ಕರ್ನಾಟಕದಲ್ಲಿ 'ಪುಷ್ಪ-2' ಪ್ರದರ್ಶನಕ್ಕೆ ವಿಘ್ನ, ಪೊಲೀಸ್ ಕಮೀಷನರ್‌ಗೆ ದೂರು!
ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾ ನಾಳೆ ಎಲ್ಲೆಡೆ ರಿಲೀಸ್ ಆಗುತ್ತಿದೆ. ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಕಾತರದಿಂದ ಕಾದಿದ್ದಾರೆ. ಆದರೆ, ಇದೇ ಪುಷ್ಪ-2 ಸಿನಿಮಾ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪುಷ್ಪ-2 ಸಿನಿಮಾ ವಿರುದ್ಧ ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಅವರಿಗೆ ದೂರು ಸಲ್ಲಿಕೆಯಾಗಿದೆ. ಹೌದು, ಪುಷ್ಪ-2 ಸಿನಿಮಾ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಿನಿಮಾವನ್ನು ಅವಧಿಗೂ ಮೀರಿ ರಿಲೀಸ್ ಮಾಡಲಾಗುತ್ತಿದೆ ಎಂದು ಕನ್ನಡ ಸಿನಿಮಾ ನಿರ್ಮಾಪಕರು ಸಿಡಿದೆದ್ದಿದ್ದಾರೆ.
ಅಲ್ಲದೆ ಪುಷ್ಪ-2 ಸಿನಿಮಾವನ್ನು ಅವಧಿಗೂ ಮುನ್ನ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಬೆಂಗಳೂರು ನಗರ ಪೊಲೀಸ್ ಕಮೀಷನರ್, ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ದೂರು ಸಲ್ಲಿಸಿದೆ. ಈ ದೂರಿನ ಪ್ರತಿ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ.

ದೂರಿನಲ್ಲಿ ಹೇಳಿದ್ದೇನು?: ಸಿನಿಮಾ ಪ್ರದರ್ಶನದ ನಿಯಮಗಳ ಪ್ರಕಾರ ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6 ಗಂಟೆಗೂ ಮುನ್ನ ಯಾವುದೇ ಸಿನಿಮಾಗಳನ್ನು ಪ್ರದರ್ಶಿಸುವಂತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ಆದೇಶವಿದ್ದರೂ ಸಹ ಕರ್ನಾಟಕದ ಕೆಲವು ಥಿಯೇಟರ್‌ಗಳಲ್ಲಿ ಅವಧಿಗೂ ಮುನ್ನ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಇದು ಕಾನೂನುಬಾಹಿರ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಥಿಯೇಟರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದೆ. ಅಲ್ಲದೆ ಕರ್ನಾಟಕದಲ್ಲಿ ಈ ಸಿನಿಮಾ ಬಿಡುಗಡೆಗಾಗಿ ಟಿಕೆಟ್ ದರವನ್ನು ಮನಬಂದಂತೆ ಏರಿಕೆ ಮಾಡಲಾಗಿದೆ ಎಂದೂ ನಿರ್ಮಾಪಕರು ಆರೋಪ ಮಾಡಿದ್ದಾರೆ.
ಟಿಕೆಟ್ ದರವನ್ನು ಮನಸೋ ಇಚ್ಛೆ ಏರಿಕೆ ಮಾಡಲಾಗಿದೆ. ಟಿಕೆಟ್ ದರವನ್ನು 500 ರೂಪಾಯಿಯಿಂದ 1500 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಪ್ರೇಕ್ಷಕರಿಂದ ಈ ದುಬಾರಿ ಹಣ ವಸೂಲಿ ಮಾಡುತ್ತಿರುವ ಥಿಯೇಟರ್‌ಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ಇದರಿಂದ ಮುಂದಿನ ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಅನುಕೂಲವಾಗುವುದಲ್ಲದೆ, ಕನ್ನಡ ಚಿತ್ರರಂಗದ ಬೆಳವಣಿಗೆಗೂ ಸಹಕಾರಿಯಾಗುತ್ತೆ ಎಂದು ದೂರಿನಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಹೇಳಿದೆ.

ಪುಷ್ಪ-2 ಸಿನಿಮಾ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದ್ದು, ಸಿನಿಮಾದ ಮುಂಗಡ ಟಿಕೆಟ್ ಕೂಡ ಕಳೆದ ವಾರವೇ ಆರಂಭವಾಗಿತ್ತು. ಟಿಕೆಟ್ ದರ ನೋಡಿ ಪ್ರೇಕ್ಷಕರು ಕಂಗಾಲಾಗಿದ್ದು, ಈ ಸಿನಿಮಾಗೆ ಕ್ರೇಜ್ ಹೆಚ್ಚಾಗಿರುವುದರಿಂದ ಟಿಕೆಟ್ ದರ ದಿಢೀರನೆ ಏರಿಸಿದ್ದಾರೆ ಎಂದು ಥಿಯೇಟರ್‌ಗಳ ವಿರುದ್ಧ ಫ್ಯಾನ್ಸ್ ಕೆಂಡವಾಗಿದ್ದಾರೆ.
ತೆಲುಗು ಸಿನಿಮಾವೊಂದಕ್ಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲೇ ಟಿಕೆಟ್ ದರ ಅಧಿಕವಾಗಿದೆ ಎಂದು ಹಲವರು ಸೋಶಿಯಲ್ ಮೀಡಿಯಾಗಳಲ್ಲಿ ಟಿಕೆಟ್ ದರದ ಫೋಟೋಗಳನ್ನು ಹಂಚಿಕೊಂಡಿದ್ದರು. ರಾಜಧಾನಿ ಬೆಂಗಳೂರಿನಲ್ಲೂ ಮುಂಜಾನೆ 4 ಗಂಟೆಯಿಂದಲೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ಬರೋಬ್ಬರಿ 800 ರೂಪಾಯಿಯಿಂದ 1,000 ರೂಪಾಯಿವರೆಗೆ ಟಿಕೆಟ್ ದರ ಇದೆ ಎಂದು ಹೇಳಲಾಗುತ್ತಿದೆ.
ಆದರೆ ಪುಷ್ಪ ಸಿನಿಮಾಗೆ ಟಿಕೆಟ್ ದರ ಏರಿಸಲು ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಅನುಮತಿ ನೀಡಿದ್ದು, ಈ ಎರಡೂ ತೆಲುಗು ರಾಜ್ಯಗಳಲ್ಲಿ ಪುಷ್ಪ ಸಿನಿಮಾದ ಟಿಕೆಟ್ ದರವು 600 ರೂಪಾಯಿವರೆಗೆ ಮಾತ್ರ ಏರಿಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಇದಕ್ಕೆ ಚಿತ್ರತಂಡ ಕೂಡ ಧನ್ಯವಾದಗಳನ್ನು ತಿಳಿಸಿದೆ. ಆದರೆ, ಕರ್ನಾಟದಲ್ಲಿ ದುಬಾರಿ ಟಿಕೆಟ್ ದರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications