Huccha Venkat: ವಿಷ್ಣು ಅಭಿಮಾನಿಯಾಗಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್
ಬೆಂಗಳೂರು, ಫೆಬ್ರವರಿ.20: ತಮ್ಮ ವಿಚಿತ್ರ ಮ್ಯಾನರಿಸಮ್, ಭಾಷೆ, ಲುಕ್‌ನಿಂದಲೇ ಸುದ್ದಿಯಾದವರು ನಟ ಹುಚ್ಚ ವೆಂಕಟ್. ಸಿನಿಮಾ ರಂಗದಲ್ಲಿ ಕೆಲ ವರ್ಷಗಳು ಸುದ್ದಿಯಲ್ಲಿದ್ದ ಅವರು, ನಿರ್ಗತಿಕರಾಗಿರೋ ರೀತಿಯಲ್ಲಿ ಕಾಣಿಸಿಕೊಂಡು ವೈರಲ್ ಆಗಿದ್ದರು. ಏನಾಗಿದೆ ಇವರಿಗೆ ಎಂಬ ಮಾತುಗಳ ಬೆನ್ನಲ್ಲೆ ಮತ್ತೆ ಸುದ್ದಿಯಲ್ಲಿದ್ದಾರೆ ಹುಚ್ಚ ವೆಂಕಟ್.
ಹುಚ್ಚ ವೆಂಕಟ್ ಹೆಸರು ಕೇಳಿದ ತಕ್ಷಣ ಕಣ್ಣ ಮುಂದೆ ಬರುವುದು ಅವರ ಕಣ್ಣುಗಳು ಮತ್ತು ಕೆದರಿದ ಕೂದಲಿನ ಮುಖ. ಮತ್ತೆ ಏನು ಅವಾಂತರ ಮಾಡಿಕೊಂಡರೋ, ಯಾವ ಬೀದಿಯಲ್ಲಿ ಮತ್ತೆ ಜಗಳ ಮಾಡಿಕೊಂಡರೇ ಎಂದು ಒಂದು ಕ್ಷಣ ಅನಿಸುವುದು ನಿಜ. ಆದರೆ, ಈ ಬಾರಿ ಅವರು ಸುದ್ದಿಯಾಗ್ತಿರೋದು ಒಳ್ಳೆ ವಿಷಯಕ್ಕೆ. ಅದು ಸಿನಿಮಾಗೆ ಸಂಬಂಧಿಸಿದ ವಿಚಾರಕ್ಕೆ.

ಮತ್ತೆ ಚಿತ್ರರಂಗಕ್ಕೆ ಬಂದ ಹುಚ್ಚ ವೆಂಕಟ್!
ಸಿನಿಮಾಗಳಲ್ಲಿ ಹೆಣ್ಣು ಮಕ್ಕಳನ್ನು ಹೀಗೆಯೇ ತೋರಿಸಬೇಕು. ಹೆಣ್ಣು ಮಕ್ಕಳು ಬಟ್ಟೆ ಬಿಚ್ಚಿ ಕುಣಿಯೋ ಸಿನಿಮಾಗಳನ್ನ ಬ್ಯಾನ್ ಮಾಡಬೇಕು ಎಂದು ಸಾಕಷ್ಟು ಹೋರಾಟ ಮಾಡಿದ್ದರು ವೆಂಕಟರಾಮ್ ಲಕ್ಷ್ಮಣ್ ಅಂದರೆ ಹುಚ್ಚ ವೆಂಕಟ್. ಹುಚ್ಚ ವೆಂಕಟ್ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟು ತುಂಬಾ ವರ್ಷಗಳಾಗಿವೆ. ಅವರ ನಟನೆಯ ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದಿವೆ. ಈಗ ಮತ್ತೆ ಕಿರು ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ನಟ, ನಿರ್ಮಾಪಕ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೆ ಸಿನಿಮಾ ರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಸಂಘವಾದ ಡಾ.ವಿಷ್ಣು ಸೇನಾ ಸಮಿತಿ ನಿರ್ಮಾಣದಲ್ಲಿ ಮೂಡಿ ಬಮದಿರುವ "ವಿಷ್ಣು ಮಾರ್ಗ" ಕಿರುಚಿತ್ರದ ಮೂಲಕ ಹುಚ್ಚ ವೆಂಕಟ್ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

"ವಿಷ್ಣುಮಾರ್ಗ" ಕಿರುಚಿತ್ರದಲ್ಲಿ ಹುಚ್ಚ ವೆಂಕಟ್ ಅವರು, ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಹುಚ್ಚ ವೆಂಕಟ್ ಅಪ್ಪಟ ವಿಷ್ಣುವರ್ಧನ್ ಅವರ ಅಭಿಮಾನಿ. ಈ ಕಿರುಚಿತ್ರದಲ್ಲಿ ಕೂಡ ಅವರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.
ಸದ್ಯ "ವಿಷ್ಣುಮಾರ್ಗ" ಕಿರುಚಿತ್ರದ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದ್ದು, ಫೆಬ್ರವರಿ 29 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಾಲ್ವರು ವಿಷ್ಣು ಅಭಿಮಾನಿಗಳಿಗೆ ಬುದ್ಧಿ ಹೇಳುವ, ಅವರನ್ನು ದಂಡಿಸುವ ದೊಡ್ಡ ಅಭಿಮಾನಿಯಾಗಿ ಹುಚ್ಚ ವೆಂಕಟ್ ನಟಿಸಿದ್ದಾರೆ ಎನ್ನುವಂತಿದೆ ಟ್ರೈಲರ್. ಫೆಬ್ರವರಿ 29 ಕ್ಕೆ ಬಿಡುಗಡೆಯಾಗುವ ಕಿರುಚಿತ್ರದಲ್ಲಿ ಎಲ್ಲಕ್ಕೂ ಉತ್ತರ ದೊರೆಯಲಿದೆ.












Click it and Unblock the Notifications