Duniya Vijay: ನಟ ದುನಿಯಾ ವಿಜಯ್‌ಗೆ ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನ
ಸ್ಯಾಂಡಲ್‌ವುಡ್‌ನಲ್ಲಿ ಸಲಗ, ಭೀಮನಾಗಿ ಸೌಂಡ್ ಮಾಡಿರುವ ದುನಿಯಾ ವಿಜಯ್ ಅವರಿಗೆ ಬೇರೆ ಭಾಷೆಗಳಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ತೆಲುಗಿನ ಸ್ಟಾರ್ ನಟ ಬಾಲಕೃಷ್ಣ ಅವರ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ನಟಿಸುವ ಮೂಲಕ ದುನಿಯಾ ವಿಜಯ್ ನೆಗೆಟಿವ್ ಶೇಡ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದಾದ ಬಳಿಕ ಅವರಿಗೆ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಒದಗಿ ಬರುತ್ತಿವೆ. ಇತ್ತೀಚೆಗಷ್ಟೇ ಸೆಟ್ಟೇರಿರುವ ತಮಿಳಿನ ಮೂಕುತಿ ಅಮ್ಮನ್-2 ಸಿನಿಮಾದಲ್ಲೂ ವಿಜಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಅವರಿಗೆ ಬೇರೆ ಭಾಷೆಯ ಮತ್ತೊಂದು ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆ. ವಿಶೇಷ ಅಂದ್ರೆ ಖ್ಯಾತ ಸ್ಟಾರ್ ಡೈರೆಕ್ಟರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ವಿಲನ್ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ವಿಜಯ್, ದುನಿಯಾ ಸಿನಿಮಾ ಮೂಲಕ ನಾಯಕ ನಟನಾಗಿ ಮಿಂಚುತ್ತಲೇ ಇದ್ದಾರೆ. ನಟನೆ ಜೊತೆಗೆ ನಿರ್ದೇಶನಕ್ಕೂ ಕೈಹಾಕಿರುವ ಅವರು ಇತ್ತೀಚೆಗೆ ಭೀಮ ಸಿನಿಮಾ ನಿರ್ದೇಶಿಸಿ, ನಟಿಸಿ ಗೆದ್ದಿದ್ದಾರೆ. ಇದರ ಜೊತೆ ಜೊತೆಗೆ ಬೇರೆ ಭಾಷೆಗಳಲ್ಲೂ ಅವರ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವತ್ತ ಗಮನಹರಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ತಮ್ಮ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾಗೆ ದುನಿಯಾ ವಿಜಯ್ ಅವರನ್ನ ಬರಮಾಡಿಕೊಂಡಿದ್ದಾರೆ.

ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಮೊದಲ ಸಿನಿಮಾ ನಿರ್ದೇಶಿಸಿದ್ದ ಪುರಿ ಜಗನ್ನಾಥ್, ಬಳಿಕ ಟಾಲಿವುಡ್‌ನ ಹಲವು ಸ್ಟಾರ್ ನಟರಿಗೆ ಹಿಟ್ ಸಿನಿಮಾಗಳನ್ನು ನೀಡಿ ಸ್ಟಾರ್ ಡೈರೆಕ್ಟರ್ ಎಂದು ಕರೆಸಿಕೊಂಡಿದ್ದಾರೆ. ಇವರ ಸಿನಿಮಾಗಳ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಇತ್ತೀಚೆಗೆ ಲೈಗರ್ ಹಾಗೂ ಡಬಲ್ ಇಸ್ಮಾರ್ಟ್ ಸಿನಿಮಾಗಳು ಅವರ ಕೈಹಿಡಿಯಲಿಲ್ಲ. ಹಾಗಾಗಿ ತುಸು ಬ್ರೇಕ್ ಪಡೆದು ಮತ್ತೊಂದು ದೊಡ್ಡ ಪ್ರಾಜೆಕ್ಟ್‌ಗೆ ಅವು ಕೈಹಾಕಿದ್ದಾರೆ.
ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಹಾಗೂ ಬಾಲಿವುಡ್ ನಟಿ ಟಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂಬುದು ರಿವೀಲ್ ಆಗಿದೆ. ಇದೀಗ ಕನ್ನಡ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಈ ಚಿತ್ರತಂಡ ಸೇರಿಕೊಂಡಿದ್ದಾರೆ. ತೆಲುಗಿನ ವೀರಸಿಂಹರೆಡ್ಡಿ ಸಿನಿಮಾದಲ್ಲಿ ಬಾಲಕೃಷ್ಣ ಅವರೊಂದಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಅವರು ಈಗ ವಿಜಯ್ ಸೇತುಪತಿ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ದುನಿಯಾ ವಿಜಯ್ ಪಾತ್ರವೇನು?
ಈ ಹೊಸ ಸಿನಿಮಾದಲ್ಲಿ ದುನಿಯಾ ವಿಜಯ್ ಇರುವುದು ಅಧಿಕೃತವಾಗಿದೆ. ಆದರೆ ಅವರ ಪಾತ್ರವೇನು? ಎಂದು ಚಿತ್ರತಂಡ ಘೋಷಿಸಿಲ್ಲ. ಪುರಿ ಜಗನ್ನಾಥ್ ಅವರೊಂದಿಗೆ ಇರುವ ಫೋಟೋ ಹಂಚಿಕೊಂಡಿದ್ದು, ವೈರಲ್ ಆಗಿದೆ. ಪುರಿ ಜಗನ್ನಾಥ್ ಯಾವಾಗಲೂ ತಮ್ಮ ಸಿಗ್ನೇಚರ್ ಶೈಲಿಯನ್ನು ಕಮರ್ಷಿಯಲ್ ಸಿನಿಮಾಗಳಿಗೆ ತಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಅಪ್ಪು ಸಿನಿಮಾ ನೋಡಿದಾಗಿನಿಂದ, ಅವರಿಂದ ಡೈರೆಕ್ಷನ್ ಪಡೆಯಬೇಕು ಎಂದು ಕನಸು ಕಂಡಿದ್ದೆ. ಅವರು ಮಾಸ್ ಎಂಟರ್‌ಟೈನರ್‌ಗಳ ಮಾಸ್ಟರ್, ಅಲ್ಲದೆ ಪ್ರತಿ ಫ್ರೇಮ್‌ಗೆ ಶಕ್ತಿ ಹೇಗೆ ತುಂಬಬೇಕೆಂದು ಚೆನ್ನಾಗಿ ತಿಳಿದಿದ್ದಾರೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಇದೆಲ್ಲವೂ ದೇವರ ದಯೆ ಮತ್ತು ನನ್ನ ತಾಯಿಯ ಆಶೀರ್ವಾದದಿಂದ ನಡೆಯುತ್ತಿದೆ. ಇಂದು ನಟನೆ ಭಾಷೆಗೆ ಸೀಮಿತವಾಗಿಲ್ಲ. ಈ ರೀತಿಯ ಸಿನಿಮಾಗಳು ನನ್ನಂತಹ ನಟರಿಗೆ ಬೇರೆ ಪ್ರದೇಶಗಳನ್ನು ತಲುಪಲು ವೇದಿಕೆ ಕಲ್ಪಿಸುತ್ತದೆ ಎಂದಿದ್ದಾರೆ. ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಸದ್ಯ ದುನಿಯಾ ವಿಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದರಿಂದ ಪುರಿ ಜಗನ್ನಾಥ್ ಸಿನಿಮಾದ ಶೂಟಿಂಗ್ ಜೂನ್‌ನಲ್ಲಿ ಶುರುವಾಗುವ ಸಾಧ್ಯತೆ ಇದೆ.












Click it and Unblock the Notifications