ಒತ್ತುವರಿ ಆರೋಪ, ನಟ ಯಶ್ ತಾಯಿ ಮನೆಯ ಕಾಂಪೌಂಡ್ ನೆಲಸಮ
ನಟ ರಾಕಿಂಗ್ ಸ್ಟಾರ್ ಯಶ್ ತಾಯಿ, ಸ್ಯಾಂಡಲ್‌ವುಡ್‌ನ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಅವರ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದಿದೆ. ಬೇರೆಯವರ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ಆರೋಪದ ಮೇರೆಗೆ ಇಂದು ಬೆಳಿಗ್ಗೆ ಜೆಸಿಬಿ ಮೂಲಕ ಅದನ್ನು ನೆಲಸಮ ಮಾಡಲಾಗಿದೆ. ಹಾಸನ ನಗರದ ವಿದ್ಯಾನಗರದಲ್ಲಿರುವ ಪುಷ್ಪ ಅವರ ಮನೆಯ ಕೌಂಪೌಂಡ್ ಅನ್ನು ಕೋರ್ಟ್ ಅನುಮತಿಯ ಮೇರೆಗೆ ಆ ಜಾಗದ ಮೂಲ ಮಾಲೀಕರು ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.
ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಿರುವ ಆರೋಪ ಪುಷ್ಪ ಅವರ ಮೇಲೆ ಇದ್ದು, ಇಂದು ಆ ಜಾಗದ ಮಾಲೀಕರು ಕೋರ್ಟ್ ಅನುಮತಿ ಪಡೆದು ಜೆಸಿಬಿ ಮೂಲಕ ಕಾಂಪೌಂಡ್ ಅನ್ನು ಕೆಡವಿದ್ದಾರೆ. ದೇವರಾಜು ಎಂಬುವವರು ಪುಷ್ಪ ಅವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದ ಮೇರೆಗೆ ಹಾಸನದ ವಿದ್ಯಾನಗರದಲ್ಲಿರುವ ಪುಷ್ಪ ಅವರ ಮನೆಯ ಕಾಂಪೌಂಡ್ ತೆರವು ಮಾಡಲಾಗಿದೆ. ಈ ಕಾಂಪೌಂಡ್ ಅಕ್ರಮವಾಗಿ ಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಲಕ್ಷ್ಮಮ್ಮ ಎಂಬುವವರ ಜಾಗದಲ್ಲಿ ಪುಷ್ಪ ಅವರು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ, ಸುಮಾರು 1,500 ಅಡಿ ಜಾಗ ಒತ್ತುವರಿ ಮಾಡಲಾಗಿದೆ ಎಂದು ಮಾಲೀಕ ದೇವರಾಜು ಆರೋಪ ಹೊರಿಸಿದ್ದು, ನ್ಯಾಯಾಲಯದ ಅನುಮತಿಯ ಮೇರೆಗೆ ಮನೆಯ ಕೌಂಪೌಂಡ್ ಗೋಡೆ ತೆರವು ಮಾಡಿದ್ದಾಗಿ ತಿಳಿಸಿದ್ದಾರೆ.
ನಾವು ಒತ್ತುವರಿ ಮಾಡಿಲ್ಲ
ಈ ಬಗ್ಗೆ ನಟ ಯಶ್ ತಾಯಿ ಪುಷ್ಪ ಅವರು ಪ್ರತಿಕ್ರಿಯಿಸಿದ್ದಾರೆ. ನಿವೇಶನದಲ್ಲಿ ನಿರ್ಮಿಸಿರುವ ಕಾಂಪೌಂಡ್ ಅಕ್ರಮ ಎಂಬ ಆರೋಪವನ್ನು ಪುಷ್ಪ ತಳ್ಳಿ ಹಾಕಿದ್ದಾರೆ. ಅಲ್ಲದೆ ಮನೆಯ ಕಾಂಪೌಂಡ್ ತೆರವುಗೊಳಿಸಿದವರ ವಿರುದ್ಧ ಹಾಗೂ ಪಿಡಿಓ ನಟರಾಜ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
'ಅವರು ಕೋರ್ಟ್ ಆರ್ಡರ್ ಎನ್ನುತ್ತಿರುವುದು ಸುಳ್ಳು. ನಾವು ಊರಲ್ಲಿ ಇಲ್ಲದೇ ಇರುವ ಸಮಯ ನೋಡಿ, ಈ ಕೆಲಸ ಮಾಡಿದ್ದಾರೆ. ಯಶ್ ಅವರ ಸೈಟ್ ಕೌಂಪೌಂಡ್ ಹೊಡೆದು ಹಾಕಿದ್ದೀನಿ ಅಂತ ಹೀರೋ ಆಗಲು ಹೊರಟಿದ್ದಾರೆ. ನಾನು ಕೋರ್ಟ್‌ಗೆ ಹಾಜರಾಗಿಲ್ಲ ಅಂತೆಲ್ಲ ಆರೋಪ ಮಾಡಿದ್ದಾರೆ. ಆದರೆ ನಮ್ಮ ವಕೀಲರು ಹಾಜರಾಗಿದ್ದಾರೆ. ನಮ್ಮ ಪಕ್ಕದ ಸೈಟ್ ಅವರಿಗೂ ಬೆದರಿಕೆ ಹಾಕಿದ್ದಾರೆ' ಎಂದು ಪುಷ್ಪ ಆರೋಪಿಸಿದ್ದಾರೆ.
'ಇದೆಲ್ಲವೂ ಪಿಡಿಓ ನಟರಾಜ್ ಅವರ ಕುಮ್ಮಕ್ಕಿನಿಂದ ನಡೆಯುತ್ತಿದೆ. ನಾವು ನಮ್ಮ ಜಾಗಕ್ಕೆ ತೆರಿಗೆ ಕಟ್ಟಿದ್ದೀವಿ, ಎಲ್ಲ ದಾಖಲೆಗಳು ನಮ್ಮ ಕಡೆ ಇದೆ. ಕಾನೂನು ಮೂಲಕವೇ ಎಲ್ಲದಕ್ಕೂ ಉತ್ತರ ಕೊಡ್ತೀನಿ. ಕಾಂಪೌಂಡ್ ಕೆಡವಿದರ ಮೇಲೆ ಮಾನಹಾನಿ ಮೊಕದ್ದಮೆ ಹಾಕ್ತೀನಿ, ಅವರು ಇದಕ್ಕೆ ಉತ್ತರ ಕೊಡಲೇಬೇಕು' ಎಂದು ಸವಾಲ್ ಹಾಕಿದ್ದಾರೆ.
'ನನ್ನ ಮಗ ಯಶ್ ಹೆಸರು ಹೇಳಿಕೊಂಡು ಹೆಸರು ಮಾಡೋಕೆ ಮುಂದಾಗಿದ್ದಾರೆ. ಕೋರ್ಟ್ ಆರ್ಡರ್ ನಮ್ಮ ಗಮನಕ್ಕೆ ತಂದಿಲ್ಲ. ನಾನು ಕಾನೂನು ಹೋರಾಟ ಮಾಡ್ತೀನಿ. ನಾವು ಒತ್ತುವರಿ ಮಾಡಿಲ್ಲ, ಕಾನೂನು ಪ್ರಕಾರವೇ ಜಾಗ ಪಡೆದಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications