Bigg Boss: ದೇವಸ್ಥಾನಕ್ಕೆ ಅಪಚಾರ ಆರೋಪ; ಬಿಗ್‌ಬಾಸ್ ಸೆಲೆಬ್ರಿಟಿ ವಿರುದ್ಧ ದೂರು ದಾಖಲು
ಬಿಗ್‌ಬಾಸ್ ಮಾಜಿ ಸ್ಪರ್ಧಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಪ್ರಸಿದ್ಧ ದೇವಸ್ಥಾನಕ್ಕೆ ತೆರಳಿ ಅಪಚಾರ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗ ಧಕ್ಕೆ ತಂದಿದ್ದಾರೆ ಎಂದು ವಿವಾದ ಭುಗಿಲೆದ್ದಿದೆ. ಈ ಸಂಬಂಧ ಆ ಸೆಲೆಬ್ರಿಟಿ ಮೇಲೆ ದೂರು ಕೂಡ ದಾಖಲಾಗಿದೆ. ದೇವಸ್ಥಾನಕ್ಕೆ ತೆರಳಿದ ನಂತರ ತನ್ನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಬಳಿಕ ಈ ವಿವಾದ ಹುಟ್ಟುಕೊಂಡಿದೆ. ನಂತರ ಆ ಪ್ರಸಿದ್ಧ ದೇವಾಲಯದ ಶುದ್ಧೀಕರಣ ಕೂಡ ಮಾಡಲಾಗಿದೆ.
ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಮಲಯಾಳಂ ಬಿಗ್‌ಬಾಸ್ ಖ್ಯಾತಿಯ ಜಾಸ್ಮಿನ್ ಜಾಫರ್ (Jasmin Jaffer) ಅವರು ಕೇರಳದ ತ್ರಿಶೂರ್‌ನಲ್ಲಿರುವ ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನಕ್ಕೆ (Guruvayur temple) ಅಪಚಾರ ಮಾಡಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ರೀಲ್ ಫೋಟೋ ಪೋಸ್ಟ್ ಮಾಡಿದ ನಂತರ ಜಾಸ್ಮಿನ್ ವಿವಾದಕ್ಕೆ ಸಿಲುಕಿದ್ದಾರೆ.

ದೇವಸ್ಥಾನದ ಪವಿತ್ರ ಕೊಳದಲ್ಲಿ ತನ್ನ ಪಾದಗಳನ್ನು ಮುಳುಗಿಸಿ, ಕಾಲುಗಳನ್ನು ತೊಳೆದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ಕೇಳಿಬಂದಿದ್ದು, ನಂತರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಈ ವಿವಾದದ ನಂತರ ದೇವಾಲಯದ ಆಡಳಿತ ಮಂಡಳಿಯು ದೇವಸ್ಥಾನದಲ್ಲಿ ಶುದ್ಧೀಕರಣದ ಆಚರಣೆಯನ್ನು ಸಹ ನಡೆಸಿದೆ.
ಒಂದು ವಾರದ ಹಿಂದೆ ಜಾಸ್ಮಿನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಾಂಪ್ರದಾಯಿಕ ಸೀರೆಯನ್ನು ಧರಿಸಿರುವ ರೀಲ್ ಪೋಸ್ಟ್ ಮಾಡಿದ್ದರು. ವೀಡಿಯೊದಲ್ಲಿ ಅವರು ಗುರುವಾಯೂರ್ ದೇವಸ್ಥಾನದ ರುದ್ರತೀರ್ಥಂ ಕೊಳದಲ್ಲಿ ತಮ್ಮ ಪಾದಗಳನ್ನು ಮುಳುಗಿಸಿ, ಅದರ ಮುಂದೆ ಪೋಸ್ ನೀಡಿ, ಹೂವುಗಳೊಂದಿಗೆ ಆಟವಾಡುತ್ತಿದ್ದರು. ಆದರೆ ದೇವಾಲಯದ ನಿಯಮದ ಪ್ರಕಾರ ಇದು ನಿಷಿದ್ಧ.
ಈ ಕೊಳವನ್ನು ಸಾಮಾನ್ಯವಾಗಿ ಶ್ರೀಕೃಷ್ಣನ ವಿಗ್ರಹಕ್ಕೆ ಸ್ನಾನ ಮಾಡುವಂತಹ ಧಾರ್ಮಿಕ ಉದ್ದೇಶಗಳಿಗಾಗಿ ಕಾಯ್ದಿರಿಸಲಾಗಿದೆ. ದೇವಾಲಯದ ಒಳಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವುದನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಿಂದೂಯೇತರರು ಆವರಣಕ್ಕೆ ಪ್ರವೇಶಿಸುವುದನ್ನು ಸಹ ನಿಷೇಧಿಸಲಾಗಿದೆ. ದೇವಾಲಯದ ಪದ್ಧತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೆಟ್ಟಿಗರು ಹಾಗೂ ದೇವಾಲಯದ ಸಿಬ್ಬಂದಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವಿವಾದ ಸೃಷ್ಟಿಯಾಗಿದ್ದರಿಂದ ವಿಡಿಯೋ ಡಿಲೀಟ್ ಕೂಡ ಆಗಿದೆ.
ಕೊಳ, ದೇವಸ್ಥಾನ ಶುದ್ಧೀಕರಣ
ವಿಡಿಯೋ ವೈರಲ್ ಆಗಿದ್ದರಿಂದ ಭಾರಿ ವಿರೋಧ ವ್ಯಕ್ತವಾಯತಿತು. ಕೂಡಲೇ ಎಚ್ಚೆತ್ತ ದೇವಸ್ಥಾನದ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಫೋಟೋ ನಿಷೇಧ ಹಾಗೂ ಹಿಂದೂಯೇತರರ ಪ್ರವೇಶ ಸೇರಿದಂತೆ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಾಸ್ಮಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂದು ದೇವಸ್ಥಾನವು ಆ ಕೊಳದಲ್ಲಿ ಶುದ್ಧೀಕರಣ ವಿಧಿವಿಧಾನಗಳನ್ನು ನಡೆಸಿದೆ. ಅಷ್ಟೇ ಅಲ್ಲದೆ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನದವರೆಗೆ ದೇವರ ದರ್ಶನವನ್ನು ಸಹ ನಿರ್ಬಂಧಿಸಲಾಯಿತು ಎಂದು ವರದಿಯಾಗಿದೆ.
ಬಿಗ್ ಬಾಸ್ ಮಲಯಾಳಂ ಸೀಸನ್ 6 ರಲ್ಲಿ ಎರಡನೇ ರನ್ನರ್ ಅಪ್ ಆಗಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಿದ ಜಾಸ್ಮಿನ್, ನೇರ ಮಾತು ಮತ್ತು ದಿಟ್ಟತನಕ್ಕೆ ಹೆಸರುವಾಸಿಯಾಗಿದ್ದರು. ಆ ಸೀಸನ್‌ನ ಅತ್ಯಂತ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಜಾಸ್ಮಿನ್ ಒಬ್ಬರಾಗಿದ್ದರು.












Click it and Unblock the Notifications