ನಿಮ್ಮ ಐಷಾರಾಮಿ ಎಸಿ ರೂಂಗಳಲ್ಲಿ ಬೀದಿನಾಯಿಗಳಿಗೆ ಜಾಗ ಕೊಡಿ: ಶ್ವಾನಪ್ರಿಯರಿಗೆ ಆರ್‌ಜಿವಿ ಟಾಂಗ್
ದೆಹಲಿಯಲ್ಲಿ ಬೀದಿನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಅವುಗಳು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಖಡಕ್ ಆದೇಶ ನೀಡಿದೆ. ಆದರೆ ಇದಕ್ಕೆ ಶ್ವಾನಪ್ರಿಯರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬೀದಿನಾಯಿಗಳ ಬದುಕಿನ ಹಕ್ಕಿನ ಮೇಲೆ ದಾಳಿಯಾಗುತ್ತಿದೆ ಎಂದು ಬೀದಿಗಿಳಿದು ಬೃಹತ್ ಪ್ರತಿಭಟನೆಯೂ ನಡೆಸುತ್ತಿದ್ದಾರೆ. ಈ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ (ಆರ್‌ಜಿವಿ) ವ್ಯಂಗ್ಯವಾಡಿದ್ದಾರೆ. ನೀವು ನಿಜವಾಗಿಯೂ ಶ್ವಾನಪ್ರಿಯರೇ ಆಗಿದ್ದರೆ ಬೀದಿನಾಯಿಗಳಿಗೆ ನಿಮ್ಮ ಐಷಾರಾಮಿ ಎಸಿ ರೂಂಗಳಲ್ಲಿ ಉಳಿಯಲು ಅವಕಾಶ ಕೊಡಿ ಎಂದು ತಿರುಗೇಟು ನೀಡಿದ್ದಾರೆ.
ಬೀದಿನಾಯಿಗಳಿಂದ ನಿಜವಾಗಿ ಅಪಾಯ ಎದುರಾಗಿರುವುದು ಬಡವರಿಗೆ ಹೊರತು ನಿಮ್ಮಂತಹ ಶ್ರೀಮಂತ ಶ್ವಾನಪ್ರಿಯರಿಗಲ್ಲ ಎಂದು ತಮ್ಮದೇ ಸ್ಟೈಲಲ್ಲಿ ಜಾಡಿಸಿದ್ದಾರೆ. ಶ್ರೀಮಂತ ಮಹಿಳೆಯರು ತಮ್ಮ ಅಮೂಲ್ಯ ನಾಯಿಗಳನ್ನು ಹೆಗಲ ಮೇಲೆ ಹೊತ್ತುಕೊಂಡರೆ, ಅವರ ಸ್ವಂತ ಮಕ್ಕಳು ತಮ್ಮ ಸೇವಕಿಯ ಹೆಗಲ ಮೇಲೆ ಹೊರೆಯಾಗುತ್ತಾರೆ. ಅವರು ನಿಮ್ಮ ಪಾಲಿಗೆ ಶ್ವಾನಪ್ರಿಯರೇ? ಬಹುಶಃ ಅವರು ಹಿಂದಿನ ಜನ್ಮದಲ್ಲಿ ಬೀದಿ ನಾಯಿಗಳಾಗಿರಬಹುದು ಎಂದು ಆರ್‌ಜಿವಿ ಗೇಲಿ ಮಾಡಿದ್ದಾರೆ.

ನಾಯಿಯು ನಿಷ್ಠೆಯಿಂದ ಇರಲು ತಿಳಿದಿಲ್ಲದ ಕಾರಣ ಮಾತ್ರ ಅದು ನಿಷ್ಠೆಯಿಂದ ಕೂಡಿರುತ್ತದೆ. ನೀವು ನಾಯಿಗಳು ಮನುಷ್ಯರಿಗಿಂತ ಉತ್ತಮ" ಎಂದು ಹೇಳಿದಾಗ ಅದು ನಿಮ್ಮ ಸುತ್ತಲಿನ ನಿರ್ದಿಷ್ಟ ಮನುಷ್ಯರ ಬಗ್ಗೆ ಹೇಳುವ ಕಾಮೆಂಟ್. ಆದರೆ ನಿಜವಾಗಿಯೂ ನಿಮ್ಮ ನಿರ್ದಿಷ್ಟ ನಾಯಿಗಳ ಬಗ್ಗೆ ಅಲ್ಲ ಎಂದು ನಾನು ಎಲ್ಲ ಶ್ವಾನಪ್ರಿಯರಿಗೆ ತಿಳಿಸಲು ಬಯಸುತ್ತೇನೆ. ಮೂಲಭೂತವಾಗಿ ಹೇಳಬೇಕೆಂದರೆ, ದೇವರು ಸೃಷ್ಟಿಸಿದ ಯಾವುದೇ ಜೀವಿಯನ್ನು ಯಾರಾದರೂ ಪ್ರೀತಿಸಬಹುದು. ಅದು ಮನುಷ್ಯ, ನಾಯಿ, ಬೆಕ್ಕು, ಸೊಳ್ಳೆ, ಇಲಿ, ಕೊರೊನಾ ವೈರಸ್ ಇತ್ಯಾದಿ. ಇದೆಲ್ಲವೂ ತಮ್ಮ ಮನೆಯಲ್ಲಿ ಇರುವವರೆಗೆ ಮಾತ್ರ. ಆದರೆ ಇಲ್ಲಿ ನಾವು ಬೀದಿಗಳಲ್ಲಿ ಮಕ್ಕಳನ್ನು ಕೊಲ್ಲುವ ಬೀದಿ ನಾಯಿಗಳು ಬಗ್ಗೆ ಮಾತನಾಡುತ್ತಿದ್ದೇವೆ ಎಂದಿದ್ದಾರೆ.
"ರಾಜಕಾರಣಿಗಳು, ಅಧಿಕಾರಿಗಳನ್ನು ಕಚ್ಚಿ"
ಶ್ವಾನಪ್ರಿಯರು ಸರ್ಕಾರಿ ಆಡಳಿತಗಾರರನ್ನು ದೂಷಿಸುತ್ತಿದ್ದರೆ, ಅವರು ಹೋಗಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕಾಲುಗಳನ್ನು ಮತ್ತು ಅವರ ದೇಹದ ಇತರ ಭಾಗಗಳನ್ನು ಕಚ್ಚಬೇಕು. ಇದರಿಂದ ಅವರು ವೇಗವಾಗಿ ಪರಿಹಾರ ಕೊಡಬಹುದು. ಆದರೆ ಅಷ್ಟರಲ್ಲಿ ಬೀದಿ ನಾಯಿಗಳಿಂದ ಕ್ರೂರವಾಗಿ ಕೊಲ್ಲಲ್ಪಡುತ್ತಿರುವ ಬಡ ಮಕ್ಕಳ ಬಗ್ಗೆ ಅವರು ಯೋಚಿಸಬೇಕು ಎಂದು ಟಾಂಗ್ ನೀಡಿದ್ದಾರೆ.
ಇಲ್ಲಿ ಬೂಟಾಟಿಕೆ ಇದೆ, ನಾಯಿ ಪ್ರಿಯರು ತಮ್ಮ ಆಮದು ಮಾಡಿದ ತಳಿಗಳನ್ನು ಸ್ಯಾಟಿನ್ ಕುಶನ್‌ಗಳ ಮೇಲೆ ಕೂರಿಸಿ, ತಮ್ಮ ಹವಾನಿಯಂತ್ರಿತ ಮನೆಗಳಿಂದ ಭಾಷಣ ಬಿಗಿಯುತ್ತಾರೆ, ಉಪನ್ಯಾಸ ನೀಡುತ್ತಾರೆ. ಆದರೆ ಬಡವರು ಬೀದಿಗಳಲ್ಲಿ ನಿಜವಾದ ಸಮಸ್ಯೆಯನ್ನ ಎದುರಿಸುತ್ತಾರೆ. ಅವರಿಗೆ ತುಂಬಾ ಕಾಳಜಿ ಇದ್ದರೆ ಅವರು ತಮ್ಮ ಅತಿಥಿ ಕೊಠಡಿಗಳನ್ನು ಬೀದಿ ನಾಯಿಗಳಿಗೆ ತೆರೆಯಲಿ ಎಂದು ಸಲಹೆ ನೀಡಿದ್ದಾರೆ. ನಿಮ್ಮ ಐಷಾರಾಮಿ ಸ್ಥಳಗಳನ್ನು ಬೀದಿ ನಾಯಿಗಳಿಗೆ ತೆರೆಯಿರಿ, ನಿಮ್ಮ ಮುದ್ದಾದ ಮಕ್ಕಳನ್ನು ನಾಯಿ ಕಡಿತದಿಂದ ಮುಕ್ತವಾಗಿ ಇರಿಸಿಕೊಂಡು, ಸರ್ಕಾರಕ್ಕೆ ಸ್ಥಳಾಂತರದ ಬಗ್ಗೆ ಬೋಧಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications