ಪಾಶ್ ಕಮಿಟಿ ರಚನೆಗೆ ಅವರಿಂದಲೇ ಅಡ್ಡಿ.. ನಟ ಚೇತನ್ ಶಾಕಿಂಗ್ ಹೇಳಿಕೆ!
ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಹೇಮಾ ವರದಿಯು ಸ್ಯಾಂಡಲ್‌ವುಡ್ ಅನ್ನೂ ನಡುಗಿಸಿತ್ತು. ಕನ್ನಡ ಚಿತ್ರರಂಗದಲ್ಲೂ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೆ, ಅದರ ಬಗ್ಗೆ ಅಧ್ಯಯನ ಮಾಡಲು ಹೇಮಾ ಮಾದರಿಯ ಸಮಿತಿ ರಚಿಸಬೇಕು ಎಂದು ಹಲವರಿಗೆ ಆಗ್ರಹ ಕೇಳಿಬಂದಿತ್ತು. ಇದು ಕರ್ನಾಟಕ ಫಿಲ್ಮ್ ಚೇಂಬರ್‌ನಲ್ಲಿ ದೊಡ್ಡ ಸಭೆಯೂ ನಡೆದು, ಕೊನೆಗೆ ಇಂತಹ ಸಮಿತಿಯ ಅಗತ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.
ಇನ್ನು ಈ ವಿಚಾರವಾಗಿ ಮಧ್ಯಪ್ರವೇಶಿಸಿದ್ದ ಕರ್ನಾಟಕ ಮಹಿಳಾ ಆಯೋಗ ಕೂಡ ಕರ್ನಾಟಕ ಫಿಲ್ಮ್ ಚೇಂಬರ್ ಪಾಶ್ ಕಮಿಟಿ (Policy Against Sexual Harassment) ರಚಿಸುವಂತೆ ಸೂಚಿಸಿತ್ತು. ಇದಕ್ಕೆ ಫಿಲ್ಮ್ ಚೇಂಬರ್ ಕೂಡ ಒಪ್ಪಿಕೊಂಡಿತ್ತು. ಆದರೆ ಈ ಕೆಲಸ ಇಲ್ಲಿವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇದರ ಬಗ್ಗೆ ಮಾತನಾಡಿರುನ ನಟ ಚೇತನ್ ಅಹಿಂಸಾ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಚಿತ್ರರಂಗದಲ್ಲಿ ಈ ಪಾಶ್ ಕಮಿಟಿ ರಚನೆಗೆ ಸ್ಟಾರ್ ನಟರು, ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರ ಒತ್ತಡವಿದೆ ಎಂದು ದೂರಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಪಾಶ್ ಕಮಿಟಿ ಅಗತ್ಯವಿದೆ. ಈ ವಿಚಾರದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ವಿಳಂಬ ಮಾಡುತ್ತಿದೆ. ಈಗ ಸಮಿತಿ ರಚನೆಗೆ ಚುನಾವಣೆಯ ನೆಪ ಹೇಳುತ್ತಿದೆ. ನಿಜವಾಗಿ ಇಂತಹ ಸಮಿತಿ ಯಾವಾಗಲೋ ಆಗಬೇಕಿತ್ತು. ಇದಕ್ಕಾಗಿ ನಾವು ಇಷ್ಟು ದಿನವೇ ಕಾದಿದ್ದೇವೆ. ಇನ್ನೆರಡು ವಾರ ಕಾದು ನೋಡುತ್ತೇವೆ ಎಂದು ನಟ ಚೇತನ್ ಹೇಳಿದ್ದಾರೆ.
ಕರ್ನಾಟಕ ಫಿಲ್ಮ್ ಚೇಂಬರ್ ಉದ್ದೇಶಪೂರ್ವಕವಾಗಿಯೇ ಪಾಶ್ ಕಮಿಟಿ ರಚಿಸಲು ಮುಂದಾಗುತ್ತಿಲ್ಲ. ಫಿಲ್ಮ್ ಚೇಂಬರ್ ಸ್ಯಾಂಡಲ್‌ವುಡ್‌ನ ಪರವಾಗಿಯೂ ಇಲ್ಲ. ಅಲ್ಲಿ ಎಲ್ಲರೂ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ನಂತರವೇ ಪಾಶ್ ಕಮಿಟಿ ಆಗಲೇಬೇಕು ಎಂದು ಚೇತನ್ ಒತ್ತಾಯಿಸಿದ್ದಾರೆ.

ಕೆಂಡವಾದ ಮಹಿಳಾ ಆಯೋಗ!
ಇನ್ನು ಪಾಶ್ ಕಮಿಟಿ ರಚನೆ ಮಾಡುವಂತೆ ಕಳೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಖಡಕ್ ಆಗಿ ಫಿಲ್ಮ್ ಚೇಂಬರ್‌ಗೆ ಹೇಳಿತ್ತು. ಆದರೆ ನಿಗದಿತ ಗಡುವಿನಲ್ಲೂ ಸಮಿತಿ ರಚನೆ ಆಗದೇ ಇರುವುದಕ್ಕೆ ಮಹಿಳಾ ಆಯೋಗ ಕಿಡಿಕಾರಿದೆ. ಅಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮ ಜರುಗಿಸುವಂತೆ ಕೋರಿದೆ. ಎರಡು ಬಾರಿ ಗಡುವು ನೀಡಿದ್ದರೂ ಚೇಂಬರ್ ಪಾಶ್ ಕಮಿಟಿ ರಚಿಸಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜಾರಿಗೆ ತಂದಿರುವ ಕಾಯ್ದೆಯ ಸಮರ್ಪಕ ಅನುಷ್ಠಾನದ ಬಗ್ಗೆ ಕರ್ನಾಟಕ ಚಲನಚಿತ್ರೋದ್ಯಮದ ಮಹಿಳಾ ಕಲಾವಿದರು ಹಾಗೂ ಮಹಿಳಾ ಸದಸ್ಯೆಯರ ಸಭೆ ಕರೆಯಲು ತಿಳಿಸಲಾಗಿತ್ತು. ಅದರಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಪತ್ರ ಕೂಡ ಬರೆಯಲಾಗಿತ್ತು. ಮಂಡಳಿಯಲ್ಲಿ ಸಭೆ ಆಯೋಜನೆಗೊಂಡಿತ್ತು. ಬಳಿಕ ಮಂಡಳಿಗೆ ಹೆಚ್ಚಿನ ಮಾಹಿತಿ ಒದಗಿಸುವಂತೆ ಕೋರಿ ಪತ್ರ ಬರೆಯಲಾಗಿತ್ತು. ಆ ಪತ್ರದಲ್ಲಿ ಆಂತರಿಕ ದೂರು ಸಮಿತಿಯ ರಚನೆಯ ಕುರಿತು ವಿವರಣೆ ಕೇಳಿದ್ದೆವು ಎಂದು ಮಹಿಳಾ ಆಯೋಗ ಪತ್ರದಲ್ಲಿ ತಿಳಿಸಿದೆ.
ವಾಣಿಜ್ಯ ಮಂಡಳಿಯು ಸಮಿತಿ ರಚನೆಗೆ 30 ದಿನಗಳ ಕಾಲಾವಕಾಶ ಕೇಳಿತ್ತು. ಆದರೆ ಗುಡವು ಮುಗಿದರೂ ಯಾವುದೇ ಮಾಹಿತಿ ನೀಡದ ಕಾರಣ ಇತ್ತೀಚೆಗೆ ಮತ್ತೊಮ್ಮೆ ಮಂಡಳಿಗೆ ನೆನಪು ಮಾಡಲಾಗಿತ್ತು. ಆದರೆ ವಾಣಿಜ್ಯ ಮಂಡಳಿಯು ಮತ್ತಷ್ಟು ಕಾಲಾವಕಾಶ ಬೇಕೆಂದು ಕೋರಿದೆ. ಆದರೆ ಮಹಿಳೆಯರ ಸುರಕ್ಷತೆಗಾಗಿ ಪಾಶ್ ಕಮಿಟಿ ರಚನೆಯಾಗಿಲ್ಲ. ಹಾಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಿ ಎಂದು ಮಹಿಳಾ ಆಯೋಗ ತಾಕೀತು ಮಾಡಿದೆ.












Click it and Unblock the Notifications