'ಜಗ್ಗುದಾದಾ' ನಿರ್ದೇಶಕನ ₹3 ಕೋಟಿ ವಂಚನೆ ಆರೋಪಕ್ಕೆ ನಟ ಧ್ರುವ ಸರ್ಜಾ ಸ್ಪಷ್ಟನೆ ಏನು?
ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರ ಮೇಲೆ ನಿರ್ದೇಶಕರೊಬ್ಬರು ಬಹುಕೋಟಿ ವಂಚನೆ ಆರೋಪ ಮಾಡಿದ್ದು, ಮುಂಬೈನಲ್ಲಿ ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದೆ. ನಟ ದರ್ಶನ್ ತೂಗುದೀಪ ಅವರಿಗೆ ಜಗ್ಗುದಾದಾ ಸಿನಿಮಾ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಅವರು ಧ್ರುವ ವಿರುದ್ಧ ದೂರು ಕೊಟ್ಟಿದ್ದಾರೆ. ಧ್ರುವ ಸರ್ಜಾ ಹಲವು ವರ್ಷಗಳ ಹಿಂದೆ ಸಿನಿಮಾ ಮಾಡುವುದಾಗಿ ಒಪ್ಪಿ ಹಣ ಪಡೆದು ಬಳಿಕ, ಆ ಹಣ ವಾಪಸ್ ಕೊಡದೆ ಸಂಪರ್ಕಕ್ಕೂ ಸಿಗಲಿಲ್ಲ ಎಂದು ದೂರು ಕೊಟ್ಟಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಅವರು ಪ್ರತಿಕ್ರಿಯಿಸಿದ್ದಾರೆ.
ಧ್ರುವ ಅವರು ಬರೋಬ್ಬರಿ 3 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು "ಜಗ್ಗುದಾದ" ಸಿನಿಮಾದ ನಿರ್ದೇಶಕ ಹಾಗೂ ರಾಘವೇಂದ್ರ ಹೆಗಡೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಧ್ರುವ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಗ್ಗುದಾದ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ ರಾಘವೇಂದ್ರ ಧ್ರುವ ಸರ್ಜಾ ಅವರಿಗೂ ಸಿನಿಮಾ ಮಾಡಲು ಮುಂದಾಗಿದ್ದರು. ಆಗ ಧ್ರುವ ಕೂಡ ಸಿನಿಮಾ ಮಾಡಲು ಆಸಕ್ತಿ ತೋರಿ, ಮುಂಗಡವಾಗಿ ಮೂರು ಕೋಟಿ ಹಣ ಕೇಳಿದ್ದರು. ಇದಕ್ಕಾಗಿ ರಾಘವೇಂದ್ರ ಅವರು ಬಡ್ಡಿಗೆ ಹಣ ತಂದು ಧ್ರುವಗೆ ಕೊಟ್ಟಿದ್ದರು. ಆದರೆ ಆ ಸಿನಿಮಾ ಕೂಡ ಮಾಡಲಿಲ್ಲ, ಹಣ ಕೂಡ ವಾಪಸ್ ಕೊಡದೆ ಸಂಪರ್ಕ ಸಿಗಲಿಲ್ಲ ಎಂದು ದೂರಿದ್ದರು.

ಧ್ರುವ ಸರ್ಜಾ ಪ್ರತಿಕ್ರಿಯೆ ಏನು?
ನಟ ಧ್ರುವ ಸರ್ಜಾ ವಿರುದ್ಧದ ಹಣ ವಂಚನೆ ಆರೋಪದ ಬಗ್ಗೆ ಅವರ ಆಪ್ತ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ. 'ಧ್ರುವ ಸರ್ಜಾ ಅವರ ವಿರುದ್ಧದ ಹಣ ಆರೋಪದಲ್ಲಿ ಯಾವುದೇ ಹುರುಳಿಲ್ಲ. 2018ರಲ್ಲಿ ರಾಘವೇಂದ್ರ ಹೆಗಡೆ ಅವರ ಆರ್‌ಎಚ್ ಎಂಟರ್‌ಟೇನ್ಮೆಂಟ್, ನಂದಿನಿ ಎಂಟರ್‌ಪ್ರೈಸಸ್‌ನಿಂದ 3.10 ಕೋಟಿ ಅಡ್ವಾನ್ಸ್ ನೀಡಿದ್ದರು. ಇದರಲ್ಲಿ ಆರ್‌ಎಚ್ ಎಂಟರ್‌ಟೇನ್‌ಮೆಂಟ್ 2.90 ಕೋಟಿ ರೂ. ನೀಡಿತ್ತು. ಬಳಿಕ ಒಂದು ವರ್ಷದಲ್ಲಿ ನಾವು ₹20 ಲಕ್ಷವನ್ನು ನಂದಿನಿ ಎಂಟರ್‌ಪ್ರೈಸಸ್‌ಗೆ ವಾಪಸ್ ನೀಡಿದ್ದೆವು' ಎಂದು ಸ್ಪಷ್ಟನೆ ನೀಡಿದ್ದಾರೆ.
'ಅಡ್ವಾನ್ಸ್ ಹಣ ನೀಡುವಾಗ ಸೋಲ್ಜರ್ ಕಥೆಯ ಸಿನಿಮಾ ಸಿದ್ಧಪಡಿಸಿಕೊಂಡು ಬರುತ್ತೇನೆ ಎಂದಿದ್ದರು. ನಿರ್ದೇಶಕರ ಆಫೀಸ್ ಮುಂಬೈನಲ್ಲಿದ್ದು, ನಾವು ಕೇಳಿದಾಗ ಸ್ಟೋರಿ ರೆಡಿ ಮಾಡ್ತಿದ್ದೀವಿ ಎನ್ನುತ್ತಿದ್ದರು. ನಾಲ್ಕು ವರ್ಷಗಳ ನಂತರ ಮೇಲ್ ಮೂಲಕ ಸಿನಿಮಾದ ಅರ್ಧ ಕಥೆ ಕಳಿಸಿದ್ರು. ಇನ್ನು ನಮ್ಮನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಅನ್ನೋದು ಸುಳ್ಳು. ಅದೇ ನಿಜವಾಗಿದ್ರೆ ಇಷ್ಟು ವರ್ಷಗಳ ಬಳಿಕ ಕಥೆ ಏಕೆ ಕಳಿಸಿದ್ರು?' ಎಂದು ಪ್ರಶ್ನಿಸಿದ್ದಾರೆ.

ʼಬೇರೆ ಭಾಷೆಯಲ್ಲಿ ಸಿನಿಮಾ ಮಾಡಿ ಅಂದ್ರುʼ
'ಒಮ್ಮೆ ಅವರು ಸಿನಿಮಾ ಬಜೆಟ್ ಜಾಸ್ತಿಯಾಗುತ್ತೆ, ಕನ್ನಡದಲ್ಲಿ ಸದ್ಯಕ್ಕೆ ಬಿಸಿನೆಸ್ ಚೆನ್ನಾಗಿಲ್ಲ. ತೆಲುಗು ಅಥವಾ ಹಿಂದಿಯಲ್ಲಿ ಸಿನಿಮಾ ಮಾಡಿ ಕನ್ನಡಕ್ಕೆ ಡಬ್ ಮಾಡೋಣ ಅಂದಿದ್ರು. ಆದರೆ ಇದಕ್ಕೆ ಧ್ರುವ ಒಪ್ಪಲಿಲ್ಲ. ಕನ್ನಡದಲ್ಲೇ ಸಿನಿಮಾ ಮಾಡಿ ಎಂದಿದ್ರು. ಮತ್ತೊಮ್ಮೆ ಬೆಂಗಳೂರಿನಲ್ಲಿ ಭೇಟಿಯಾಗಿ ಡೇಟ್ಸ್ ಕೊಡಿ, ತೆಲುಗಿನಲ್ಲಿ ಸಿನಿಮಾ ಮಾಡೋಣ ಅಂದಿದ್ದರು. ಆಗಲೂ ಧ್ರುವ ಕನ್ನಡದಲ್ಲೇ ಸಿನಿಮಾ ಮಾಡೋಣ ಅಂದ್ರು. ಇನ್ನು ಇತ್ತೀಚೆಗೆ ಜುಲೈನಲ್ಲಿ ಅಂಬೋಲಿ ಪೊಲೀಸ್ ಠಾಣೆಯಿಂದ ನೋಟಿಸ್ ಬಂತು' ಎಂದು ಸ್ಪಷ್ಟನೆ ನೀಡಿದ್ದಾರೆ.
'ನೀವು 3.10 ಕೋಟಿ ಕೊಡಬೇಕು, ಬಡ್ಡಿ ಎಲ್ಲ ಸೇರಿ 9.58 ಕೋಟಿ ಆಗಿದೆ. ಇದನ್ನು ವಾಪಸ್ ಕೊಡಿ ಎಂದು ನೋಟಿಸ್‌ನಲ್ಲಿ ತಿಳಿಸಿದ್ದರು. ಆಗ ನಾವು ಅವರನ್ನು ಸಂಪರ್ಕಿಸಿದೆವು, ಅವರು ಫೋನ್ ಕಾಲ್ ರಿಸೀವ್ ಮಾಡಲಿಲ್ಲ. ಅವರಿಗೆ ಸಿನಿಮಾ ಮಾಡಲು ಇಷ್ಟವಿಲ್ಲ, ಧ್ರುವ ಅವರು ಸಾಲವೂ ಪಡೆದಿಲ್ಲ. ಅವರು ನೀಡಿದ್ದು ಅಡ್ವಾನ್ಸ್ ಹಣ. ನಾವು ಸಿನಿಮಾ ಮಾಡಲ್ಲ, ಹಣ ವಾಪಸ್ ಕೊಡಲ್ಲ ಅಂತ ಹೇಳಿಲ್ಲ. ಇದಕ್ಕೆ ನಾವು ಕಾನೂನು ಪ್ರಕಾರವೇ ಉತ್ತರ ಕೊಡುತ್ತೇವೆ' ಎಂದು ಧ್ರುವ ಆಪ್ತ ಅಶ್ವಿನ್ ಹೇಳಿದ್ದಾರೆ.












Click it and Unblock the Notifications