GOAT ಸಿನಿಮಾದಲ್ಲೇ ಇತ್ತು 'ಸಿಎಂ' ಪಟ್ಟದ ಗುಟ್ಟು: ಕಾರಿನ ನಂಬರ್ ಪ್ಲೇಟ್ ಭವಿಷ್ಯ ನಿಜವಾಗಿಸಿದ ದಳಪತಿ ವಿಜಯ್
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಐತಿಹಾಸಿಕ ಜಯ ಸಾಧಿಸಿರುವುದು ಅನೇಕರಿಗೆ ಅಚ್ಚರಿ ತಂದಿರಬಹುದು. ಆದರೆ, ವಿಜಯ್ ಅವರ ಈ ರಾಜಕೀಯ ನಡೆ ಆಕಸ್ಮಿಕವೇನಲ್ಲ, ಬದಲಿಗೆ ಇದು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ ಮಾಸ್ಟರ್ ಪ್ಲ್ಯಾನ್ ಎಂಬುದಕ್ಕೆ ಅವರ ಸಿನಿಮಾಗಳಲ್ಲೇ ಸಾಕ್ಷಿಗಳು ಸಿಗುತ್ತಿವೆ. ಅದರಲ್ಲೂ 2024ರಲ್ಲಿ ತೆರೆಕಂಡ ಅವರ ಬ್ಲಾಕ್‌ಬಸ್ಟರ್ ಸಿನಿಮಾ 'GOAT' (The Greatest of All Time) ನಲ್ಲಿನ ಒಂದು ಸಣ್ಣ ದೃಶ್ಯವು ವಿಜಯ್ ಅವರ ಸಿಎಂ ಕನಸಿನ ಬಗ್ಗೆ ಮೊದಲೇ ಭವಿಷ್ಯ ನುಡಿದಿತ್ತು ಎಂಬುದು ಈಗ ಬಹಿರಂಗವಾಗಿದೆ.
ಕಾರಿನಲ್ಲೇ ಇತ್ತು ಸಿಎಂ ಸುಳಿವು
ವಿಜಯ್ ಅವರ ಬ್ಲಾಕ್‌ಬಸ್ಟರ್ ಸಿನಿಮಾ 'GOAT'ನಲ್ಲಿನ ಒಂದು ದೃಶ್ಯವು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿನಿಮಾದ ಒಂದು ದೃಶ್ಯದಲ್ಲಿ ವಿಜಯ್ ಕಾರೊಂದನ್ನು ಚಲಾಯಿಸುತ್ತಾರೆ. ಆ ಕಾರಿನ ನೋಂದಣಿ ಸಂಖ್ಯೆ 'TN 07 CM 2026' ಎಂದಿದೆ. ಅಂದು ಇದು ಕೇವಲ ಸಿನಿಮೀಯ ಸಂಖ್ಯೆ ಎಂದು ಕಂಡರೂ, ಇಂದಿನ ಫಲಿತಾಂಶದ ಹಿನ್ನೆಲೆಯಲ್ಲಿ ಅದನ್ನು ಡಿಕೋಡ್ ಮಾಡಿದರೆ ಅಚ್ಚರಿಯ ಸತ್ಯವೊಂದು ಹೊರಬರುತ್ತದೆ. ಕಾರಿನ ನಂಬರ್ ಪ್ಲೇಟ್‌ನಲ್ಲಿ "CM 2026" ಎಂಬ ನೋಂದಣಿ ಸಂಖ್ಯೆಯಿದ್ದು, ಇದು ವಿಜಯ್ ಅವರ ರಾಜಕೀಯ ಪ್ರವೇಶದ ಗುಪ್ತ ಸಂಕೇತವಾಗಿತ್ತು ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಅಂದು ಸಿನಿಮಾ ಬಿಡುಗಡೆಯಾದಾಗ ಈ ವಿಚಾರ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಪ್ರಕಟವಾಗಿರುವ ತಮಿಳುನಾಡು ಚುನಾವಣಾ ಫಲಿತಾಂಶದಲ್ಲಿ ವಿಜಯ್ ಅವರ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಅವರು ಮುಖ್ಯಮಂತ್ರಿ ಗಾದಿಯತ್ತ ಹೆಜ್ಜೆ ಹಾಕುತ್ತಿರುವುದು ಆ ನಂಬರ್ ಪ್ಲೇಟ್‌ನ ಭವಿಷ್ಯವಾಣಿಯನ್ನು ನಿಜವಾಗಿಸಿದಂತಿದೆ. "TN 07" ಎಂಬುದು ಚೆನ್ನೈನ ಒಂದು ಭಾಗದ ನೋಂದಣಿ ಸಂಖ್ಯೆಯಾಗಿದ್ದರೂ, ಅದರಲ್ಲಿರುವ "CM 2026" ಎಂಬ ಅಕ್ಷರಗಳು ವಿಜಯ್ 2026ರಲ್ಲಿ ಸಿಎಂ ಆಗಲಿದ್ದಾರೆ ಎಂಬ ನೇರ ಸಂದೇಶವನ್ನು ಆಗಲೇ ಸಾರಿದ್ದವು ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ.
ವಿಶಿಲ್ ಗುರುತು
ಮತ್ತೊಂದು ವಿಶೇಷವೆಂದರೆ ಇದೇ ಗೋಟ್ ಸಿನಿಮಾದ "ವಿಶಿಲ್ ಪೋಡು" ಹಾಡು ಎಷ್ಟು ಹಿಟ್ ಆಗಿತ್ತೋ, ಅದೇ 'ವಿಶಿಲ್' (Whistle) ಅಥವಾ ಶಿಳ್ಳೆ ಗುರುತನ್ನೇ ಕೇಂದ್ರ ಚುನಾವಣಾ ಆಯೋಗವು ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಈ ಚುನಾವಣೆಯಲ್ಲಿ ಮಂಜೂರು ಮಾಡಿತ್ತು. ಸಿನಿಮಾ ಮತ್ತು ರಿಯಲ್ ಲೈಫ್ ರಾಜಕೀಯದ ನಡುವಿನ ಈ ಅದ್ಭುತ ಸಾಮ್ಯತೆಗಳು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ. ಅಂದು ಸಿನಿಮಾದಲ್ಲಿ ಕಂಡಿದ್ದ ಆ ನಂಬರ್ ಪ್ಲೇಟ್‌ನ ದೃಶ್ಯ ಇಂದು ತಮಿಳುನಾಡಿನ ರಾಜಕೀಯ ವಾಸ್ತವವಾಗಿ ಬದಲಾಗುತ್ತಿರುವುದು ದಳಪತಿ ಅಭಿಮಾನಿಗಳಿಗೆ ಸಿನಿಮಾ ಹಬ್ಬದಂತೆಯೇ ಭಾಸವಾಗುತ್ತಿದೆ.
ಈಗಿನ ಫಲಿತಾಂಶದಲ್ಲಿ ವಿಜಯ್ ಅವರು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿರುವುದರಿಂದ, ಈ ಕಾರಿನ ನಂಬರ್ ಪ್ಲೇಟ್ ಕೇವಲ ಕಾಕತಾಳೀಯವಲ್ಲ, ಬದಲಿಗೆ ಅವರ ರಾಜಕೀಯ ಪ್ರವೇಶದ ಅಧಿಕೃತ ಮುನ್ಸೂಚನೆಯಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ವಿಜಯ್ ಅವರು ತಮ್ಮ ರಾಜಕೀಯ ಹಾದಿಯನ್ನು ಅತ್ಯಂತ ನಾಜೂಕಾಗಿ ಹೆಣೆದಿದ್ದರು. ಸಿನಿಮಾದ ಮೂಲಕ ಅಭಿಮಾನಿಗಳಲ್ಲಿ ಸಿಎಂ ಆಗುವ ಕುರಿತು ಸಣ್ಣ ಸುಳಿವು ನೀಡಿ, ನಂತರ ಪ್ರಬಲವಾದ ನೆಲೆಯನ್ನೇ ನಿರ್ಮಿಸಿದರು. ಗೋಟ್ ಸಿನಿಮಾದ ಕಾರು ನಂಬರ್ ಪ್ಲೇಟ್‌ನಿಂದ ಹಿಡಿದು ಇಂದಿನ ವಿಧಾನಸಭಾ ಫಲಿತಾಂಶದವರೆಗೆ, ವಿಜಯ್ ಅವರ ಪ್ರತಿಯೊಂದು ನಡೆಯೂ ಅತ್ಯಂತ ಚಾಣಾಕ್ಷತನದಿಂದ ಕೂಡಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ 'ದಳಪತಿ ಯುಗ' ಆರಂಭವಾಗುತ್ತಿದೆ.












Click it and Unblock the Notifications