'ಹೇಮಾ ಸಮಿತಿ' ರೀತಿಯ ಸಮಿತಿ ಕನ್ನಡ ಚಿತ್ರರಂಗಕ್ಕೂ ಬೇಕು: ಶ್ರುತಿ ಹರಿಹರನ್
ಬೆಂಗಳೂರು, ಸೆಪ್ಟೆಂಬರ್ 04: ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿರುವ ವರದಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚನೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆಯಲಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದಲ್ಲಿಯೂ ನಟಿಯರಿಗೆ ಕಿರುಕುಳಗಳು ಇವೆಯೇ?. ಸಮಿತಿ ರಚನೆಗೆ ಬರೆದಿರುವ ಪತ್ರದಲ್ಲಿ ಹಲವು ನಟಿಯರು ಸಹ ಸಹಿ ಮಾಡಿದ್ದಾರೆ.
ಬಹುಭಾಷಾ ನಟಿ ಶ್ರುತಿ ಹರಿಹರನ್ 'ನ್ಯಾಯಮೂರ್ತಿ ಹೇಮಾ ಸಮಿತಿ' ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚನೆ ಮಾಡಬೇಕು ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 'ಮೀಟೂ ಅಭಿಯಾನ' ಸಂಚಲನ ಉಂಟು ಮಾಡಿತ್ತು. ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ ಮಾಡಿದ್ದರು. ಈಗ ಅವರು ಸಮಿತಿ ರಚನೆ ಮಾಡುವ ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ.

ಶ್ರುತಿ ಹರಿಹರನ್ ಟವಿ 9 ಜೊತೆ ಈ ಕುರಿತು ಮಾತನಾಡಿದ್ದಾರೆ. "ನನಗೆ ಹೇಮಾ ಸಮಿತಿ ವರದಿ ಬಗ್ಗೆ ತುಂಬಾನೇ ಗೌರವವಿದೆ. ಇಷ್ಟು ದಿನಗಳಿಂದ ಈ ಬಗ್ಗೆ ನಾವು ಇದನ್ನು ಮುಚ್ಚುಮರೆಯಲ್ಲಿ ಮಾತನಾಡುತ್ತಿದ್ದೆವು. ಸೆಕ್ಷುವಲ್ ಫೇವರ್ ಅತಿಯಾಗಿದೆ ಎಂದು ಹೇಳುತ್ತಿದ್ದೆವು" ಎಂದು ಹೇಳಿದ್ದಾರೆ.
"ನಾವು ಇಷ್ಟು ದಿನ ಈ ವಿಚಾರವನ್ನು ಆಪ್ತ ಬಳಗದಲ್ಲಿ ಮಾತ್ರ ಹೇಳುತ್ತಿದ್ದೆವು. ಕೆಲವರು ಜೋಕ್ ಕೂಡಾ ಮಾಡುತ್ತಿದ್ದರು. ಆದರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ" ಎಂದು ಶ್ರುತಿ ಹರಿಹರನ್ ಮಾತನಾಡಿದ್ದಾರೆ.
ಮಲಯಾಳಂ ಚಿತ್ರರಂಗದ ಘನತೆಯನ್ನು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಹಾಳು ಮಾಡಿದೆ ಎಂದು ಆರೋಪಿಸಲಾಗುತ್ತಿದೆ. ಈ ಕುರಿತು ಮಾತನಾಡಿರುವ ಶ್ರುತಿ ಹರಿಹರನ್, 'ಇದು ತಪ್ಪು. ಆ ರೀತಿಯಲ್ಲಿ ನೋಡಬಾರದು. ಸಿನಿಮಾ ಕಲೆಗೆ ಸಂಬಂಧಿಸಿದ್ದು. ಅದರೊಳಗೆ ಇರುವ ಕೆಲವ ವಿಚಾರಗಳನ್ನು ಸ್ವಚ್ಛ ಮಾಡಲು ಇದು ಸರಿಯಾದ ಸಮಯ. ನಮ್ಮ ಮನೆಯನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು" ಎಂದು ಹೇಳಿದ್ದಾರೆ.
ಏಕೆ ಬಂತು ಈ ವಿಚಾರ: ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳ ಕುರಿತು ಅಧ್ಯಯನ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಬೇಕು ಎಂದು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ.
ಈ ಪತ್ರಕ್ಕೆ ಕನ್ನಡ ಸಿನಿಮಾ ನಟಿಯರು, ಕಲಾವಿದರು, ನಿರ್ದೇಶಕರು ಸೇರಿದಂತೆ ಸುಮಾರು 153 ಜನರು ಸಹಿ ಹಾಕಿದ್ದಾರೆ. ನ್ಯಾಯಮೂರ್ತಿ ಹೇಮಾ ಸಮಿತಿ ಮಾದರಿಯಲ್ಲಿ ಸಮಿತಿ ರಚನೆ ಮಾಡುವುದಕ್ಕೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದಿರುವ ಪತ್ರದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯ ತನಿಖೆ ಮೂರು ತಿಂಗಳಿನಲ್ಲಿ ಪೂರ್ಣಗೊಳ್ಳಬೇಕು ಮತ್ತು ವರದಿಯ ವಿವರನ್ನು ಶೀಘ್ರವೇ ಸಾರ್ವಜನಿಕಗೊಳಿಸಬೇಕು ಒತ್ತಾಯಿಸಲಾಗಿದೆ.












Click it and Unblock the Notifications