ರಾಕೇಶ್ ಪೂಜಾರಿ ಕುಟುಂಬಕ್ಕೆ ನಟ ದರ್ಶನ್ ಸಹಾಯ: ಕೊನೆಗೂ ಸತ್ಯ ಹೇಳಿದ ಹುಲಿ ಕಾರ್ತಿಕ್
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ದಿಢೀರ್ ಹೃದಯಾಘಾತದಿಂದ ನಿಧನರಾದರು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ರಾಕೇಶ್ ಕೊನೆಯದಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ರಾಕೇಶ್ ಮಾಡಿರುವ ಪಾತ್ರವು ಪ್ರೇಕ್ಷಕರು ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಅದ್ಭುತ ಕಲಾವಿದನನ್ನು ಚಿತ್ರರಂಗ ಕಳೆದುಕೊಂಡಿದೆ ಎಂದು ಕಂಬನಿಯೂ ಮಿಡಿಯುತ್ತಿದ್ದಾರೆ. ಇಡೀ ಕುಟುಂಬಕ್ಕೆ ರಾಕೇಶ್ ಪೂಜಾರಿ ಆಧಾರಸ್ತಂಭವಾಗಿದ್ದರು. ರಾಕೇಶ್ ಅಕಾಲಿಕ ನಿಧನದಿಂದಾಗಿ ಅವರ ಕುಟುಂಬ ಕೂಡ ದಿಕ್ಕುತೋಚದ ಸ್ಥಿತಿಯಲ್ಲಿದೆ. ಆದರೆ ರಾಕೇಶ್ ಕುಟುಂಬಕ್ಕೆ ನಟ ದರ್ಶನ್ ಸಹಾಯ ಮಾಡಲು ಮುಂದೆ ಬಂದ ವಿಚಾರವನ್ನು ಡೆವಿಲ್ ಸಿನಿಮಾದಲ್ಲಿ ನಟಿಸಿರುವ ಹುಲಿ ಕಾರ್ತಿಕ್ ಬಹಿರಂಗಪಡಿಸಿದ್ದಾರೆ.
ದರ್ಶನ್ ಈ ಹಿಂದೆಯೂ ಹಲವು ಕಲಾವಿದರಿಗೆ ಸಹಾಯ ಮಾಡಿದ್ದಾರೆ. ರಾಕೇಶ್ ಪೂಜಾರಿ ಅವರ ನಿಧನದ ಸಮಯದಲ್ಲಿ ದರ್ಶನ್ ಅವರ ಡೆವಿಲ್ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದ ದರ್ಶನ್ ಅವರು ಆಗಷ್ಟೇ ಚೇತರಿಸಿಕೊಂಡು ಡೆವಿಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಇದರ ನಡುವೆಯೂ ದರ್ಶನ್ ರಾಕೇಶ್ ಪೂಜಾರಿ ಸಾವಿಗೆ ಕಂಬನಿ ಮಿಡಿದಿದ್ದಲ್ಲದೆ, ಇದರ ಬಗ್ಗೆ ಮಾಹಿತಿಯೂ ಪಡೆದಿದ್ದರು.

ರಾಕೇಶ್ ಸಾವಿನ ಸುದ್ದಿ ವಿಚಾರ ತಿಳಿದ ತಕ್ಷಣವೇ ದರ್ಶನ್ ಅವರು ನಟಿ ರಕ್ಷಿತಾ ಪ್ರೇಮ್‌ಗೆ ಫೋನ್ ಮಾಡಿ ಏನಾಯಿತು ಎಂದು ವಿಚಾರಿಸಿದ್ದರು. ಇದನ್ನು ರಕ್ಷಿತಾ ಅವರೇ ಹೇಳಿದ್ದರು. ಇನ್ನು ಡೆವಿಲ್ ಶೂಟಿಂಗ್ ಸೆಟ್‌ನಲ್ಲಿಯೂ ದರ್ಶನ್ ಅವರು ರಾಕೇಶ್ ಪೂಜಾರಿ ಸಾವಿನ ಬಗ್ಗೆ ಚರ್ಚೆ ನಡೆಸಿದ್ದರು ಎಂದು ನಟ ಹುಲಿ ಕಾರ್ತಿಕ್ ಅಚ್ಚರಿ ವಿಚಾರವೊಂದನ್ನು ಇತ್ತೀಚಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
"ಡೆವಿಲ್ ಸೆಟ್‌ನಲ್ಲಿ ನಾನು ದರ್ಶನ್ ಅವರನ್ನ ಮೊದಲ ಸಲ ಭೇಟಿಯಾದಾಗ ಅವತ್ತೇ ನಮ್ಮ ರಾಕೇಶ್ ಪೂಜಾರಿ ತೀರಿಕೊಂಡಿದ್ದ. ದರ್ಶನ್ ಅವರು ನನ್ನ ಬಳಿ ಬಂದು ಮೊದಲು ಮಾತನಾಡಿದ್ದೇ ರಾಕೇಶ್‌ಗೆ ಏನಾಯ್ತು? ಅಂತ. ಆಗ ನಾನು ಇದ್ದ ವಿಚಾರವನ್ನು ಅವರಿಗೆ ಹೇಳಿದೆ. ರಾಕಿ ತುಂಬಾ ಬಡವ, ಅವರ ಕುಟುಂಬ ಕಷ್ಟದಲ್ಲಿರುವ ವಿಚಾರವನ್ನೂ ಅವರಿಗೆ ತಿಳಿಸಿದೆ' ಎಂದಿದ್ದಾರೆ.
'ಏನೇ ಸಹಾಯ ಬೇಕಾದ್ರೂ ಕೇಳಿ ಅಂದ್ರು'
'ಸತ್ಯವಾಗಿಯೂ ಈ ವಿಚಾರವನ್ನು ನಾನು ಎಲ್ಲೂ ಹೇಳಿಲ್ಲ. ಈ ವಿಚಾರ ಕೇಳಿ ತಕ್ಷಣವೇ ದರ್ಶನ್ ಸರ್, ರಾಕೇಶ್ ಪೂಜಾರಿ ಕುಟುಂಬಕ್ಕೆ ಸಹಾಯ ಮಾಡುವ ವಿಚಾರವನ್ನು ಪ್ರಸ್ತಾಪಿಸಿದರು. ಆ ರೀತಿ ಏನೇ ಇದ್ರೂ ಮೊದಲು ನಮ್ಮನ್ನ ಕೇಳಿ, ಅವರ ಕುಟುಂಬಕ್ಕೆ ಏನು ಬೇಕಾದ್ರೂ ಮಾಡೋಣ, ನಮ್ಮಿಂದ ಏನಾಗುತ್ತೋ ಅದು ಒಳ್ಳೆಯದನ್ನೇ ಮಾಡೋಣ ಅಂದ್ರು' ಎಂದು ಹುಲಿ ಕಾರ್ತಿಕ್ ಹೇಳಿದ್ದಾರೆ.
ರಾಕೇಶ್ ಪೂಜಾರಿ ತನ್ನ ಸಹೋದರಿಯ ಮದುವೆ ಮಾಡುವ ಕನಸು ಕಟ್ಟಿಕೊಂಡಿದ್ದರು. ಆದರೆ ವಿಧಿಯಾಟಕ್ಕೆ ಅವರು ಸಣ್ಣ ವಯಸ್ಸಲ್ಲೇ ಬಾರದ ಲೋಕಕ್ಕೆ ಹೋಗಬೇಕಾಯಿತು. ಇನ್ನು ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದ ರಾಕೇಶ್ ಸಾವಿಗೆ ರಿಷಬ್ ಶೆಟ್ಟಿ ಕೂಡ ಕಂಬನಿ ಮಿಡಿದಿದ್ದರು. ರಾಕೇಶ್ ನಿಧನರಾದ ಹಲವು ದಿನಗಳ ಬಳಿಕ ರಿಷಬ್ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು. ಈ ವೇಳೆ ರಾಕೇಶ್ ಕುಟುಂಬಕ್ಕೆ ಕೈಲಾದಷ್ಟು ಸಹಾಯ ಕೂಡ ಮಾಡಿದ್ದರು ಎನ್ನಲಾಗಿದೆ.












Click it and Unblock the Notifications