Kamal Haasan: ಭಾರತ-ಪಾಕ್ ಸಂಘರ್ಷದ ಹೊತ್ತಲ್ಲೇ ನಟ ಕಮಲ್ ಹಾಸನ್ ಮಹತ್ವದ ನಿರ್ಧಾರ
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಭಾರತವನ್ನು ಕೆಣಕಿದ ಪಾಕ್‌ಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಇಡೀ ದೇಶವೇ ಭಾರತೀಯ ಸೇನೆಯ ಬೆನ್ನಿಗೆ ನಿಂತಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಕೂಡ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾರತೀಯ ಸೇನೆಗೆ ಬೆಂಬಲ ನೀಡುವುದಕ್ಕಾಗಿ ತಮ್ಮ ಮುಂಬರುವ ಥಗ್ ಲೈಫ್ )(Thug Life) ಸಿನಿಮಾದ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ನಿರ್ಧಾರವನ್ನು ಕಮಲ್ ಹಾಸನ್ ಅವರ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ತಿಳಿಸಲಾಗಿದೆ. "ಕಲೆ ಕಾಯಬಹುದು. ಭಾರತ ಮೊದಲು" ಎಂದು ಭಾರತದ ಬೆಂಬಲವಾಗಿ ನಿಲ್ಲುವುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದ ಗಡಿಯಲ್ಲಿನ ಬೆಳವಣಿಗೆಗಳು ಮತ್ತು ಪ್ರಸ್ತುತ ಹೆಚ್ಚಿನ ಎಚ್ಚರಿಕೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೇ 16 ರಂದು ಆಯೋಜಿಸಲಾಗಿದ್ದ "ಥಗ್ ಲೈಫ್" ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲು ನಾವು ನಿರ್ಧರಿಸಿದ್ದೇವೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ನಮ್ಮ ಸೈನಿಕರು ನಮ್ಮ ಮಾತೃಭೂಮಿಯ ರಕ್ಷಣೆಗಾಗಿ ಅಚಲ ಧೈರ್ಯದಿಂದ ಮುಂಚೂಣಿಯಲ್ಲಿ ದೃಢವಾಗಿ ನಿಂತಿರುವುದರಿಂದ, ಇದು ಆಚರಣೆಯ ಸಮಯವಲ್ಲ, ಬದಲಿಗೆ ಶಾಂತಿ ಒಗ್ಗಟ್ಟಿನ ಸಮಯ ಎಂದು ನಾನು ನಂಬುತ್ತೇನೆ. ಹಾಗಾಗಿ ಈ ಸಿನಿಮಾ ಕಾರ್ಯಕ್ರಮದ ಹೊಸ ದಿನಾಂಕವನ್ನು ಮುಂಬರುವ ದಿನಗಳಲ್ಲಿ, ಹೆಚ್ಚು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಈ ಸಮಯದಲ್ಲಿ, ನಮ್ಮ ರಾಷ್ಟ್ರವನ್ನು ರಕ್ಷಿಸುವ, ಜಾಗರೂಕರಾಗಿ ನಿಂತಿರುವ ನಮ್ಮ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರೊಂದಿಗೆ ನಮ್ಮ ಆಲೋಚನೆಗಳಿವೆ. ನಾಗರಿಕರಾಗಿ, ಸಂಯಮ ಮತ್ತು ಒಗ್ಗಟ್ಟಿನಿಂದ ಪ್ರತಿಕ್ರಿಯಿಸುವುದು ನಮ್ಮ ಕರ್ತವ್ಯ. ಆಚರಣೆಯು ಚಿಂತನೆಗೆ ದಾರಿ ಮಾಡಿಕೊಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಉಗ್ರರು ನಡೆಸಿದ ಭಯೋತ್ಪಾದಕ ದಾಳಿ ಭಾರತೀಯರ ಮರಣಮೃದಂಗ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರದ ಮೂಲಕ ಪಾಕ್ ಉಗ್ರ ನೆಲೆಗಳನ್ನು ಹೊಡೆದುರುಳಿಸಿತ್ತು. ಇದರಿಂದ ಕೆಂಡವಾದ ಪಾಕಿಸ್ತಾನ ಭಾರತದ ಮೇಲೆ ಮತ್ತೆ ಹಗೆ ಸಾಧಿಸಲು ಮುಂದಾಗಿದ್ದು, ಎಲ್ಲ ರೀತಿಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ತೊಡೆತಟ್ಟಿದೆ. ಆದರೂ ಭಾರತ ಪಾಕ್‌ಗೆ ತಕ್ಕ ಉತ್ತರ ನೀಡುತ್ತಾ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಈ ಪರಿಸ್ಥಿತಿಯ ಹಿನ್ನೆಲೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇನ್ನು ಭಾರತೀಯ ಸೇನೆಯ ಬೆನ್ನಿಗೆ ಹಲವು ಸಿನಿಮಾ ನಟ, ನಟಿಯರು ಕೂಡ ನಿಂತಿದ್ದಾರೆ. ಸ್ಯಾಂಡಲ್‌ವುಡ್ ನಟರಾದ ಕಿಚ್ಚ ಸುದೀಪ್, ಡಾಲಿ ಧನಂಜಯ್, ಧ್ರುವ ಸರ್ಜಾ, ಶ್ರೀಮುರುಳಿ ಸೇರಿದಂತೆ ಹಲವು ನಟರು ಸೇನೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದು, ಪಾಕ್‌ಗೆ ತಕ್ಕ ಉತ್ತರ ನೀಡುವಂತೆ ಹುರುಪು ತುಂಬಿದ್ದಾರೆ.












Click it and Unblock the Notifications