ಗೌರಿ' ಧಾರವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದದ್ದ ನಂದಿನಿ ಅವರ ದುರ್ಗಾ ಹಾಗೂ ಕನಕ ಪಾತ್ರಗಳು ವೀಕ್ಷಕರಿಗೆ ಇಷ್ಟವಾಗಿದ್ದವು. ಅವರ ಈ ಸಾವಿನಿಂದ ಸ್ನೇಹಿತರು, ಧಾರವಾಹಿ ತಂಡಕ್ಕೆ, ಸಹ ಕಲಾವಿದರಿಗೆ ಆಘಾತ ಉಂಟಾಗಿದೆ.
ಪಿಜಿಯಲ್ಲಿ ವಾಸವಿದ್ದ ನಂದಿನಿ
ಮೂಲತಃ ಕೊಟ್ಟೂರಿನವರಾಗಿದ್ದ ನಂದಿನಿ ಬೆಂಗಳೂರಿನಲ್ಲಿ ಪಿಜಿಯಲ್ಲಿ ವಾಸ ಮಾಡುತ್ತಿದ್ದರು. ತಾಯಿಗೆ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಅವರು ಖಿನ್ನತೆಗೆ ಒಳಗಾಗಿದ್ದರು ಅಂತಲೂ ಹೇಳಲಾಗುತ್ತಿದೆ. ಸದ್ಯ ಅವರ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅದರ ವರದಿ ಬಳಿಕವೇ ಸತ್ಯಾಸತ್ಯತೆ ಗೊತ್ತಾಗಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕಿರುತೆರೆಯಲ್ಲಿ ಮಿಂಚಿ ಜನರಿಗೆ ಚಿರಪರಿಚಿತರಾಗಿದ್ದರು. ಇನ್ನೇನು ಅವರಿಗೆ ಬೇರೆ ಬೇರೆ ಸಿನಿಮಾಗಳಲ್ಲಿ ಅವಕಾಶ ಬರುವ ಸನ್ನಿವೇಶ ಸೃಷ್ಟಿಯಾಗಿತ್ತು. ಅವರು ಅಂದುಕೊಂಡ ಬಣ್ಣದ ಕನಸುಗಳು ನನಸಾಗಲು ದಾರಿ ಸಿಗುವ ಹೊತ್ತಿನಲ್ಲೇ ನಟಿಯು ನಿಧನರಾಗಿದ್ದು, ಅನೇಕರಿಗೆ ಅಚ್ಚರಿ ಉಂಟು ಮಾಡಿದೆ. ಸಹ ಕಲಾವಿದರು, ಸ್ನೇಹಿತರು ಮೃತ ನಂದಿನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.












Click it and Unblock the Notifications