Rishab Shetty: ರಿಷಬ್ ಶೆಟ್ಟಿಯ ಶಿವಾಜಿ ಫಸ್ಟ್ ಲುಕ್ ರಿವೀಲ್, ರಿಲೀಸ್ ಯಾವಾಗ?
ಇಂದು ಮರಾಠ ದೊರೆ ಛತ್ರಪತಿ ಶಿವಾಜಿ ಅವರ ಜಯಂತಿ ಹಿನ್ನೆಲೆ ಕನ್ನಡದ ನಟ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ನಟಿಸುತ್ತಿರುವ ಬಹುನಿರೀಕ್ಷಿತ "ಛತ್ರಪತಿ ಶಿವಾಜಿ ಮಹಾರಾಜ್" ಸಿನಿಮಾದ ವಿಶೇಷ ಪೋಸ್ಟರ್ ರಿಲೀಸ್ ಆಗಿದೆ. ಅಲ್ಲದೆ ಈ ಸಿನಿಮಾದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ. 2027ರ ಜನವರಿ 21ಕ್ಕೆ ಈ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದ ಹೊಸ ಪೋಸ್ಟರ್ ವೈರಲ್ ಆಗಿದೆ. ಛತ್ರಪತಿ ಶಿವಾಜಿ ಮಹಾರಾಜನಾಗಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಸಿನಿಮಾ ಸಂದೀಪ್ ಸಿಂಗ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮರಾಠಿ, ಮಲಯಾಳಂ, ಬೆಂಗಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ.

ಈ ಪೋಸ್ಟರ್‌ಗಳನ್ನು ಹಂಚಿಕೊಂಡಿರುವ ನಿರ್ದೇಶಕ ಸಂದೀಪ್ ಸಿಂಗ್, ಜೈ ಭವಾನಿ, ಜೈ ಶಿವಾಜಿ, ಹರ ಹರ ಮಹಾದೇವ್ ಎಂದು ಬರೆದುಕೊಂಡಿದ್ದಾರೆ. ಮಹಾನ್ ಯೋಧ, ರಾಜ, ಭಾರತದ ಹೆಮ್ಮೆ ಛತ್ರಪತಿ ಶಿವಾಜಿ ಅವರ 395ನೇ ಜನ್ಮ ವಾರ್ಷಿಕೋತ್ಸವದಂದು ನಾವು ಹೆಮ್ಮೆಯಿಂದ ನಮ್ಮ ಸಿನಿಮಾದ ಮೊದಲ ಲುಕ್ ಅನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇಡೀ ಖಂಡದ ಹಣೆಬರಹವನ್ನು ಬದಲಿಸಿದ ಪೌರಾಣಿಕ ರಾಜನ ಶಕ್ತಿ ಮತ್ತು ಭಕ್ತಿಯನ್ನು ಪ್ರದರ್ಶಿಸುತ್ತೇವೆ. ಶಿವಾಜಿ ಅವರ ಅಸಾಧಾರಣ ಸಾಹಸ, ಗೌರವ ಮತ್ತು ಸ್ವರಾಜ್ಯವನ್ನು ಜೀವಂತವಾಗಿ ತರಲು ಇದು ಒಂದು ಅತ್ಯುನ್ನತ ಗೌರವವಾಗಿದೆ. 21ನೇ ಜನವರಿ 2027ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಿದ್ದಾರೆ.
ರಿಷಬ್ ಪಾತ್ರಕ್ಕೆ ವಿರೋಧ: ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಬೇರೆ ಚಿತ್ರರಂಗದಿಂದಲೂ ಆಫರ್ ಬಂದಿವೆ. ತೆಲುಗಿನಲ್ಲಿ ಪೌರಾಣಿಕ ಹನುಮಾನ್ ಸಿನಿಮಾದಲ್ಲೂ ರಿಷಬ್ ನಟಿಸುತ್ತಿದ್ದಾರೆ. ಇತ್ತ ಬಾಲಿವುಡ್‌ನ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ಶಿವಾಜಿ ಪಾತ್ರ ಕೂಡ ರಿಷಬ್‌ಗೆ ಅರಸಿ ಬಂದಿದೆ. ಈ ವಿಚಾರ ಘೋಷಣೆಯಾದ ಬಳಿಕ ಹಲವರು ರಿಷಬ್‌ಗೆ ಅಭಿನಂದಿಸಿದ್ದರು. ಮತ್ತೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ಕೂಡ ವ್ಯಕ್ತವಾಗಿತ್ತು.
ಮರಾಠರಿಗೂ ಕನ್ನಡಿಗರಿಗೂ ಇರುವ ಕಿರಿಕ್ ವಿಚಾರಗಳನ್ನು ಎಳೆದು ತಂದು ರಿಷಬ್ ಅವರ ಈ ಪಾತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಶಿವಾಜಿ ಪಾತ್ರ ಮಾಡುತ್ತಿರುವ ರಿಷಬ್ ಶೆಟ್ಟಿ ಕನ್ನಡ ವಿರೋಧಿ ಎಂಬ ಹಣೆಪಟ್ಟಿಯೂ ನೀಡಿದ್ದರು. ಕನ್ನಡಿಗರಾದ ರಿಷಬ್ ಅವರು ಯಾವ ಕಾರಣಕ್ಕೂ ಶಿವಾಜಿ ಪಾತ್ರ ಮಾಡಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಈ ಪಾತ್ರ ಮಾಡುವುದಾದರೆ "ಬಾಯ್ಕಾಟ್ ರಿಷಬ್ ಶೆಟ್ಟಿ" ಎಂದೂ ಅಭಿಯಾನ ಶುರು ಮಾಡಿದ್ದರು. ರಿಷಬ್ ಅವರ ಶಿವಾಜಿ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಜೋರಾಗಿಯೇ ನಡೆದಿದ್ದವು.

ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ ಸಂದರ್ಭದಲ್ಲೇ ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿರುವುದು ಪ್ರೇಕ್ಷಕರಲ್ಲಿ ಸಂತಸ ಮನೆಮಾಡಿದೆ. ಈ ಸಿನಿಮಾಗಾಗಿ ಹಲವರು ಕಾಯುತ್ತಿದ್ದು, ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಹೇಗೆ ಕಾಣಿಸಲಿದ್ದಾರೆ ಎಂಬ ಕುತೂಹಲದಲ್ಲಿದ್ದಾರೆ.












Click it and Unblock the Notifications