Sunny Mahipal: ಕನ್ನಡ ಕಿರುತೆರೆ ನಟನಿಂದ ಪತ್ನಿ ಮೇಲೆ ಭೀಕರ ಹಲ್ಲೆ: ಅಷ್ಟಕ್ಕೂ ಆಗಿದ್ದೇನು..?
ಬೆಂಗಳೂರು, ಜುಲೈ 23: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸನ್ನಿ ಮಹಿಪಾಲ್ ಎನ್ನುವ ನಟ ಒಂದು ಮದುವೆ ಆಗಿ ಮತ್ತೊಂದು ನಿಶ್ಚಿತಾರ್ಥ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಅಲ್ಲದೇ ಇದನ್ನು ಪ್ರಶ್ನಿಸಲು ಬಂದ ಮೊದಲ ಪತ್ನಿಗೆ ಮನಬಂದಂತೆ ಥಳಿಸಿದ್ದು, ಆಕೆಯ ಕೈಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಪ್ರಸಾರವಾಗುತ್ತಿದ್ದ ನೇತ್ರಾವತಿ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದ ಸನ್ನಿ ಮಹಿಪಾಲ್ ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2024 ಜನವರಿಯಲ್ಲಿ ಸಂತ್ರಸ್ತ ಯುವತಿಗೆ ಸಾಮಾಜಿಕ ಜಾಲತಾಣದಿಂದ ಮಹಿಪಾಲ್ ಪರಿಚಯ ಆಗಿದೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಸ್ನೇಹ ಪ್ರೀತಿಯಾಗಿದೆ.

ಬಳಿಕ ಸನ್ನಿ ಮಹಿಪಾಲ್ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗೋದಾಗಿ ನಂಬಿಸಿದ್ದರು. ಅದೇ ಮಾತಿನಂತೆ ಜೂನ್ 15ರಂದು ಸನ್ನಿ ಮಹಿಪಾಲ್ ಜೊತೆಗೆ ಯುವತಿ ದೇವಸ್ಥಾನದಲ್ಲಿ ವಿವಾಹವಾಗಿದ್ದರಂತೆ. ಮದುವೆ ಬಳಿಕ ಯುವತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸನ್ನಿ ಮಹಿಪಾಲ್ ಪೋಷಕರನ್ನು ಒಪ್ಪಿಸಿ ಬರುವೆ ಎಂದು ಹೇಳಿ ಮನೆಗೆ ಹೋಗಿದ್ದಾರೆ.
ಕೆಲವೇ ದಿನಗಳ ಬಳಿಕ ಮಹಿಪಾಲ್ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸುದ್ದಿ ಮುಟ್ಟಿದ್ದು, ಇದರಿಂದ ಸಿಟ್ಟಿಗೆದ್ದ ಪತ್ನಿ ಜುಲೈ 22ರಂದು ರಾತ್ರಿ ವಿಜ್ಞಾನ ನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿದ್ದರು. ಅಲ್ಲದೇ ಆತನ ನಡೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಸನ್ನಿ ಮಹಿಪಾಲ್ ಪತ್ನಿಯ ತೋಳಿಗೆ ಚಾಕುವಿನಿಂದ ಇರಿದಂತೆ ಗಂಭೀರವಾದ ಗಾಯವಾಗಿದೆ ಅಲ್ಲದೇ ಗಲಾಟೆಯಲ್ಲಿ ಗರ್ಭಪಾತ ಆಗಿರುವುದಾಗಿ ಪತ್ನಿ ಆರೋಪ ಮಾಡಿದ್ದಾರೆ. ಇನ್ನು ಹೆಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕೂಡ ಸನ್ನಿ ಮಹಿಪಾಲ್ ವಿರುದ್ಧ ಆರೋಪ ಮಾಡಿದ ಯುವತಿಯ ನೆರವಿಗೆ ಬಂದಿಲ್ಲ ಎನ್ನುವ ಆರೋಪ ಕೂಡ ಕೇಳಿಬಂದಿದೆ.












Click it and Unblock the Notifications