ನಿರ್ದೇಶಕ ಗುರುಪ್ರಸಾದ್ ಅವರ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ಪತ್ನಿ
ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ವಿಚಾರ ಇನ್ನೂ ಮಾಸಿಲ್ಲ. ಇವರು ಆತ್ಮಹತ್ಯೆ ಮಾಡಿಕೊಂಡರು ಎನ್ನುವ ವಿಚಾರದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನಿರಬಹುದು ಎಂದೂ ಕೆಲವು ಗಾಳಿ ಸುದ್ದಿಗಳು ಹಬ್ಬಿದ್ದವು. ಅವುಗಳಿಗೆ ಗುರುಪ್ರಸಾದ್ ಅವರ ಪತ್ನಿ ಸುಮಿತ್ರಾ ಸ್ಪಷ್ಟನೆ ನೀಡಿದ್ದಾರೆ.
ಸಂದೇಶದ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಲ್ಲರಿಗೂ ಸುಮಿತ್ರಾ ಗುರುಪ್ರಸಾದ್ ಮಾಡುವ ನಮಸ್ಕಾರಗಳು. ಎಲ್ಲ ಸ್ನೇಹದ ವರ್ಗ, ಸಿನಿಮಾ ವರ್ಗಕ್ಕೆ ಹಾಗೂ ಮಾಧ್ಯಮ ವರ್ಗದವರಿಗೂ ಕೆಲವು ವಿಚಾರಗಳನ್ನು ತಿಳಿಸಬೇಕಾಗಿದೆ. ನೀವೆಲ್ಲ ನಂಗೆ ಸಹಕಾರ ನೀಡುತ್ತೀರಿ ಎಂದು ನಾನು ಇಂದು ನಿಮ್ಮೊಂದಿಗೆ ಕೆಲ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಸುಮಿತ್ರಾ ಮಾತು ಶುರು ಮಾಡಿದ್ದಾರೆ.

ದಯವಿಟ್ಟು ನಮ್ಮ ಕುಟುಂಬ ಈಗಾಗಲೇ ಸಾಕಷ್ಟು ನೊಂದಿದೆ. ನಿಮಗೆಲ್ಲರಿಗೂ ಕೈಮುಗಿದು ಬೇಡಿಕೊಳ್ಳುವೆ. ನಾವೆಲ್ಲ ನೋವಿನಲ್ಲೇ ಬದುಕುತ್ತಿದ್ದೇವೆ. ಇದಕ್ಕೆ ಕಾರಣ ಏನು ಎನ್ನುವುದು ನಿಮಗೂ ಗೊತ್ತಿದೆ. ವ್ಯಕ್ತಿಯೊಬ್ಬ ನಿಧನರಾದ ಮೇಲೆ ಅದು ಯಾರಾದರೂ ಅವರನ್ನ ದೇವರೆಂದು ಪರಿಗಣಿಸುತ್ತಾರೆ. ಈ ಮಾತನ್ನು ಹಲವರ ಬಾಯಿಂದ ನಾನು ಕೇಳಿಸಿಕೊಂಡಿದ್ದೇನೆ. ಹಾಗಾಗಿ ಸತ್ತ ವ್ಯಕ್ತಿಯ ಬಗ್ಗೆ ಇಲ್ಲದ ಸಲ್ಲದ ಮಾತುಗಳೇಕೆ..? ಎಂದು ಪತಿ ಸಾವಿನ ಕುರಿತಾದ ವದಂತಿಗಳಿಗೆ ಪ್ರಶ್ನೆ ಮುಂದಿಟ್ಟಿದ್ದಾರೆ.
ಮೊದಲನೆಯದಾಗಿ ಗುರುಪ್ರಸಾದ್ ಅವರಿಗೆ ಕೋಟಿಗಟ್ಟಲೆ ಸಾಲ ಇರಲಿಲ್ಲ. ಇನ್ನು ಆನ್ಲೈನ್ ರಮ್ಮಿ ಇತ್ತು, ತನ್ನ ಬಿಡುವಿನಲ್ಲಿ ಟೈಂಪಾಸ್‌ಗಾಗಿ ಎಷ್ಟು ಬೇಕೋ ಅಷ್ಟೇ. ಇದರಲ್ಲಿ ಗಳಿಸಿದ್ದು ಕಳೆದುಕೊಂಡಿದ್ದು ಎರಡೂ ಉಂಟು. ಆದರೆ ಅದು ಅತಿರೇಕಕ್ಕೆ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಸಾಲದ ವಿಚಾರಕ್ಕೆ ಅವರ ಮೇಲೆ ಕೇಸ್ ನಡೆಯುತ್ತಿತ್ತು ಎಂಬ ವಿಚಾರವಾಗಿಯೂ ಸುಮಿತ್ರಾ ಮಾತನಾಡಿದ್ದಾರೆ. ಸಾಲಗಾರ ಎಂದು ಅವರ ಮೇಲೆ ಕೇಸ್ ನಡೆಯುತ್ತಿತ್ತಂತೆ. ಆದರೆ ನಂಬಿಕಸ್ತರಿಂದ ಮೋಸದ ವಂಚನೆ, ಆದರೆ ಅದು ಕಾನೂನು ಮೂಲಕ ಸಾಬೀತಾಗಿರಲಿಲ್ಲ ಎಂದಿದ್ದಾರೆ. ಇನ್ನು ಗುರುಪ್ರಸಾದ್ ಡಿಪ್ರೆಷನ್ ಪೇಷೆಂಟ್ ಎನ್ನುವುದು ನಿಜ. ವೈದ್ಯರ ಸಲಹೆ ಮೇರೆಗೆ ಅವರು ಅದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಅವರಿಗೆ ಒತ್ತಡಗಳ ಕಾಯಿಲೆ, ಸೋರಿಯಾಸಿಸ್ ಚರ್ಮರೋಗ ಯಾವುದೂ ಇರಲಿಲ್ಲ. ಮುಖ್ಯವಾಗಿ ನಾನು ಮತ್ತೆ ಪ್ರೆಗ್ನೆಂಟ್ ಆಗಿದ್ದೇನೆ ಎನ್ನುವುದು ಕೂಡ ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಎಲ್ಲ ಸುಳ್ಳುಗಳು ಅವರ ಬಗ್ಗೆ ಹರಿದಾಡುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಗುರುಪ್ರಸಾದ್ ಅವರು ಪ್ರತಿಭಾವಂತರು. ಅವರ ಬರವಣಿಗೆ, ಚಿಂತನೆ, ವ್ಯಕ್ತಿತ್ವ ಎಲ್ಲವೂ ಒಂದು ರೀತಿ ವಿಭಿನ್ನವಾದದ್ದು. ಈ ಕಾರಣದಿಂದಲೇ ಪತಿ ಗುರುಪ್ರಸಾದ್ ಅವರ ಬರವಣಿಗೆ, ಪ್ರತಿಭೆಗೆ, ಯಶಸ್ಸಿಗೆ, ಆತನ ಮಾತುಗಳಿಗೆ ನೀವೆಲ್ಲ ನಕ್ಕು ನಲಿದಿದ್ದೀರಿ. ಅವರು ಅಷ್ಟರಮಟ್ಟಿಗೆ ಚತುರರು ಎನ್ನುವುದು ನಿಮಗೂ ಗೊತ್ತು ಎಂದು ಸುಮಿತ್ರಾ ಅವರು ಗುರುಪ್ರಸಾದ್ ಅವರನ್ನು ನೆನೆದಿದ್ದಾರೆ.
ಅವರ ಕೆಲವೊಂದು ವಿಚಾರಗಳು ನಿಮಗೆ ಇಷ್ಟವಾಗದಿದ್ದೂ ಉಂಟು, ಅವರದ್ದು ನೇರ ನುಡಿಯ ವ್ಯಕ್ತಿತ್ವ. ಎಲ್ಲರಿಗೂ ಸರಿ ಅನಿಸಿದ್ದು ಅವರಿಗೆ ಸರಿಯಲ್ಲ ಎನಿಸಿ ಕೆಲವರಿಂದ ಮನಸ್ತಾಪಕ್ಕೆ ಒಳಗಾಗಿದ್ದರು. ಇದರಿಂದ ಖುಷಿ ಹಾಗೂ ನೋವು ಪಟ್ಟವರಿಬ್ಬರೂ ಇದ್ದಾರೆ. ಮನುಷ್ಯನಾದ ಮೇಲೆ ಸರಿ ಹಾಗೂ ತಪ್ಪು ಎರಡೂ ಮಾಡುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.
ಪತಿ ಕುಡುಕ, ಸರಿ ಇರಲಿಲ್ಲ, ಹೆಂಡತಿ-ಮಕ್ಕಳನ್ನ ಸರಿಯಾಗಿ ನೋಡಿಕೊಂಡಿರಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಅದು ಸಮಾಜದಲ್ಲಿ ಎಲ್ಲೆಡೆ ಇರೋದೆ, ಎಲ್ಲರ ಸಂಸಾರಗಳಲ್ಲಿ ನಡೆಯುವುದೇ. ಏನೇ ಹೇಳಿದರೂ ಅದನ್ನು ಅವರು ಬದುಕಿದ್ದಾಗ ಹೇಳುವುದು, ತಪ್ಪುಗಳನ್ನು ತಿದ್ದುವುದು ಪ್ರಾಮಾಣಿಕರ ಹಾಗು ಉತ್ತಮರ ಕೆಲಸ. ಆದರೆ, ಸತ್ತ ನಂತರ ವ್ಯಕ್ತಿಯ ವ್ಯಕ್ತಿತ್ವವನ್ನು ಅವಮಾನಿಸುವುದು ಎಷ್ಟರಮಟ್ಟಿಗೆ ಸರಿ? ಎಂದು ಅವರ ಮೇಲೆ ಮಾಡಿದ್ದ ಹಲವರ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ಯಾವುದೇ ತಪ್ಪು ಮಾಹಿತಿ ಹೋಗಬಾರದೆಂದು ಈ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ.. ಎಂದು ಸುಮಿತ್ರಾ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications