ರಚಿತಾ ರಾಮ್ ವಿರುದ್ಧ ದೂರು ಕೊಡ್ತೀನಿ, ಕಠಿಣ ಶಿಕ್ಷೆ ಆಗಬೇಕು ಎಂದ ಖ್ಯಾತ ನಿರ್ದೇಶಕ
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಖ್ಯಾತಿಯ ನಟಿ ರಚಿತಾ ರಾಮ್ ಅವರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಸಾಲು ಸಾಲು ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳಲ್ಲೂ ಬ್ಯುಸಿಯಾಗಿರುವ ರಚಿತಾ ಅವರ ಮೇಲೆ ದೂರು ಕೊಡಲು ಖ್ಯಾತ ನಿರ್ದೇಶಕ ಮುಂದಾಗಿದ್ದಾರೆ. ರಚಿತಾ ರಾಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತವರನ್ನು ಬೆಳೆಯಲು ಅವಕಾಶ ನೀಡಬಾರದು ಎಂದು ನಿರ್ದೇಶಕ ಆಕ್ರೋಶ ಹೊರಹಾಕಿದ್ದಾರೆ. ರಚಿತಾ ರಾಮ್ ವಿರುದ್ಧ ಕೇಳಿ ಬಂದಿರುವ ಆರೋಪ ಹಾಗೂ ಆ ನಿರ್ದೇಶಕ ಯಾರು ಎಂಬ ಮಾಹಿತಿ ತಿಳಿಯಲು ಮುಂದೆ ಓದಿ..
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ನಾಗಶೇಖರ್ ಅವರು ರಚಿತಾ ರಾಮ್ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ. ನಾಗಶೇಖರ್ ಅವರು ನಿರ್ದೇಶಿಸಿರುವ "ಸಂಜು ವೆಡ್ಸ್ ಗೀತಾ-2" ಸಿನಿಮಾ ಈಗಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ರಚಿತಾ ರಾಮ್ ನಟಿಸಿದ್ದರು. ಆದರೆ ರಚಿತಾ ಅವರು ಸಿನಿಮಾದ ಪ್ರಮೋಷನ್‌ಗೆ ಒಂದು ದಿನವೂ ಬಂದಿಲ್ಲ ಎಂದು ನಾಗಶೇಖರ್ ಆರೋಪ ಮಾಡಿದ್ದಾರೆ.

ʼಈ ಸಿನಿಮಾಗೆ ಕೋಟ್ಯಂತರ ರೂಪಾಯಿ ಹಣ ಹಾಕಿರುತ್ತೀವಿ. ಕಲಾವಿದರಿಗೆ ಊಟ ಬಟ್ಟೆಯಿಂದ ಹಿಡಿದು ಸಂಭಾವನೆಯೂ ನೀಡಿ ಗೌರವ ನೀಡಿ ಎಲ್ಲ ಮಾಡಿದ ಮೇಲೆ ಪ್ರಮೋಷನ್ ಟೈಮಲ್ಲಿ ಅವರು ನಮ್ಮ ಕೈಹಿಡಿಯಬೇಕಾಗುತ್ತೆ. ಕಲಾವಿದರು ಅಂದ್ರೆ ಕೇವಲ ಸಿನಿಮಾದಲ್ಲಿ ನಟಿಸುವುದಷ್ಟೇ ಅಲ್ಲ. ಪ್ರಚಾರದ ವೇಳೆಯೂ ಇದು ನಮ್ಮ ಸಿನಿಮಾ ಗೆಲ್ಲಬೇಕು ಎಂಬ ಭಾವನೆ ಇರಬೇಕುʼ ಎಂದು ನಾಗಶೇಖರ್ ಹೇಳಿದ್ದಾರೆ.
ʼನಮ್ಮ ಚಿತ್ರದ ನಾಯಕಿಯಾಗಿರುವ ರಚಿತಾ ರಾಮ್ ಅವರು ನಮ್ಮ ಸಿನಿಮಾ ಪ್ರಮೋಷನ್‌ಗೆ ಬರ್ತಿಲ್ಲ. ಈ ಹಿಂದೆಯೂ ಇದೇ ವಿಚಾರವಾಗಿ ಮನವಿ ಮಾಡಿದ್ದೆವು. ಆ ಮನವಿಗೂ ರಚಿತಾ ರಾಮ್ ಪುರಸ್ಕರಿಸಲಿಲ್ಲ. ಇನ್ನು ರಾಕ್‌ಲೈನ್ ವೆಂಕಟೇಶ್ ಅವರಿಗೂ ಈ ವಿಚಾರ ತಿಳಿಸಿದ್ವಿ. ಅವರು ಕೂಡ ಮಾತನಾಡಿ ವಿಫಲರಾಗಿದ್ದಾರೆ. ಪ್ರಮೋಷನ್ ಸಮಯದಲ್ಲಿ ರಚಿತಾ ರಾಮ್ ಅವರು ನಮ್ಮೊಂದಿಗೆ ಇರುವುದು ಧರ್ಮವಾಗಿತ್ತು. ಆದರೆ ಅವರು ಈವರೆಗೂ ನಮ್ಮ ಯಾವ ಮನವಿಗೂ ಸ್ಪಂದಿಸಲಿಲ್ಲ. ಅವರಿಂದ ಯಾವ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ, ಯಾವ ಪ್ರಮೋಷನ್‌ಗೂ ಬಂದಿಲ್ಲ. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂತಹ ಕಲಾವಿದರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕುʼ ಎಂದು ಆಗ್ರಹಿಸಿದ್ದಾರೆ.

ʼಕಲಾವಿದರ ಸಂಘದ ಕಾರ್ಯದರ್ಶಿಯಾಗಿರುವ ರಾಕ್‌ಲೈನ್ ವೆಂಕಟೇಶ್ ಅವರು ಈಗಾಗಲೇ ರಚಿತಾ ರಾಮ್ ಅವರೊಂದಿಗೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ರಚಿತಾ ಅವರ ಮನವೊಲಿಸುವ ಪ್ರಮೇಯವೇ ಇಲ್ಲ. ಏನೋ ಗಲಾಟೆ, ಇನ್ನೊಂದು ಮತ್ತೊಂದು ಆಗಿದ್ರೆ ಅವರು ಚರ್ಚೆಗೆ ಬರಲಿʼ ಎಂದು ರಚಿತಾ ರಾಮ್‌ಗೆ ಸವಾಲ್ ಹಾಕಿದ್ದಾರೆ.
ʼರಚಿತಾ ಅವರನ್ನು ಫಿಲ್ಮ್ ಚೇಂಬರ್‌ಗೆ ಕರೆಸೋಣ, ಮಾಧ್ಯಮಗಳೂ ಬರಲಿ, ನಮ್ಮಿಂದ ಅವರಿಗೆ ಏನು ತೊಂದರೆ ಆಗಿದೆ? ಏನು ಅನ್ಯಾಯ ಆಗಿದೆ ಅನ್ನೋದನ್ನ ಎಲ್ಲರ ಮುಂದೆ ಹೇಳಲಿ. ಒಂದು ವೇಳೆ ತಪ್ಪು ನಮ್ಮ ಕಡೆ ಇದ್ರೆ ನೀವು ಏನೇ ಹೇಳಿದ್ರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದೂ ನಾಗಶೇಖರ್ ಹೇಳಿದ್ದಾರೆ. ಇಲ್ಲವಾದರೆ ಇಂತಹ ಕಲಾವಿದರನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಯಲು ಅವಕಾಶ ಮಾಡಿಕೊಡಬಾರದು, ಅಂತವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಫಿಲ್ಮ್ ಚೇಂಬರ್‌ಗೆ ದೂರು ಕೊಡ್ತೀವಿʼ ಎಂದು ಗರಂ ಆಗಿ ಹೇಳಿದ್ದಾರೆ.
ಶಿವಣ್ಣ, ಉಪೇಂದ್ರ ಬೇರೆ ಸಿನಿಮಾಗಳ ಪ್ರಮೋಷನ್ ಮಾಡ್ತಾರೆ
ʼಅವರು ಸಿನಿಮಾ ರಿಲೀಸ್‌ಗೂ ಮುನ್ನ ಬಿಟ್ಟರೆ ಬಳಿಕ ಒಂದು ಮೆಸೇಜ್ ಕೂಡ ಇಲ್ಲ. ನಾವು ಮೊದಲಿನಿಂದಲೂ ರಚಿತಾ ಅವರ ಮ್ಯಾನೇಜರ್‌ಗಳ ಜೊತೆ ಸಂಪರ್ಕದಲ್ಲಿದ್ವಿ, ಆದ್ರೆ ಈಗ ಕೇಳಿದ್ರೆ ಅವರು ಬ್ಯುಸಿ ಇದ್ದಾರೆ ಅಂತಾರೆ. ನಾನು ನೂರಾರು ಸಿನಿಮಾದಲ್ಲಿ ನಟಿಸಿದ್ದೀನಿ, ಒಂದು ಸಿನಿಮಾ ಪ್ರಮೋಷನ್‌ಗೆ ಹೋಗದಷ್ಟು ಬ್ಯುಸಿ ಇರೋರನ್ನ ನಾನು ಯಾರನ್ನೂ ನೋಡಿಲ್ಲ. ಶಿವಣ್ಣ, ಉಪೇಂದ್ರ ಅವರು ತಮ್ಮ ಸಿನಿಮಾ ಮಾತ್ರವಲ್ಲ ಬೇರೆಯವರ ಸಿನಿಮಾಗಳ ಪ್ರಮೋಷನ್‌ಗೂ ಬರ್ತಾರೆ. ಆದರೆ ತನ್ನದೇ ಸಿನಿಮಾದ ನಾಯಕಿಯಾಗಿ ಪ್ರಮೋಷನ್‌ಗೆ ಬರುವ ಜವಾಬ್ದಾರಿ ಇಲ್ಲʼ ಎಂದು ದೂರಿದ್ದಾರೆ.
ʼಸಂಜು ವೆಡ್ಸ್ ಗೀತಾ-2 ಸಿನಿಮಾ ರಿಲೀಸ್ ಆಗಿ ಈಗಾಗಲೇ ಪ್ರದರ್ಶನ ಕಾಣುತ್ತಿದೆ. ಆದರೂ ಒಂದು ದಿನವೂ ಪ್ರಮೋಷನ್‌ಗೆ ಬರ್ತಿಲ್ಲ. ಈ ಬಗ್ಗೆ ಎಲ್ಲರೂ ಪ್ರಶ್ನೆ ಕೇಳುತ್ತಿದ್ದಾರೆ. ಅವರಿಗೆ ಏನು ಉತ್ತರ ಕೊಡೋದೋ ಗೊತ್ತಿಲ್ಲ. ಹಾಗಾಗಿ ಫಿಲಂ ಚೇಂಬರ್ ರಚಿತಾ ಅವರನ್ನ ಕರೆಸಿ ಬುದ್ಧಿ ಹೇಳಿ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಬೇಕುʼ ಎಂದು ನಿರ್ದೇಶಕ ನಾಗಶೇಖರ್ ಆಗ್ರಹಿಸಿದ್ದಾರೆ.












Click it and Unblock the Notifications