Gilli: ಗಿಲ್ಲಿ ಬಿಗ್‌ಬಾಸ್ ಗೆಲ್ಲೋದು ಪಕ್ಕಾ ಎಂದ ನಟ ಶಿವರಾಜ್ ಕುಮಾರ್
ಬಿಗ್‌ಬಾಸ್ ಕನ್ನಡ ಸೀಸನ್-12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಸ್ಪರ್ಧಿಗಳ ಗೆಲುವಿನ ಲೆಕ್ಕಾಚಾರ, ಅಭಿಮಾನಿಗಳ ನಿರೀಕ್ಷೆ ಹಾಗೂ ಸಾಮಾಜಿಕ ಜಾಲತಾಣಗಳ ಚರ್ಚೆಗಳು ಜೋರಾಗಿವೆ. ಇದರ ನಡುವೆ, "ಈ ಬಾರಿ ಬಿಗ್‌ಬಾಸ್ ಟ್ರೋಫಿ ಗಿಲ್ಲಿಯ ಕೈ ಸೇರುವುದು ಖಚಿತ" ಎಂಬ ಟಾಕ್ ಎಲ್ಲೆಡೆಯಿಂದ ಕೇಳಿಬರುತ್ತಿದ್ದು, ಇದೀಗ ಈ ಮಾತಿಗೆ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಬೆಂಬಲವೂ ಸಿಕ್ಕಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಶಿವರಾಜ್‌ಕುಮಾರ್ ಅವರು ಗಿಲ್ಲಿಯ ಬಗ್ಗೆ ಮಾತನಾಡುತ್ತಾ, 'ಗಿಲ್ಲಿಯೇ ಬಿಗ್‌ಬಾಸ್ ಗೆಲ್ಲೋದು' ಎಂದು ಟೇಬಲ್ ತಟ್ಟಿ ಹೇಳಿದ್ದಾರೆ. ಅವರ ಈ ಮಾತುಗಳು ಗಿಲ್ಲಿ ಅಭಿಮಾನಿಗಳ ನಡುವೆ ಸಂಚಲನ ಮೂಡಿಸಿದ್ದು, ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ, ಶಿವಣ್ಣ ಅವರು ಗಿಲ್ಲಿಗೆ "ಆಲ್ ದಿ ಬೆಸ್ಟ್" ಎಂದು ಶುಭಾಶಯ ಕೋರಿ, ಅವರ ಮೇಲೆ ಹೊಂದಿರುವ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಶಿವರಾಜ್‌ಕುಮಾರ್ ಅವರ ಈ ಹೇಳಿಕೆಗೆ ಗಿಲ್ಲಿ ಅಭಿಮಾನಿಗಳು ಭಾರೀ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ "ಶಿವಣ್ಣ ಸಪೋರ್ಟ್ ಇದ್ದರೆ ಗೆಲುವು ಪಕ್ಕಾ", "ಗಿಲ್ಲಿ ವಿನ್ನರ್ ಆಗೋದು ಗ್ಯಾರಂಟಿ" ಎಂಬ ಪೋಸ್ಟ್‌ಗಳು ಟ್ರೆಂಡ್ ಆಗುತ್ತಿವೆ. ಕೆಲವರು ಇದನ್ನು ಗಿಲ್ಲಿಯ ಆಟಕ್ಕೆ ಸಿಕ್ಕಿರುವ ದೊಡ್ಡ ಗೌರವ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಫಿನಾಲೆಗೂ ಮುನ್ನವೇ ಗೆಲುವಿನ ಘೋಷಣೆ ಎಂದು ಕರೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಗಿಲ್ಲಿ ಹವಾ!
ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಗಿಲ್ಲಿ ಆರಂಭದಿಂದಲೇ ತಮ್ಮದೇ ಆದ ಆಟದ ಶೈಲಿಯಿಂದ ಗಮನ ಸೆಳೆದಿದ್ದರು. ಟಾಸ್ಕ್‌ಗಳಲ್ಲಿ ತೋರಿದ ಶ್ರಮ, ಸ್ಪಷ್ಟ ಅಭಿಪ್ರಾಯ, ನೇರ ನಡವಳಿಕೆ ಹಾಗೂ ಮನರಂಜನಾ ಅಂಶಗಳು ಪ್ರೇಕ್ಷಕರನ್ನು ಆಕರ್ಷಿಸಿವೆ ಎನ್ನಲಾಗುತ್ತಿದೆ. ಜೊತೆಗೆ, ಮನೆಯೊಳಗಿನ ಹಲವು ಸಂಕಷ್ಟಕರ ಸಂದರ್ಭಗಳಲ್ಲಿ ತೋರಿದ ಧೈರ್ಯ ಮತ್ತು ಸಮತೋಲನವು ಅವರಿಗೆ ಭಾರೀ ಮತ ಬೆಂಬಲ ಸಿಗಲು ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಫಿನಾಲೆ ಹತ್ತಿರವಾಗುತ್ತಿದ್ದಂತೆ, ಇತರೆ ಸ್ಪರ್ಧಿಗಳ ಅಭಿಮಾನಿಗಳೂ ತಮ್ಮ ನೆಚ್ಚಿನವರ ಗೆಲುವಿಗಾಗಿ ಅಭಿಯಾನ ಆರಂಭಿಸಿದ್ದಾರೆ. ಆದರೂ, ಗಿಲ್ಲಿಯ ಗೆಲುವಿನ ಬಗ್ಗೆ ಹರಿದಾಡುತ್ತಿರುವ ಟಾಕ್ ಮತ್ತು ಶಿವರಾಜ್‌ಕುಮಾರ್ ಅವರಂತಹ ಹಿರಿಯ ನಟರ ಬೆಂಬಲವು ಈ ಸೀಸನ್‌ಗೆ ಮತ್ತಷ್ಟು ರಂಗೇರಿಸಿದೆ.
ಇದೀಗ ಎಲ್ಲರ ಕಣ್ಣುಗಳು ಗ್ರ್ಯಾಂಡ್ ಫಿನಾಲೆಯ ಮೇಲಿದ್ದು, ಶಿವಣ್ಣ ಅವರ ಭರವಸೆಯ ಮಾತುಗಳು ನಿಜವಾಗುತ್ತವೆಯೇ, ಅಥವಾ ಬಿಗ್‌ಬಾಸ್ ಮನೆಯೊಳಗೆ ಅಂತಿಮ ಕ್ಷಣದಲ್ಲಿ ಬೇರೆ ತಿರುವು ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಎಂದಿನಂತೆ ಅಂತಿಮ ತೀರ್ಪು ಪ್ರೇಕ್ಷಕರ ಮತದಾನದಲ್ಲೇ ನಿರ್ಧಾರವಾಗಲಿದ್ದು, ಬಿಗ್‌ಬಾಸ್ ಕನ್ನಡ ಸೀಸನ್-12ರ ವಿಜೇತನ ಹೆಸರು ಫಿನಾಲೆ ದಿನವೇ ಬಹಿರಂಗವಾಗಲಿದೆ.












Click it and Unblock the Notifications