Bank Janardhan: ಬಾರೋ ಬಾರೋ ಅಂತಿದ್ದರು ಅವರೇ ಹೋಗಿ ಬಿಟ್ರು- ಬ್ಯಾಂಕ್ ಜನಾರ್ದನ್ ನೆನೆದು ಟೆನ್ನಿಸ್ ಕೃಷ್ಣ ಭಾವುಕ
ಕನ್ನಡದ ಹಿರಿಯ ಕಲಾವಿದ ಬ್ಯಾಂಕ್ ಜನಾರ್ದನ್ ಇಂದು ಅನಾರೋಗ್ಯದಿಂದ ನಿಧನರಾದರು. ಮಧ್ಯರಾತ್ರಿ 2:30ರ ಸುಮಾರಿಗೆ ಬ್ಯಾಂಕ್ ಜನಾರ್ದನ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಜನಾರ್ದನ್ ಅವರು ತಮ್ಮದೇ ಆದ ಛಾಪು ಮೂಡಿದ ಧೀಮಂತ ನಟ. ಅವರ ನಿಧನಕ್ಕೆ ಇಡೀ ಚಂದನವನವೇ ಕಂಬನಿ ಬಿಡಿದಿದೆ. ಇದೀಗ ಅವರೊಂದಿಗಿನ ಒಡನಾಟವನ್ನು ನೆನೆದು ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾಗರೊಂದಿಗೆ ಮಾತನಾಡಿದ ಟೆನ್ನಿಸ್ ಕೃಷ್ಣ, 'ಬ್ಯಾಂಕ್ ಜನಾರ್ದನ್ ಅವರು ಸುಮಾರಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಡ ದೊಡ್ಡ ನಾಯಕ ನಟರ ಸಿನಿಮಾಗಳಲ್ಲಿ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮಿಬ್ಬರ ಕಾಂಬಿನೇಷನ್ ಅನ್ನು ಜನ ಮೆಚ್ಚಿಕೊಂಡಿದ್ದರು. ತುಂಬಾ ಅದ್ಭುತ ನಟರು. ಇವತ್ತು ಅವರನ್ನು ನಾವು ಕಳೆದುಕೊಂಡಿರುವುದು ತುಂಬಾ ನೋವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅವರಿಗೆ ತುಂಬಾ ವರ್ಷಗಳಿಂದ ಆರೋಗ್ಯ ಸಮಸ್ಯೆ ಇತ್ತು. ಇತ್ತೀಚೆಗೆ ಸ್ವಲ್ಪ ಚೇತರಿಸಿಕೊಂಡಿದ್ದರು. ಜಾಸ್ತಿ ಹೊತ್ತು ಕುಳಿತುಕೊಳ್ಳಲು ಆಗುತ್ತಿರಲ್ಲಿ ನಿಂತುಕೊಳ್ಳಲು ಅವರಿಗೆ ಆಗುತ್ತಿರಲಿಲ್ಲ. ಆ ಪರಿಸ್ಥಿತಿಯಲ್ಲಿ ನಾನು ಅವರನ್ನು ನೋಡಿದ್ದೆ. ಆಗಾಗ ನಾವಿಬ್ಬರೂ ದೂರವಾಣಿ ಕರೆ ಮೂಲಕ ಮಾತಾಡಿಕೊಂಡು ಇದ್ವಿ. ಹದಿನೈದು ದಿನದ ಹಿಂದೆ ನಾನು ಅವರೊಂದಿಗೆ ಮಾತನಾಡಿದ್ದೆ. ಹೇ ಬಾರೋ ಬಾರೋ ಅಂದಿದ್ದರು. ಆದರೆ ಈಗ ಹೋಗಬೇಕು ಅಂದಾಗ ಅವರೇ ಇಲ್ಲ' ಎಂದು ಕಣ್ಣೀರು ಹಾಕಿದ್ದಾರೆ.
'ಇವತ್ತು ಬೆಳಿಗ್ಗೆ ನಾನು ಅವರಿಗೆ ಫೋನ್ ಮಾಡೋಣ ಅನ್ಕೊಂಡೆ. ಯಾವುದಾದ್ರೂ ಕಾರ್ಯಕ್ರಮಕ್ಕೆ ಬರಲು ಆಗುತ್ತಾ ಕೇಳೋಣ ಅನ್ಕೊಂಡಿದ್ದೆ. ಯಾಕೆಂದರೆ ಇವತ್ತಿಗೂ ಅವರಿಗೆ ತುಂಬಾ ಬೇಡಿಕೆ ಇದೆ. ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ತುಂಬಾ ಹೊತ್ತು ನಿಲ್ಲಲು ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಆದರೂ ಇವತ್ತು ಕರೆ ಮಾಡಿ ಬರ್ತೀರಾ ಎಂದು ಕೇಳಬೇಕು ಅಂದುಕೊಂಡೆ. ಭೇಟಿ ಕೂಡ ಮಾಡೋಣ ಅಂದುಕೊಂಡೆ. ಆದರೆ ಅಷ್ಟರಲ್ಲಿ ಈ ಸುದ್ದಿ ಕೇಳಿದೆ. ಮನಸ್ಸಿಗೆ ತುಂಬಾ ಬೇಸರ ಆಯ್ತು. ಇದಕ್ಕು ಮುಂದೆ ಹೋಗಬೇಕು ಅಂದುಕೊಂಡಿದ್ದೆ ಹೋಗಿದ್ದರೆ ಮಾತನಾಡಿಸಬಹುದಿತ್ತು ಎಂದು ಮನಸ್ಸಿಗೆ ನೋವಾಗುತ್ತಿದೆ' ಎಂದು ಹೇಳುವಾಗ ಟೆನ್ನಿಸ್ ಕೃಷ್ಣ ಧ್ವನಿ ನಡುಗಿ ಹೋಯ್ತು.
ಪಾತ್ರಗಳಲ್ಲಿ ಬ್ಯಾಂಕ್ ಜನಾರ್ದನ್ ಹೇಗಿದ್ದರು?
ತುಂಬಾ ಚುರುಕಾಗಿ ಅವರು ನಟನೆ ಮಾಡುತ್ತಿದ್ದರು. ಅವರ ಅಭಿನಯದಲ್ಲಿ ತಪ್ಪು ಕಂಡು ಹಿಡಿಯಲು ಆಗ್ತಾಯಿರಲಿಲ್ಲ. ತುಂಬಾ ಸ್ಪಷ್ಟವಾಗಿ ಅವರ ಪಾತ್ರಗಳು ಇರುತ್ತಿದ್ದವು. ಎಷ್ಟೇ ವಯಸ್ಸಿದ್ದಾಗಿದ್ದರೂ ಕೂಡ ತುಂಬಾ ಲವಲವಿಕೆಯಿಂದ ಎನರ್ಜಿಟಿಕ್ ಆಗಿ ಪಾತ್ರಗಳನ್ನು ಮಾಡ್ತಾಯಿದ್ದರು ಎಂದು ಟೆನ್ನಿಸ್ ಕೃಷ್ಣ ಹೇಳಿದರು.
ಅವರಿಗೆ ಓಪನ್ ಹಾರ್ಟ್ ಸರ್ಜರಿ ಆಗಿತ್ತು. ಆದಿಚುಂಚನಗಿರಿ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ಹೋಗುವಾಗ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಅವರಿಗೆ ತುಂಬಾ ಎದೆ ನೋವು ಕಾಣಿಸಿಕೊಂಡಿತ್ತು. ಆಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದವು. ನಂತರ ಅವರು ಕಾರ್ಯಕ್ರಮಕ್ಕೆ ಎರಡು ನಿಮಿಷ ಬಂದು ವಾಪಸ್ ರೂಂಗೆ ಕರೆದುಕೊಂಡು ಹೋಗಿ ಬಿಟ್ಟುಬಂದಿದ್ದೆ. ಅಂತಹ ಸ್ಥಿತಿಯನ್ನು ನಾನು ನೋಡಿದ್ದೇನೆ.
ಹದಿನೈದು ದಿನದ ಹಿಂದೆ ಫೋನ್ ಮಾಡಿ ಮಾತನಾಡಿದ್ದೆ. ಮನೆ ಬರ್ತೀನಿ ಅಂದಿದ್ದೆ. ಇವತ್ತು ಬೆಳಗ್ಗೆ ಕೂಡ ಬರ್ತೀನಿ ಅಂದಿದ್ದೆ. ಆದರೆ ಅಷ್ಟರಲ್ಲಿ ಅವರು ಇಲ್ಲ ಅನ್ನೋ ಸುದ್ದಿ ಬಂತು. ಬಾರೋ ಬಾರೋ ಅಂತಿದ್ದರು ಈಗ ನೋಡೋಣ ಅಂದರೆ ಅವರೇ ಇಲ್ಲ' ಎಂದು ಟೆನ್ನಿಸ್ ಕೃಷ್ಣ ಅವರೊಂದಿಗಿನ ಕೆಲ ಘಟನೆಗಳನ್ನು ಹಂಚಿಕೊಂಡರು.
ಬೆಂಗಳೂರಿನ ಸುಲ್ತಾನ್ ಪಾಳ್ಯ ನಿವಾಸದ ಬಳಿ ಬ್ಯಾಂಕ್ ಜನಾರ್ದನ್ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕನ್ನಡದ ಹಿರಿಯ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಆಪ್ತರು ಆಗಮಿಸಿ ಅಂತಿಮ ನಮನ ಸಲ್ಲಿಸಲಿದ್ದಾರೆ. ಇಂದು ಸಂಜೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ.












Click it and Unblock the Notifications