Vinay Gowda: ಮಚ್ಚು ತೋರಿಸಿದ್ದಕ್ಕೆ ಪೊಲೀಸರ ಟ್ರೀಟ್‌ಮೆಂಟ್ ಹೇಗಿತ್ತು? ವಿನಯ್ ಗೌಡ ಫಸ್ಟ್ ರಿಯಾಕ್ಷನ್
ಮಚ್ಚು ಪ್ರದರ್ಶಿಸಿ ರೀಲ್ಸ್ ಮಾಡಿದ ಆರೋಪದ ಮೇರೆಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು. ಮಚ್ಚು ಪ್ರದರ್ಶಿಸಿದ ಕಾರಣಕ್ಕೆ ಇಬ್ಬರನ್ನು ವಿಚಾರಣೆಗೆ ಕರೆಸಿ ಕೊನೆಗೆ ಬಂಧಿಸಲಾಗಿತ್ತು. ಮೂರು ದಿನಗಳ ಕಸ್ಟಡಿ ನಂತರ ಶುಕ್ರವಾರ ಇಬ್ಬರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ವಿನಯ್ ಹಾಗೂ ರಜತ್ ಬಿಡುಗಡೆಯಾದರು. ರಿಲೀಸ್ ಬಳಿಕ ವಿನಯ್ ಗೌಡ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಮಹತ್ವದ ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಿಡಿಯೋದಲ್ಲಿ ಸುದೀರ್ಘವಾಗಿ ಮಾತನಾಡಿರುವ ವಿನಯ್, "ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ಕಳೆದ ನಾಲ್ಕು ದಿನಗಳಿಂದ ನೀವು ಟಿವಿ, ಯೂಟ್ಯೂಬ್‌ಗಳಲ್ಲಿ ನೋಡಿರಬಹುದು. ಅಲ್ಲಿ ಒಂದು ಮಚ್ಚಿನ ಕಥೆ ನಡೀತಿದೆ. ಅದಕ್ಕಾಗಿ ನಾನು ಕ್ಷಮೆ ಕೇಳಬೇಕು. ವಿಶೇಷವಾಗಿ ನನ್ನ ಅಭಿಮಾನಿಗಳಿಗೆ, ನನ್ನ ಕುಟುಂಬಕ್ಕೆ ಪ್ರತಿಯೊಬ್ಬರಿಗೂ ಈ ವಿಡಿಯೋ ಮೂಲಕ ಸಾರಿ ಕೇಳುತ್ತಿದ್ದೇನೆ" ಎಂದಿದ್ದಾರೆ.

"ಮೊದಲನೆಯದಾಗಿ ನನ್ನಿಂದ ನನ್ನ ಫ್ಯಾಮಿಲಿಗೆ ತೊಂದರೆ ಆಗಿದೆ. ನನ್ನ ಹೆಂಡತಿ, ಮಗನಿಗೆ ನೋವಾಗಿದೆ. ನನ್ನ ಸ್ನೇಹಿತರಿಗೂ ತುಂಬಾ ತೊಂದರೆಯಾಗಿದೆ. ಅವರೆಲ್ಲ ಹಗಲು ರಾತ್ರಿ ಎನ್ನದೆ ನನಗಾಗಿ ಪೊಲೀಸ್ ಸ್ಟೇಷನ್ ಬಳಿ, ಸೆಂಟ್ರಲ್ ಜೈಲು ಹತ್ತಿರ ನಿಂತಿದ್ದರು. ನಮಗಾಗಿ ಕಾಯುತ್ತಾ ತುಂಬಾ ಹೆಲ್ಪ್ ಮಾಡಿದ್ದಾರೆ. ಈ ವೇಳೆ ನಮ್ಮ ಅಕ್ಕ ಅಪರ್ಣ ಹಾಗೂ ಬಾವ ಕೂಡ ತುಂಬಾ ಓಡಾಡಿದ್ದಾರೆ. ಹಾಗೆಯೇ ನನ್ನ ಪ್ರೀತಿಯ ಮಾಧ್ಯಮಮಿತ್ರರಿಗೂ ನಾನು ಕ್ಷಮೆ ಕೇಳುತ್ತೇನೆ" ಎಂದು ವಿನಯ್ ವಿಡಿಯೋದಲ್ಲಿ ತಿಳಿಸಿದ್ದಾರೆ.
"ನನ್ನಿಂದ ತಪ್ಪಾಗಿ, ಮಾಡಬಾರದ್ದನ್ನ ಮಾಡಿದ್ದೇನೆ, ಮಚ್ಚು ಹಿಡಿದುಕೊಂಡು ಮಾಡಿರುವ ವಿಡಿಯೋದಿಂದ ಇಷ್ಟೆಲ್ಲ ತೊಂದರೆ ಆಯ್ತು. ನನಗೆ ನಿಜವಾಗಿಯೂ ಈ ಒಂದು ವಿಷಯ ಇಷ್ಟು ದೊಡ್ಡದಾಗಿ ಬೆಳೆಯುತ್ತೆ ಅಂದುಕೊಂಡಿರಲಿಲ್ಲ. ಇದರಲ್ಲೂ ನನ್ನದೂ ತಪ್ಪಿದೆ, ಇಲ್ಲ ಅಂತ ಹೇಳ್ತಿಲ್ಲ. ಏಕೆಂದರೆ ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಿತ್ತು. ನನ್ನ ಫಾಲೋವರ್ಸ್‌ಗೆ ಇಂತಹ ಮಾಹಿತಿಯನ್ನ ನಾನು ಕೊಡಬಾರದಿತ್ತು. ಇದಕ್ಕಾಗಿ ದಯವಿಟ್ಟು ಕ್ಷಮಿಸಿ, ನೀವೆಲ್ಲ ನನಗೆ ಸಾಕಷ್ಟು ಸಪೋರ್ಟ್ ಕೂಡ ಮಾಡಿದ್ದೀರಿ. ನೀವು ನಿಮ್ಮ ಕೆಲಸ ಮಾಡಿದ್ದೀರಿ, ನನಗೆ ಏನೂ ಬೇಜಾರಿಲ್ಲ" ಎಂದು ವಿನಯ್ ಹೇಳಿದ್ದಾರೆ.
"ಪೊಲೀಸ್ ಇಲಾಖೆಯವರು ತಮ್ಮ ತನಿಖೆಯನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಒಂದು ಸೆಲೆಬ್ರಿಟಿ ಹಾಗೂ ಸಾಮಾನ್ಯ ವ್ಯಕ್ತಿ ಅನ್ನೋ ಭೇದ-ಭಾವ ತೋರದೆ, ಕಾನೂನು ಪ್ರಕಾರವಾಗಿಯೇ ತನಿಖೆ ನಡೆಸಿದ್ದಾರೆ. ನಮ್ಮ ಟ್ರೀಟ್‌ಮೆಂಟ್ ಕೂಡ ಹಾಗೆಯೇ ಇತ್ತು. ಅವರು ಹೇಗೆ ಟ್ರೀಟ್ ಮಾಡಬೇಕೋ, ಹಾಗೇ ಮಾಡಿದ್ದಾರೆ. ದಯವಿಟ್ಟು ಪೊಲೀಸರ ಮೇಲೆ ಯಾವುದೇ ಆರೋಪಗಳನ್ನ ಮಾಡಬೇಡಿ" ಎಂದು ವಿನಯ್ ಮನವಿ ಮಾಡಿಕೊಂಡಿದ್ದಾರೆ.

ಏನಿದು ಪ್ರಕರಣ?: ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರು ರಗಡ್ ರೀಲ್ಸ್ ಮಾಡಿದ್ದರು. ಇದರಲ್ಲಿ ರಜತ್ ಅವರು ನಟ ದರ್ಶನ್ ಅವರ ರೀತಿಯಲ್ಲಿ ಡಿ ಬಾಸ್ ಹೆಸರಿನ ಶರ್ಟ್ ಹಾಗೂ ಅವರ ಸಿನಿಮಾಗಳ ಹೆಸರಿದ್ದ ಪ್ಯಾಂಟ್ ಧರಿಸಿ, ಪೋಸ್ ಕೊಟ್ಟಿದ್ದರು. ಕೈಯಲ್ಲಿ ಮಚ್ಚು ಹಿಡಿದು ಖಡಕ್ ಆಗಿ ಮಾಡಿದ್ದ ರೀಲ್ಸ್ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಇಬ್ಬರೂ ಬಂಧಿಸಿ ಜೈಲಿಗೆ ಕಳಿಸಿದ್ದರು. ಶನಿವಾರ ಬೆಳಿಗ್ಗೆ ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆದರು.












Click it and Unblock the Notifications