'ಒಂದು ಸಿನಿಮಾ ಹತ್ತು ವರ್ಷ ನರಕ ತೋರಿಸಿತು': ನಟ ನವೀನ್ ಕೃಷ್ಣ ನೋವಿನ ಕಥೆ
ಒಂದು ಸಿನಿಮಾ ಒಬ್ಬ ನಾಯಕ ಹಾಗೂ ನಿರ್ಮಾಪಕನ ಬದುಕನ್ನೇ ಬದಲಿಸಿ ಬಿಡುವ ಶಕ್ತಿಯನ್ನು ಹೊಂದಿದೆ. ನಾಯಕನೇ ನಿರ್ಮಾಪಕನಾದಾಗ ಅಥವಾ ನಾಯಕನ ಕುಟುಂಬದವರೇ ನಿರ್ಮಾಪಕರಾಗಿ ತೆರೆ ಕಂಡ ಸಿನಿಮಾಗಳು ಕೆಲವೇ ಕೆಲವು ನಟರಿಗಷ್ಟೇ ಯಶಸ್ಸು ತಂದುಕೊಟ್ಟರೆ, ಈ ಪ್ರಯತ್ನದಲ್ಲಿ ಪೆಟ್ಟು ತಿಂದವರೇ ಹೆಚ್ಚು. ಕೋಟ್ಯಂತರ ರೂಪಾಯಿ ವ್ಯಹಿಸಿ ಮಾಡಿದ ಸಿನಿಮಾದಿಂದ ಬಂಡವಾಳವೂ ವಾಪಸ್ ಬರದೇ ಕಷ್ಟಕ್ಕೆ ಸಿಲುಕಿ ತಮ್ಮ ಸಿನಿಮಾ ಪಯಣವನ್ನು ನಿಲ್ಲಿಸಿದ ಕಲಾವಿದರು ಅನೇಕರಿದ್ದಾರೆ. ಅದರಲ್ಲಿ ನಟ ನವೀನ್ ಕೃಷ್ಣ ಕೂಡ ಒಬ್ಬರು.
ಮನೆಯೊಂದು ಮೂರು ಬಾಗಿಲು, ಪ್ರೀತಿಯಿಂದ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟ ನವೀನ್ ಕೃಷ್ಣ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈಗಾಗಲೇ ನಟನೆಯಿಂದ ಜನರ ಮೆಚ್ಚುಗೆ ಪಡೆದಿದ್ದ ಮಗನನ್ನು ಹೀರೋ ಮಾಡಬೇಕು ಎಂದು ತಾಯಿಯೇ ಬಂಡವಾಳ ಹಾಕಿ ಸಿನಿಮಾ ಮಾಡಿದರು. ತಂದೆ ಶ್ರೀನಿವಾಸ್ ಮೂರ್ತಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಕಲಾವಿದರಾದ ಕಾರಣ, ತಂದೆ ಹಾಗೂ ತಾಯಿಯ ಸಹಾಯದಿಂದ ನವೀನ್ ಕೃಷ್ಣ ತಮ್ಮದೇ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮಾಡಿದರು.

ನಟ ನವೀನ್ ಕೃಷ್ಣ ನಾಯಕ ನಟರಾದ ಈ ಸಿನಿಮಾಗೆ ಧಿಮಾಕು ಎಂದು ಹೆಸರಿಡಲಾಯಿತು. ಈ ಸಿನಿಮಾದ ಹೆಸರಿನ ಬಗ್ಗೆಯೇ ನವೀನ್ ಕೃಷ್ಣ ಅವರಿಗೆ ಅಸಮಾಧಾನವಿತ್ತಂತೆ. ಹೇಗೋ ಎಲ್ಲರೂ ಒಪ್ಪಿ, ಕಷ್ಟಪಟ್ಟು ಹಣ ಹಾಕಿ ಮಾಡಿದ ಸಿನಿಮಾ ಕೊನೆಗೆ ಅವರ ಜೀವನಕ್ಕೆ ದೊಡ್ಡ ಹೊಡೆತ ಕೊಟ್ಟಿತ್ತು. ಈ ಸಿನಿಮಾದಿಂದ ನಷ್ಟ ಕಂಡು ಸಂಪೂರ್ಣ ಹತ್ತು ವರ್ಷಗಳು ಅವರು ಸಾಲ ತೀರಿಸುವುದರಲ್ಲೇ ಕಳೆದರು. ತಮ್ಮ ಜೀವನದಲ್ಲಿ ನಡೆದ ಈ ಹೊಡೆತದ ಬಗ್ಗೆ ಸ್ವತಃ ನವೀನ್ ಕೃಷ್ಣ ಮಾತನಾಡಿದ್ದಾರೆ.
ಚಿತ್ರಲೋಕ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನವೀನ್ ಕೃಷ್ಣ ಧಿಮಾಕು ಸಿನಿಮಾ ಮಾಡಿ ಸಾಲಗಾರನಾದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. 'ನಮ್ಮ ಸಿನಿಮಾದಲ್ಲಿ ಅತ್ತೆ ಪಾತ್ರ ಬಹಳ ಮುಖ್ಯವಾಗಿತ್ತು. ಹೀಗಾಗಿ ಮೊದಲು ಅವರನ್ನು ಸಿನಿಮಾಗೆ ಆಯ್ಕೆ ಮಾಡಿಕೊಂಡೆವು. ಮೊದಲು ರಮ್ಯಾ ಕೃಷ್ಣನ್ ಅವರನ್ನು ಕೇಳಿದೆವು ಅವರು ಆಗಲ್ಲ ಅಂದರು. ಹೀಗಾಗಿ ಮತ್ತೆ ಬೇರೆ ನಟಿಯನ್ನು ಆಯ್ಕೆ ಮಾಡಿಕೊಂಡೆವು. ನಮ್ಮ ಸಿನಿಮಾದಲ್ಲಿ ಉದ್ದೇಶ ಇದ್ದದ್ದೇ ಚಿತ್ರದಲ್ಲಿ ಮೊದಲು ಇದೇ ಪಾತ್ರವನ್ನು ನಾಯಕಿ ಅಂತಾ ಜನರು ಅಂದುಕೊಳ್ಳಬೇಕು. ಅದಾದ ಮೇಲೆ ಒಂದು ಟ್ವಿಸ್ಟ್ ಕೊಡೋಣ ಆಕೆಯ ಮಗಳು ಸಿನಿಮಾದ ಹೀರೋಯಿನ್ ಎಂದು ಅಂತಾ ನಮ್ಮ ಸ್ಕ್ರೀನ್ ಪ್ಲೇ ಇತ್ತು. ಹೀಗಾಗಿ ನಮ್ಮ ಗಮನ ಹೆಚ್ಚಾಗಿ ಈ ಅತ್ತೆ ಪಾತ್ರದ ಮೇಲೆ ಇತ್ತು'.
'ಹೇಗಿದ್ದರೂ ಅತ್ತೆ ಪಾತ್ರ ಮುಖ್ಯ ಎಂದು ನಾವು ಈ ಹೀರೋಯಿನ್ ಆಯ್ಕೆಯ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ತೋರಿಸಿದೆವು. ಸುಮಾರು ಜನ ಹೀರೋಯಿನ್‌ಗಳನ್ನು ನಾವು ಹುಡುಕಿದೆವು. ಕೊನೆಯಲ್ಲಿ ಮುಂಬೈಯಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡಿದ್ದೆವು. ಅವರು ಶೂಟಿಂಗ್‌ಗೆ ಇನ್ನೇನು ಮೂರು ನಾಲ್ಕು ದಿನ ಇದೆ ಎನ್ನುವಷ್ಟರಲ್ಲಿ ಅವರದೇ ವೈಯಕ್ತಿಕ ಕಾರಣದಿಂದ ನಾನು ಈ ಪಾತ್ರ ಮಾಡಲ್ಲ ಅಂತಾ ಹೇಳಿದರು. ಇಲ್ಲಿಯೂ ಅನೇಕರನ್ನು ಕೇಳಿದ್ದೇವು ಯಾರೂ ಒಪ್ಪಿರಲಿಲ್ಲ' ಎಂದರು.

'ಈ ಹೀರೋಯಿನ್ ಕೈಕೊಟ್ಟಿದ್ದರಿಂದ ನಮಗೆ ಕೊನೆಯಲ್ಲಿ ಏನೂ ಮಾಡುವುದು ಅಂತಾ ಗೊತ್ತಾಗಲಿಲ್ಲ. ಕೊನೆಯಲ್ಲಿ ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ನೋಡಲು ಚೆನ್ನಾಗಿದ್ದಾಳೆ ಅಂತಾ ಯಾರೋ ನಮ್ಮ ತಂದೆಗೆ ಸಲಹೆ ಕೊಟ್ಟರು. ನಾನು ಹಾಗೂ ಮಹೇಶ್ ಹೋಗಿ ಅವರನ್ನು ನೋಡಿಕೊಂಡು ಬಂದೆವು. ಅವರು ಮೈಕ್ ಮುಂದೆ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದರು. ಅವರನ್ನು ನೋಡುತ್ತಿದ್ದಂತೆ ನಾವು ಆಕೆ ಕೈಕೊಟ್ಟಿದ್ದೇ ಒಳ್ಳೆ ಆಯ್ತು. ಮೈಕ್ ಮುಂದೆಯೇ ಇಷ್ಟು ಚೆನ್ನಾಗಿ ಮಾತಾಡಿ ಅಭಿನಯ ಮಾಡುವ ಇವರು ಕ್ಯಾಮರಾ ಮುಂದೆ ಎಷ್ಟು ಚೆನ್ನಾಗಿ ಮಾಡಲ್ಲ ಎಂದುಕೊಂಡು ಅವರನ್ನೇ ಅಂತಿಮ ಮಾಡಿದೆವು. ಆದರೆ ತೆರೆ ಮೇಲೆ ಅವರು ಅಷ್ಟಾಗಿ ಜನರಿಗೆ ಇಷ್ಟ ಆಗಲಿಲ್ಲ' ಎಂದು ಹೇಳಿದರು.
'ಹೀರೋಯಿನ್‌ಗಿಂತ ಅವರ ಅಮ್ಮನೇ ಚೆನ್ನಾಗಿದ್ದಾರೆ ಅಂತಾ ಜನರ ಬಾಯಲ್ಲಿ ಬರಬೇಕು ಎನ್ನುವುದು ನಮ್ಮ ಉದ್ದೇಶ ಆಗಿತ್ತು. ಆದರೆ ಅದೇ ನಮ್ಮ ಸಿನಿಮಾಗೆ ನೆಗೆಟಿವ್ ಆಯ್ತು. ಸಿನಿಮಾ ಬಿಡುಗಡೆಯಾಗಿ ಮೊದಲ ದಿನ ಜನ ಹೌಸ್ ಫುಲ್ ಆದರು. ಶನಿವಾರ ಭಾನುವಾರ ಹೌಸ್ ಫುಲ್ ಶೋಗಳೇ ಆದವು. ಅದನ್ನು ನೋಡಿ ಸೂಪರ್ ಸ್ಟಾರ್ ಆದೆ ನಾನು ಅಂತಾ ನನಗೆ ನಾನೇ ಅಂದುಕೊಂಡೆ. ಆದರೆ ಮುಂದಿನ ವಾರ ಜನ ಬರಲೇ ಇಲ್ಲ. ಅದೇ ವಾರ ಮತ್ತೆರಡು ದೊಡ್ಡ ಸಿನಿಮಾಗಳು ಬಿಡುಗಡೆಯಾದವು ಜನ ಅವುಗಳತ್ತ ಹೋದರು. ನಮ್ಮ ಸಿನಿಮಾ ಸಂಪೂರ್ಣವಾಗಿ ಕಣ್ಮರೆಯಾಗಿ ಹೋಯಿತು' ಎಂದು ನವೀನ್ ಕೃಷ್ಣ ಬೇಸರ ವ್ಯಕ್ತಪಡಿಸಿದರು.
'ಆ ಸಿನಿಮಾದಲ್ಲಿ ತೆರೆ ಮೇಲೆ ಎಪ್ಪತ್ತರಿಂದ ಎಂಬತ್ತು ಲಕ್ಷ ಕಾಣಿಸುತ್ತದೆ. ಯಾಕೆಂದರೆ ಪ್ರತಿ ಹಾಡಿಗೂ ಕೂಡ ಅಷ್ಟು ರಿಚ್ ಆಗಿ ಸೆಟ್ ಹಾಕಿದ್ದೆವು. ಸೆಟ್‌ಗಳಿಗೆ ತುಂಬಾ ಖರ್ಚು ಮಾಡಿದ್ದೆವು. ನಮ್ಮ ತಾಯಿ ಶೂಟಿಂಗ್ ನಿಲ್ಲಬಾರದು ಅಂತಾ ಬಡ್ಡಿಯಲ್ಲಿ ಸಾಲ ತೆಗೆದುಕೊಂಡಿದ್ದರು. ಇವರು ಸಾಲ ಮಾಡಿ ಸಿನಿಮಾ ಮಾಡಿರುವುದು ಮೂರು ತಿಂಗಳು ಆದ ಮೇಲೆ ನನಗೆ ಗೊತ್ತಾಯ್ತು. ಸಿನಿಮಾ ಟಿವಿ ರೈಟ್ಸ್ ನೆಲವತ್ತೈದು ಲಕ್ಷಕ್ಕೆ ಹೋಯಿತು. ಅಷ್ಟು ಹಣ ಬಂದರೂ ಸಾಲ ತೀರಲಿಲ್ಲ'.

'ಸಿನಿಮಾ ಮುಗಿಯುವ ವೇಳೆಗೆ ಅರವತ್ತು ಲಕ್ಷ ರೂಪಾಯಿ ಸಾಲ ಇತ್ತು. ಅದಾದ ಮೇಲೆ ನಾನು ಮತ್ತು ನನ್ನ ತಂದೆ ಹತ್ತು ವರ್ಷ ಕಷ್ಟಪಟ್ಟು ಪಟ್ಟು ಹೇಗೋ ಮಾಡಿ ಕೊನೆಯಲ್ಲಿ ಸಾಲ ತೀರಿಸಿದೆವು. 2008ರಿಂದ ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಂಡು ಸಂಪಾದಿಸಿ ಸಾಲ ತೀರಿಸಿದೆವು. ಇದರಿಂದ ನನ್ನ ಸಿನಿಮಾ ಜೀವನ ಒಂದು ಲಯದಲ್ಲಿ ಹೋಗಲೇ ಇಲ್ಲ' ಎಂದು ನಟ ನವೀನ್ ಕೃಷ್ಣ ತಮ್ಮ ಜೀವನದಲ್ಲಿ ತಾವು ಕಂಡ ಅತೀ ದೊಡ್ಡ ಸೋಲಿನ ಬಗ್ಗೆ ಹೇಳಿದರು.












Click it and Unblock the Notifications