CET ಅಭ್ಯರ್ಥಿಗಳ ಗಮನಕ್ಕೆ: ಪರೀಕ್ಷೆಗೆ 2 ಗಂಟೆ ಮುಂಚಿತವಾಗಿ ಹಾಜರಿರಿ; ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏಪ್ರಿಲ್ 23 ಮತ್ತು 24ರಂದು ನಡೆಯಲಿದ್ದು, ಪರೀಕ್ಷಾರ್ಥಿಗಳಿಗೆ ಪ್ರಾಧಿಕಾರವು ಮಹತ್ವದ ಸೂಚನೆಗಳನ್ನು ನೀಡಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ.
2 ಗಂಟೆ ಮೊದಲೇ ಬರಬೇಕು
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿದ ನಂತರವೇ ಕೊಠಡಿಯೊಳಗೆ ಬಿಡಲಾಗುತ್ತದೆ. ಅಭ್ಯರ್ಥಿಗಳ ಮುಖ ಚಹರೆ (Face Recognition) ಮತ್ತು ಕ್ಯೂಆರ್ ಕೋಡ್ ಮೂಲಕ ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಗೆ ಸಮಯ ಹಿಡಿಯುವುದರಿಂದ, ಪರೀಕ್ಷೆ ಆರಂಭವಾಗುವ ಕನಿಷ್ಠ 2 ಗಂಟೆಗಳ ಮೊದಲೇ ಕೇಂದ್ರಕ್ಕೆ ಹಾಜರಿರಬೇಕು ಎಂದು ಪ್ರಾಧಿಕಾರ ತಿಳಿಸಿದೆ. ಪರೀಕ್ಷಾ ಅಕ್ರಮ ತಡೆಯಲು ವಿಶೇಷ 'ವಸ್ತ್ರಸಂಹಿತೆ' ಜಾರಿಗೊಳಿಸಲಾಗಿದ್ದು, ಪ್ರತಿ ಕೇಂದ್ರಕ್ಕೆ ಒಬ್ಬರು ವಸ್ತ್ರಸಂಹಿತೆ ಪರಿಶೀಲನಾ ಅಧಿಕಾರಿಯನ್ನು ನೇಮಿಸಲಾಗಿದೆ.

ಪರೀಕ್ಷಾರ್ಥಿಗಳಿಗೆ ಕಟ್ಟುನಿಟ್ಟಿನ ವಸ್ತ್ರಸಂಹಿತೆ
ಪರೀಕ್ಷಾ ಕೇಂದ್ರಗಳಲ್ಲಿ ಪಾರದರ್ಶಕತೆ ಕಾಪಾಡಲು ವಿಶೇಷ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದ್ದು, ಇದನ್ನು ಮೇಲ್ವಿಚಾರಣೆ ಮಾಡಲು ಪ್ರತಿ ಕೇಂದ್ರಕ್ಕೂ ಒಬ್ಬರು ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆಗಳನ್ನು ಧರಿಸುವುದು ಕಡ್ಡಾಯವಾಗಿದ್ದು, ಕಾಲರ್ ಇಲ್ಲದ ಬಟ್ಟೆಗಳನ್ನು ಧರಿಸಲು ಸಲಹೆ ನೀಡಲಾಗಿದೆ. ಕುರ್ತಾ ಪೈಜಾಮಾ, ಜೀನ್ಸ್ ಪ್ಯಾಂಟ್ ಮತ್ತು ಶೂ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮೊಬೈಲ್ ಫೋನ್, ಬ್ಲೂಟೂತ್ ಹಾಗೂ ಇಯರ್ ಫೋನ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ತರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಈ ವರ್ಷದ ಸಿಇಟಿ ಪರೀಕ್ಷೆಗೆ ಒಟ್ಟು 3,30,479 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅವರಲ್ಲಿ 1.86 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮತ್ತು 1.44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ರಾಜ್ಯಾದ್ಯಂತ ಒಟ್ಟು 745 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಕೇಂದ್ರಗಳ ಮೇಲೂ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗುತ್ತಿದೆ. ಬೆಂಗಳೂರಿನ ಕಮಾಂಡ್ ಸೆಂಟರ್ ಮೂಲಕ ವೆಬ್ ಕಾಸ್ಟಿಂಗ್ ಪ್ರಕ್ರಿಯೆಯು ನಡೆಯಲಿದ್ದು, ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.
ವೇಳಾಪಟ್ಟಿಯ ಪ್ರಕಾರ ಏಪ್ರಿಲ್ 22ರಂದು ಗಡಿನಾಡು ಮತ್ತು ಹೊರನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ನಡೆದರೆ, ಏಪ್ರಿಲ್ 23ರಂದು ಭೌತವಿಜ್ಞಾನ ಹಾಗೂ ರಸಾಯನ ವಿಜ್ಞಾನ ಪರೀಕ್ಷೆಗಳು ಜರುಗಲಿವೆ. ಅಂತಿಮ ದಿನವಾದ ಏಪ್ರಿಲ್ 24ರಂದು ಗಣಿತ ಮತ್ತು ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. 970 ವಿಶೇಷ ಚೇತನ ಅಭ್ಯರ್ಥಿಗಳಿಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಪರೀಕ್ಷಾರ್ಥಿಗಳು ಯಾವುದೇ ಆತಂಕವಿಲ್ಲದೆ ಪ್ರಾಧಿಕಾರದ ನಿಯಮಗಳನ್ನು ಪಾಲಿಸಿ ಪರೀಕ್ಷೆ ಬರೆಯುವಂತೆ ಕೋರಲಾಗಿದೆ.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಕೇವಲ ಪ್ರವೇಶ ಪತ್ರವನ್ನು ಮಾತ್ರವಲ್ಲದೆ, ಸರ್ಕಾರದಿಂದ ಮಾನ್ಯತೆ ಪಡೆದ ಮೂಲ ಗುರುತಿನ ಚೀಟಿಯನ್ನು ತರುವುದು ಕಡ್ಡಾಯ. ಪರೀಕ್ಷಾ ಕೊಠಡಿಯೊಳಗೆ ಯಾವುದೇ ರೀತಿಯ ಕೈಗಡಿಯಾರ ಧರಿಸಲು ಅವಕಾಶವಿರುವುದಿಲ್ಲ. ಕೊಠಡಿಯಲ್ಲಿ ಗೋಡೆ ಗಡಿಯಾರಗಳ ವ್ಯವಸ್ಥೆ ಇರಲಿದ್ದು, ಸಮಯದ ಬಗ್ಗೆ ಅಭ್ಯರ್ಥಿಗಳು ಚಿಂತಿಸಬೇಕಿಲ್ಲ.
ಓಎಂಆರ್ ಶೀಟ್‌ನಲ್ಲಿ ಅಭ್ಯರ್ಥಿಯ ಹೆಸರು, ರಿಜಿಸ್ಟರ್ ನಂಬರ್ ಮತ್ತು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಅನ್ನು ಸರಿಯಾಗಿ ನಮೂದಿಸಬೇಕು. ಒಮ್ಮೆ ಮಾರ್ಕ್ ಮಾಡಿದ ವೃತ್ತವನ್ನು ಅಳಿಸಲು ಅಥವಾ ವೈಟ್‌ನರ್ ಬಳಸಲು ಅವಕಾಶವಿಲ್ಲ. ಸಣ್ಣ ತಪ್ಪು ಕೂಡ ನಿಮ್ಮ ಒಟ್ಟು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಅತ್ಯಂತ ಎಚ್ಚರಿಕೆಯಿಂದ ಓಎಂಆರ್ ಭರ್ತಿ ಮಾಡಿ.












Click it and Unblock the Notifications