Vishnuvardhan: ಇಂದು ನಟ ವಿಷ್ಣುವರ್ಧನ್ ಪುಣ್ಯಸ್ಮರಣೆ: ಸಮಾಧಿ ದರ್ಶನಕ್ಕೆ ಅವಕಾಶ ಸಿಗದೆ ಫ್ಯಾನ್ಸ್ ಕಣ್ಣೀರು
ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ. ಈ ಹಿನ್ನೆಲೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುದಾದಾ ಅವರ ಸಮಾಧಿ ದರ್ಶನಕ್ಕೆ ರಾಜ್ಯದ ಮೂಲೆಮೂಲೆಯಿಂದ ಅಭಿಮಾನಿಗಳು ಬಂದಿದ್ದಾರೆ. ಆದರೆ, ಸಮಾಧಿ ದರ್ಶನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುದಾದಾ ಅವರ ಸಮಾಧಿ ಬಳಿ ಯಾರನ್ನೂ ಬಿಡುತ್ತಿಲ್ಲ. ಕನಿಷ್ಠ ಪಕ್ಷ ಅವರ ಸಮಾಧಿ ಕಣ್ತುಂಬಿಕೊಳ್ಳುವ ಭಾಗ್ಯವೂ ನಮಗಿಲ್ಲದಂತೆ ಮಾಡಿದ್ದಾರೆ. ಇಂದು ಅವರ ಸಮಾಧಿಗೆ ಪೂಜೆ ಮಾಡಲು, ಒಂದು ಪುಷ್ಪನಮನವಾದರೂ ಮಾಡಬೇಕು ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಬಂದಿದ್ದೇವೆ. ನೋಡಿದರೆ ಸಮಾಧಿ ಸ್ಥಳಕ್ಕೆ ಯಾರೂ ಹೋಗದಂತೆ ಬೀಗ ಹಾಕಿದ್ದಾರೆ ಎಂದು ಅಭಿಮಾನಿಗಳು ಅಳಲು ತೋಡಿಕೊಂಡಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದಲೂ ವಿಷ್ಣುದಾದನ ಅಭಿಮಾನಿಗಳಿಗೆ ಇದೇ ಪಾಡು. ನೆಮ್ಮದಿಯಾಗಿ ಅವರ ಸಮಾಧಿಗೆ ಪೂಜೆ ಮಾಡಲು ಅವಕಾಶವೂ ಸಿಗುತ್ತಿಲ್ಲ. ಅವರ ಸ್ಮಾರಕವೇನೋ ಮೈಸೂರಿನಲ್ಲಿದೆ. ಆದರೆ ಅವರನ್ನು ಕೊನೆಯದಾಗಿ ಬೀಳ್ಕೊಟ್ಟಿದ್ದು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ. ಹಾಗಾಗಿ ನಮಗೆ ವರ್ಷಕ್ಕೆ ಒಮ್ಮೆಯಾದರೂ ಇಲ್ಲಿಗೆ ಬಂದು ಅವರ ಸಮಾಧಿ ದರ್ಶನ ಪಡೆದರೆ ಮನಸ್ಸಿಗೆ ನೆಮ್ಮದಿ ಎಂದು ಹೇಳಿದ್ದಾರೆ.
ದೇವರಂತ ಮನುಷ್ಯ ವಿಷ್ಣುವರ್ಧನ್. ಇಂದು ಅವರ ಸಮಾಧಿಯನ್ನು ಕಣ್ತುಂಬಿಕೊಳ್ಳುವ ಭಾಗ್ಯವೂ ನಮಗಿಲ್ಲ. ಒಂದು ಹೂವಿಟ್ಟು ನಮಸ್ಕರಿಸುವ ಅವಕಾಶವನ್ನೂ ನಮಗೆ ನೀಡಿಲ್ಲ. ದೂರದಿಂದ ಸಮಾಧಿಗೆ ಹೂವನ್ನ ಎಸೆಯುವ ದುಸ್ಥಿತಿ ನಮ್ಮದು. ದೇವರಿಗೆ ಈ ತರ ಮಾಡುವುದು ದೊಡ್ಡ ಅವಮಾನ ಎಂದು ಹುಬ್ಬಳ್ಳಿಯಿಂದ ಬಂದಿದ್ದ ಅಭಿಮಾನಿಗಳು ಸಂಕಟ ಹೊರಹಾಕಿದ್ದಾರೆ.

ವಿಷ್ಣುವರ್ಧನ್ ಅವರು ಬದುಕಿದ್ದಾಗಲೂ ಕೆಲವು ನೋವು ಕೊಟ್ಟಿದ್ದರು. ಈಗ ಸತ್ತ ನಂತರವೂ ಅವರ ವಿಚಾರದಲ್ಲಿ ಈ ಧೋರಣೆ ಏಕೆ? ಅಂದು ವಿಷ್ಣುದಾದಾಗೆ ಕೊಟ್ಟ ನೋವನ್ನೇ ಇಂದು ಅವರ ಅಭಿಮಾನಿಗಳಿಗೆ ಕೊಡುತ್ತಾ ಪಾರಂಪರ್ಯವನ್ನು ಮುಂದುವರಿಸುತ್ತಿದ್ದಾರೆ. ನಾವು ವರ್ಷಕ್ಕೆ ಇಲ್ಲಿಗೆ ಬರುವುದೇ ಎರಡು ದಿನ. ಒಂದು ಅವರ ಜನ್ಮದಿನ, ಮತ್ತೊಂದು ಅವರ ಪುಣ್ಯಸ್ಮರಣೆ ಎಂದಿದ್ದಾರೆ.
ವರ್ಷದಲ್ಲಿ ಕನಿಷ್ಠ ಎರಡು ದಿನವಾದರೂ ಅವರ ಸಮಾಧಿ ದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದರೆ ಇದೆಂಥಾ ದಬ್ಬಾಳಿಕೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲಿ ನೋಡಿದರೆ ಅಭಿಮಾನಿಗಳು ಮೈಸೂರಿನಲ್ಲಿರೋ ಸ್ಮಾರಕಕ್ಕೆ ಹೋಗಿ ಅಂತ ಬೋರ್ಡ್ ಹಾಕಿದ್ದಾರೆ. ರಾಮನ ದೇವಸ್ಥಾನ ಎಲ್ಲೆಲ್ಲೂ ಇದೆ. ಆದ್ರೆ ಮೂಲ ಜನ್ಮಸ್ಥಳ ಅಯೋಧ್ಯೆ. ಅದೇ ರೀತಿ ನಮಗೆ ವಿಷ್ಣುದಾದಾ ಸ್ಮಾರಕ ಮೈಸೂರಿನಲ್ಲಿದ್ದರೂ, ಬೆಂಗಳೂರಿನಲ್ಲಿರುವ ಈ ಸಮಾಧಿಯೇ ನಮಗೆ ಮೂಲಸ್ಥಾನ ಎಂದು ಅಭಿಮಾನಿಗಳು ಹೇಳಿದ್ದಾರೆ.

ಅಭಿಮಾನ್ ಸ್ಟೂಡಿಯೋ ಮಾಲೀಕರು ಸಮಾಧಿ ಸ್ಥಳಕ್ಕೆ ಯಾರೂ ಬರದಂತೆ ತಡೆಯಾಜ್ಞೆ ತಂದಿದ್ದು, ವಿಷ್ಣು ಫ್ಯಾನ್ಸ್ ಅಸೋಸಿಯೇಷನ್ ಗಳು, ಸಮಾಧಿ ಬಳಿ ಬರದಂತೆ ನಿರ್ಬಂಧಿಸಲಾಗಿದೆ. ವಿಷ್ಣು ಸಮಾಧಿ ಬಳಿ ಪೂಜೆ, ಅನ್ನದಾನ,ರಕ್ತದಾನ ಮಾಡದಂತೆ ಸೂಚಿಸಲಾಗಿದೆ. ಹಾಗಿದ್ದರೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಸ್ಥಳಕ್ಕೆ ಪೊಲೀಸರು ಕೂಡ ಬಂದಿದ್ದಾರೆ ಎನ್ನಲಾಗಿದೆ.
ಚಿತ್ರನಟ ಡಾ. ವಿಷ್ಣುವರ್ಧನ್ ಅವರ ಸಮಾಧಿಯ ಸ್ಥಳ ಅಭಿಮಾನ್ ಸ್ಟುಡಿಯೋದಲ್ಲಿಯೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ದಶಕಗಳು ಕಳೆದರೂ ಇದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಇನ್ನು ಇತ್ತೀಚೆಗೆ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲಾಗಿದೆ. ಇದಕ್ಕೆ ಅಭಿಮಾನಿಗಳ ವಿರೋಧ ಈಗಲೂ ಇದೆ. ವಿಷ್ಣುವರ್ಧನ್ ಅವರ ಪತ್ನಿ ಭಾರತಿ ಅವರು ಹಾಗೂ ಕುಟುಂಬಸ್ಥರು ಮೈಸೂರಿನಲ್ಲಿರುವ ಸ್ಮಾರಕದಲ್ಲೇ ವಿಶೇಷ ಪೂಜೆ ಸಲ್ಲಿಸಿದ್ದಾರೆ.












Click it and Unblock the Notifications