Rashmika Mandanna: ಫೆಬ್ರವರಿಯಲ್ಲಿ ಮದುವೆ ವದಂತಿ ಬಗ್ಗೆ ಕೊನೆಗೂ ಉತ್ತರ ಕೊಟ್ಟ ರಶ್ಮಿಕಾ ಮಂದಣ್ಣ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮದುವೆ ಕುರಿತ ವದಂತಿಗಳು ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿವೆ. ಇತ್ತೀಚಿನ ಸಂದರ್ಶನದಲ್ಲಿ ನಟ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುವ ಬಗ್ಗೆ ಹರಡಿರುವ ಸುದ್ದಿಗಳು ನಿಜವೇ? ಮದುವೆಯ ದಿನಾಂಕ ಹಾಗೂ ಸ್ಥಳದ ಬಗ್ಗೆ ಕೇಳಿಬರುತ್ತಿರುವ ಮಾಹಿತಿ ಸತ್ಯವೇ? ಎಂಬ ಪ್ರಶ್ನೆಗಳನ್ನು ರಶ್ಮಿಕಾ ಅವರಿಗೆ ಕೇಳಲಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ.
ಇದು ಶುರುವಾಗಿ 4 ವರ್ಷವಾಗಿದೆ
ನಿರೂಪಕಿ ಪ್ರೇಮಾ ಅವರೊಂದಿಗಿನ ಸಂದರ್ಶನದಲ್ಲಿ ರಶ್ಮಿಕಾ ಮುಕ್ತವಾಗಿ ಮಾತನಾಡಿದ್ದಾರೆ. "ಈ ವದಂತಿಗಳು ಶುರುವಾಗಿ ಈಗ ನಾಲ್ಕು ವರ್ಷಗಳಾಗಿವೆ, ಅಲ್ಲವೇ? ಜನರು ಒಂದೇ ಪ್ರಶ್ನೆಯನ್ನು ಕೇಳುತ್ತಲೇ ಇದ್ದಾರೆ. ಅದೇ ವಿಷಯಕ್ಕಾಗಿ ಜನ ಕಾಯುತ್ತಲೇ ಇದ್ದಾರೆ" ಎಂದು ಹೇಳುವ ಮೂಲಕ ಮದುವೆ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ರಶ್ಮಿಕಾ ತಮ್ಮ ಮದುವೆ ಸುದ್ದಿ ಖಚಿತಪಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ ರಶ್ಮಿಕಾ ನೀಡಿದ ಉತ್ತರ ಹೀಗಿತ್ತು. "ಇಂದಿನ ಸತ್ಯ ಏನೆಂದರೆ, ಮಾತನಾಡಬೇಕಾದ ಸಮಯ ಬಂದಾಗಲೇ ನಾನು ಈ ಬಗ್ಗೆ ಮಾತನಾಡುತ್ತೇನೆ. ಮಾತನಾಡಬೇಕಾದಾಗ ನಾವು ಖಂಡಿತವಾಗಿ ಮಾತನಾಡುತ್ತೇವೆ" ಎಂದು ಹೇಳಿ ವದಂತಿಗಳಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ಈ ವಿಷಯವನ್ನು ಕ್ಯಾಮರಾ ಎದುರು ಮಾತನಾಡುವುದಕ್ಕಿಂತ ಆಫ್ ದಿ ರೆಕಾರ್ಡ್‌ನಲ್ಲಿ ಚರ್ಚಿಸಲು ಸಿದ್ಧಳಿದ್ದೇನೆ ಎಂದೂ ನಿರೂಪಕಿ ಪ್ರೇಮಾ ಅವರಿಗೆ ರಶ್ಮಿಕಾ ತಿಳಿಸಿದ್ದಾರೆ. ಹೀಗಾಗಿ ಮದುವೆ ವಿಚಾರ ನಿಜ ಎಂದೇ ಅಭಿಮಾನಿಗಳು ಪಕ್ಕಾ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 2025ರಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ನಿಶ್ಚಿತಾರ್ಥವಾಗಿದೆ ಎಂಬ ಸುದ್ದಿ ಹೊರಬಿದ್ದ ಬಳಿಕ, ಇಬ್ಬರೂ ಉಂಗುರ ಧರಿಸಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಈ ಕುರಿತು ಅವರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ನವೆಂಬರ್‌ನಲ್ಲಿ ರಶ್ಮಿಕಾ ಅಭಿನಯದ ದಿ ಗರ್ಲ್‌ಫ್ರೆಂಡ್ ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿ ವಿಜಯ್ ಅವರು ರಶ್ಮಿಕಾ ಕೈಗೆ ಸಿಹಿ ಮುತ್ತು ನೀಡಿದ್ದರು.

ಇದಲ್ಲದೆ, ಈ ಜೋಡಿ ನ್ಯೂಯಾರ್ಕ್‌ನಲ್ಲಿ ನಡೆದ 43ನೇ ಇಂಡಿಯಾ ಡೇ ಪೆರೇಡ್‌ನಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕಳೆದ ವರ್ಷ 'ಭಾರತ್ ಬಿಯಾಂಡ್ ಬಾರ್ಡರ್ಸ್' ಎಂಬ ಕಾರ್ಯಕ್ರಮದಲ್ಲೂ ಒಟ್ಟಿಗೆ ಭಾಗವಹಿಸಿದ್ದರು. ಹೊಸ ವರ್ಷದ ಸಂಭ್ರಮವನ್ನು ಸ್ನೇಹಿತರೊಂದಿಗೆ ಒಟ್ಟಿಗೆ ಆಚರಿಸಲು ಇಬ್ಬರೂ ಪ್ರವಾಸಕ್ಕೂ ತೆರಳಿದ್ದರು ಎಂಬ ಸುದ್ದಿ ಹರಡಿತ್ತು. ಇದರ ನಡುವೆ ಅವರ ಮದುವೆ ವಿಚಾರದ ವದಂತಿಯೂ ಜೋರಾಗಿಯೇ ಹಬ್ಬಿದೆ.
ವದಂತಿ ಏನು?
"ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಮದುವೆ ಫೆಬ್ರವರಿ 26ರಂದು ಉದಯಪುರದ ಭವ್ಯ ಅರಮನೆಯೊಂದರಲ್ಲಿ ನಡೆಯಲಿದೆ. ಅವರು ಇದಕ್ಕಾಗಿ ಅವರು ಒಂದು ಜಾಗವನ್ನು ಕೂಡ ಅಂತಿಮಗೊಳಿಸಿದ್ದಾರೆ. ನಿಶ್ಚಿತಾರ್ಥದಂತೆಯೇ ಮದುವೆಯನ್ನೂ ಆಪ್ತರ ನಡುವೆ ಸರಳವಾಗಿ ನಡೆಸುವ ಯೋಜನೆ ಇದೆ" ಎಂಬ ಸುದ್ದಿ ಹರಿದಾಡುತ್ತಿದೆ. ಮದುವೆ ಬಳಿಕ ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗಾಗಿ ಪ್ರತ್ಯೇಕ ಸಮಾರಂಭ ನಡೆಸಲಿದ್ದಾರೆ ಎಂದೂ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಅವರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ರಶ್ಮಿಕಾ ಮತ್ತು ವಿಜಯ್ 2018ರ ಸೂಪರ್‌ಹಿಟ್ ಚಿತ್ರ ಗೀತ ಗೋವಿಂದಂ ಹಾಗೂ 2019ರ ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರಗಳಿಂದ ಆರಂಭವಾದ ಸ್ನೇಹವೇ ಇಂದು ಮದುವೆ ವದಂತಿಗಳ ರೂಪದಲ್ಲಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ. ಆದರೆ ಅಧಿಕೃತ ಘೋಷಣೆಯವರೆಗೂ ಈ ಎಲ್ಲವು ವದಂತಿಗಳಷ್ಟೇ ಎಂಬುದನ್ನು ರಶ್ಮಿಕಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications