Yash: 'ಪುಟ್ಟಕ್ಕನ ಮಕ್ಕಳು' ನಟ ಧನುಷ್‌ಗೆ ಕರೆ ಮಾಡಿ ಭೇಷ್ ಎಂದ ಯಶ್; ಕಾರಣವೇನು?
ಸಿನಿಮಾರಂಗದಲ್ಲಿ ಹಿರಿಯ ನಟರು, ಸೂಪರ್ ಸ್ಟಾರ್ ಗಳು ಕಿರಿಯ ನಟರನ್ನು, ಯುವ ನಟರನ್ನು ಬೆಳೆಸುವುದು ಸಂಪ್ರದಾಯ. ಹಲವು ಸೂಪರ್ ಸ್ಟಾರ್ ನಟರು ಯುವ ನಟರಿಗೆ ಬೆಂಬಲ ಕೊಡುವುದನ್ನು ನೋಡಬಹುದು. ರಾಕಿಂಗ್ ಸ್ಟಾರ್ ಯಶ್ ಕೂಡ ಹಲವು ಯುವ ನಟರಿಗೆ ಬೆಂಬಲ ಕೊಟ್ಟಿರುವುದನ್ನು ನೋಡುತ್ತೇವೆ, ಇದೀಗ ಧಾರವಾಹಿ ನಟರೊಬ್ಬರಿಗೆ ನಟ ಯಶ್ ಕರೆ ಮಾಡಿ ಬೆನ್ನ ತಟ್ಟಿದ್ದಾರೆ.
ಯಶಸ್ವಿ ಧಾರವಾಹಿಗಳಲ್ಲಿ ಒಂದಾಗಿರುವ 'ಪುಟ್ಟಕ್ಕನ ಮಕ್ಕಳು' ಧಾರವಾಹಿಯಲ್ಲಿ ಕಂಠಿ ಪಾತ್ರದಲ್ಲಿ ಜನಮನ ಗೆದ್ದಿರುವ ಧನುಷ್ ಅವರಿಗೆ ನಟ ಯಶ್ ಕರೆ ಮಾಡಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಧನುಷ್ ಯಶ್ ನಟನೆಯ ಕೆಜಿಎಫ್ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದರು. ಇದನ್ನು ವೇದಿಕೆಯಲ್ಲಿದ್ದ ತೀರ್ಪುಗಾರರು ಮತ್ತು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

'ಧೀರ ಧೀರ ಈ ಸುಲ್ತಾನ' ಹಾಡಿಗೆ ಧನುಷ್ ಹೆಜ್ಜೆ ಹಾಕಿದ್ದನ್ನು ನೋಡಿ ತೀರ್ಪುಗಾರರು ಹಾಡಿ ಹೊಗಳಿದ್ದರು. ಯಶ್ ರೀತಿಯಲ್ಲೇ ಅವರ ಮ್ಯಾನರಿಸಂ ಪ್ರದರ್ಶನ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. ತೀರ್ಪುಗಾರರಾಗಿದ್ದ ಶಿವರಾಜ್ ಕುಮಾರ್, "ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಿದ್ದೀರಾ, ಯಶ್ ಅವರಿಗೆ ಕರೆ ಮಾಡಿ ನಿಮ್ಮ ಡ್ಯಾನ್ಸ್ ಬಗ್ಗೆ ತಿಳಿಸುತ್ತೇನೆ" ಎಂದು ಹೇಳಿದ್ದರು. ಈ ವಾರ ಅಚ್ಚರಿ ಎನ್ನುವತೆ ಧನುಷ್ ಅವರಿಗೆ ಯಶ್ ಕರೆ ಮಾಡಿ ಮಾತನಾಡಿದ್ದಾರೆ. ಈ ವಾರದ ಎಪಿಸೋಡ್‌ನಲ್ಲಿ ಇದು ಪ್ರಕಟವಾಗಲಿದೆ.
ಕರೆ ಮಾಡಿ ಯಶ್ ಹೇಳಿದ್ದೇನು?
ಧನುಷ್‌ಗೆ ಕರೆ ಮಾಡಿದ ಯಶ್ "ನಿಮ್ಮ ಡ್ಯಾನ್ಸ್ ಸಖತ್ ಆಗಿತ್ತು, ಬೆಳೆಯುವವರಿಗೆ ಬೆನ್ನುತಟ್ಟುವುದು ತುಂಬಾ ಮುಖ್ಯ. ನಮಗೆಲ್ಲಾ ಶಿವರಾಜ್‌ಕುಮಾರ್ ಅವರೇ ಸ್ಪೂರ್ತಿ. ನೀವು ನಮ್ಮನ್ನೆಲ್ಲಾ ಮೀರಿ ಬೆಳೆಯಬೇಕು, ಅದೇ ನೀವು ನಮಗೆ ಕೊಡುವ ಗೌರವ" ಎಂದು ಹೇಳಿದ್ದಾರೆ.
ಬಳಿಕ ವೇದಿಕೆಯಲ್ಲಿ ಮಾತನಾಡಿದ ಧನುಷ್, ನನಗೆ ಯಶ್ ಎಂದರೆ ಸಖತ್ ಇಷ್ಟ, ಅವರು ಇದ್ದ ಹಾಗೆ ಇರಬೇಕು ಎನ್ನುವುದು ನನ್ನ ಆಸೆ. ನಾನು ಅದರಂತೆ ಇರುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications