Meghana Raj: ವೇದಿಕೆ ಮೇಲೆ ಕಣ್ಣೀರಿಟ್ಟ ನಟಿ ಮೇಘನಾ ರಾಜ್: ಪತಿ ಚಿರು ಅಗಲಿಕೆಯ ನೋವು ಮರುಕಳಿಸಿದ ಕ್ಷಣ
ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಅವರು ಇತ್ತೀಚೆಗೆ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ತಮ್ಮ ಪತಿ, ದಿವಂಗತ ಚಿರಂಜೀವಿ ಸರ್ಜಾ ಅವರನ್ನು ನೆನೆದು ಭಾವುಕರಾದ ಘಟನೆ ಜರುಗಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ತಮ್ಮ ವೈಯಕ್ತಿಕ ಬದುಕಿನ ಕರಾಳ ಘಟನೆಯನ್ನು ಹಂಚಿಕೊಳ್ಳುತ್ತಿದ್ದಾಗ, ಅದು ಮೇಘನಾ ಅವರ ಮನಸ್ಸಿನ ಆಳದಲ್ಲಿದ್ದ ನೋವನ್ನು ಬಡಿದೆಬ್ಬಿಸಿತು.
ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಆ ಮಹಿಳೆ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅಳುತ್ತಾ, "ಪತಿ ಅಗಲಿದ ನಂತರ ನಾನೂ ಬದುಕಬಾರದು ಎಂದು ಎಷ್ಟೋ ಬಾರಿ ಆತ್ಮಹತ್ಯೆಯ ಆಲೋಚನೆ ಮಾಡಿದ್ದೆ. ಆದರೆ ಆಸ್ಪತ್ರೆಯವರು ನನಗೆ ಧೈರ್ಯ ತುಂಬಿ ಪ್ರಾಣ ಉಳಿಸಿದರು" ಎಂದು ಹೇಳಿದಾಗ ಇಡೀ ಸಭಾಂಗಣ ಮೌನಕ್ಕೆ ಶರಣಾಯಿತು.

ಚಿರು ಹೋದಾಗ ಮೇಘನಾಗೆ ಚಿಕ್ಕ ವಯಸ್ಸು
ಬಳಿಕ ಮಾತು ಮುಂದುವರಿಸಿದ ಆ ಮಹಿಳೆ, ಮೇಘನಾ ರಾಜ್ ಅವರನ್ನು ಉದ್ದೇಶಿಸಿ ಮಾತನಾಡಿದರು. "ಚಿರಂಜೀವಿ ಸರ್ಜಾ ಅವರು ಅಗಲಿದಾಗ ಮೇಘನಾ ಅವರು ತುಂಬಾ ಚಿಕ್ಕ ವಯಸ್ಸಿನವರಾಗಿದ್ದರು" ಎಂದು ಪ್ರಸ್ತಾಪಿಸುತ್ತಿದ್ದಂತೆ, ಮೇಘನಾ ರಾಜ್ ಅವರಿಗೆ ತಮ್ಮ ಹಳೆಯ ನೋವು ಕಾಡಿ ಕಣ್ಣಾಲಿಗಳು ಒದ್ದೆಯಾದವು. ಮಹಿಳೆಯ ನೋವಿನ ಮಾತುಗಳು ಮತ್ತು ಮೇಘನಾ ಅವರ ಜೀವನದ ಹಾದಿ ಸಾಮ್ಯತೆ ಇದ್ದಿದ್ದರಿಂದ ಆ ಕ್ಷಣದಲ್ಲಿ ನಟಿ ತೀವ್ರವಾಗಿ ಭಾವುಕರಾದರು. ಈ ಹೃದಯಸ್ಪರ್ಶಿ ದೃಶ್ಯವು ಕಾರ್ಯಕ್ರಮದಲ್ಲಿದ್ದ ಪ್ರತಿಯೊಬ್ಬರ ಕಣ್ಣನ್ನೂ ತೇವಗೊಳಿಸಿತು.
ವೇದಿಕೆ ಮೇಲೆ ಮೇಘನಾ ರಾಜ್ ಭಾವುಕರಾದ ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮ್ಮ ವೈಯಕ್ತಿಕ ಬದುಕಿನ ಅತಿದೊಡ್ಡ ನೋವನ್ನು ಮರೆತು, ಸಮಾಜದ ಮುಂದೆ ಧೈರ್ಯವಾಗಿ ನಿಂತಿರುವ ಅವರ ವ್ಯಕ್ತಿತ್ವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಪತಿಯ ಅಗಲಿಕೆಯ ನಂತರವೂ ಕುಗ್ಗದೆ, ಮಗ ರಾಯನ್ ಜವಾಬ್ದಾರಿ ಹೊತ್ತು ನೋವಿನಲ್ಲೂ ನಗು ಬೀರುತ್ತಿರುವ ಮೇಘನಾ ನಿಜಕ್ಕೂ ಗ್ರೇಟ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಒಬ್ಬಂಟಿಯಾಗಿ ಜೀವನದ ಹಾದಿಯಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಮೇಘನಾ ರಾಜ್, ಇಂದು ಸಂಕಷ್ಟದಲ್ಲಿರುವ ಎಷ್ಟೋ ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ನೋವನ್ನು ನುಂಗಿ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು ಎನ್ನುತ್ತಿದ್ದಾರೆ.
ಕನ್ನಡ ಚಿತ್ರರಂಗದ ಭರವಸೆಯ ನಟ ಚಿರಂಜೀವಿ ಸರ್ಜಾ ಅವರು 2020ರ ಜೂನ್ 7ರಂದು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದರು. ಕೇವಲ 39ನೇ ವಯಸ್ಸಿನಲ್ಲೇ ಅವರು ಇಹಲೋಕ ತ್ಯಜಿಸಿದ್ದು ಇಡೀ ಕರ್ನಾಟಕಕ್ಕೆ ಬರಸಿಡಿಲು ಬಡಿದಂತಾಗಿತ್ತು. ವಿಶೇಷವೆಂದರೆ, ಆ ಸಮಯದಲ್ಲಿ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದರು. ಪತಿಯ ಅಗಲಿಕೆಯ ಅಗಾಧ ನೋವಿನ ನಡುವೆಯೂ ಮಗ ರಾಯನ್ ಸರ್ಜಾನನ್ನು ಬೆಳೆಸುತ್ತಾ, ಬದುಕಿನಲ್ಲಿ ಧೈರ್ಯದಿಂದ ಮುನ್ನುಗ್ಗುತ್ತಿರುವ ಮೇಘನಾ, ಈಗಲೂ ಅಂತಹ ವೇದಿಕೆಗಳಲ್ಲಿ ನೋವಿನ ಕಥೆಗಳನ್ನು ಕೇಳಿದಾಗ ಪತಿಯನ್ನು ನೆನೆದು ಮರುಗುತ್ತಿರುವುದು ಅವರ ಪ್ರೀತಿಯ ಆಳಕ್ಕೆ ಸಾಕ್ಷಿಯಾಗಿದೆ.













Click it and Unblock the Notifications