ಬೆಂಗಳೂರಿನ ಭ್ರಷ್ಟ ಕೂಟಗಳ ಹಫ್ತಾ ವಸೂಲಿಯ ಅಡ್ಡವಾದ ಕೆರೆಯ ಬಫರ್‌ ಝೋನ್‌: ರಾಜೀವ ಹೆಗಡೆ ಬರಹ

Bengaluru Buffer zone: ಬೆಂಗಳೂರಿನ ಕೆರೆಯ ಬಫರ್‌ ಝೋನ್‌ ಭ್ರಷ್ಟ ಕೂಟಗಳ ಹಫ್ತಾ ವಸೂಲಿಯ ಅಡ್ಡಗಳಾಗಿವೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ರಾಜೀವ್ ಹೆಗಡೆ ಅವರ ಫೇಸ್‌ಬುಕ್ ಬರಹ ಇಲ್ಲಿದೆ.

'ನಾನು ಹತ್ತು ವರ್ಷಗಳ ಹಿಂದೆ ಉತ್ತರಹಳ್ಳಿ-ಕೆಂಗೇರಿ ರಸ್ತೆಯ ಬಿಜಿಎಸ್‌ ಆಸ್ಪತ್ರೆ ಬಳಿ ವಾಸವಿದ್ದೆವು. ನಾವು ವಾಸವಿದ್ದ ಮನೆಯಿಂದ ಸ್ವಲ್ಪ ದೂರದಲ್ಲೇ ದೊಡ್ಡದೊಂದು ಕೆರೆಯಿದೆ. ಒಂದು ದಿನ ಬೆಳಗ್ಗೆ ಏಳುವ ಹೊತ್ತಿಗೆ ನಮ್ಮ ಮನೆಯ ಸುತ್ತಲಿನಿಂದ ಜನರ ಗಲಾಟೆ ಕೇಳುತ್ತಿತ್ತು. ಏನಾಗುತ್ತಿದೆ ಎಂದು ಹೊರಗೆ ಹೋಗಿ ನೋಡಿದಾಗ ಬಿಬಿಎಂಪಿಯ ಲೂಟಿಕೋರರೆಲ್ಲ ಬಂದು ಸರ್ವೆ ಮಾಡುತ್ತಿದ್ದರು. ಯಾವ ಕಾರಣಕ್ಕೆ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಟೇಪ್‌ ಹಿಡಿದುಕೊಂಡಿದ್ದ ಅಧಿಕಾರಿಯನ್ನು ಪ್ರಶ್ನಿಸಿದಾಗ, ʼಕೆರೆಯೆ ಬಫರ್‌ ಝೋನ್‌ ಲೆಕ್ಕಾಚಾರ ನಡೆಯುತ್ತಿದೆʼ ಎಂದಿದ್ದರು'.

Buffer Zone

'ಅಂದು ದಿನವಿಡೀ ಆ ಬಡಾವಣೆಯಲ್ಲಿ ಟೇಪ್‌ ಹಿಡಿದುಕೊಂಡು ಮಾರ್ಕ್‌ ಮಾಡಿದ್ದೇ ಮಾಡಿದ್ದು. ನಾವು ವಾಸವಿದ್ದ ಮನೆಯನ್ನು ದಾಟಿ ರಸ್ತೆಯವರೆಗೂ ಬಿಬಿಎಂಪಿ ಹೇಳಿದ್ದ ʼಬಫರ್‌ ಝೋನ್‌ʼ ಬಂದಿತ್ತು. ಅವರು ಮಾರ್ಕ್‌ ಮಾಡಿದ್ದ ಪ್ರದೇಶದೊಳಗೆ ಹತ್ತಾರು ಮನೆಗಳು ಬಂದಿದ್ದವು. ಟೇಪ್‌ ನೋಡಿ ಹೆದರಿದ್ದ ಒಂದಿಷ್ಟು ಮನೆಯ ಮಾಲೀಕರು ಹೆದರಿ ಬಿಬಿಎಂಪಿ ಅಧಿಕಾರಿಗಳ ಕಚೇರಿಗೆ ಓಡಿ ಹೋಗಿ ವ್ಯವಸ್ಥೆ ಮಾಡಿ ಬಂದಿದ್ದರು. ಕುತೂಹಲಕ್ಕೆಂದು ಮೊನ್ನೆ ಆ ಕಡೆ ಹೋದಾಗ ಒಂದು ರೌಂಡ್‌ ಹೊಡೆದು ಬಂದೆ. ವಿಪರ್ಯಾಸವೆಂದರೆ ಅಂದು ಕೆರೆಯಿಂದ 200-300 ಮೀಟರ್‌ ದೂರವಿದ್ದ ರಸ್ತೆಯವರೆಗೂ ಮಾರ್ಕ್‌ ಮಾಡಿದ್ದರು. ಇಂದು ಕೆರೆಯ ಏರಿಯ ಪಕ್ಕದಲ್ಲೇ ಮನೆಗಳಾಗಿವೆ. ಹೊಸ ಶಾಪಿಂಗ್‌ ಕಾಂಪ್ಲೆಕ್ಸ್‌ ಬಂದಿದೆ'.

'ನಾನು ಈಗ ವಾಸವಿರುವ ಮನೆಯ ಹತ್ತಿರವೂ ಮೊನ್ನೆ ಜಿಬಿಎ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಅದೇ ರೀತಿ ಮಾರ್ಕ್‌ ಮಾಡಿ ಹೋಗಿದ್ದಾರೆ. ಹಲವು ವರ್ಷಗಳ ಹಿಂದೆಯೇ ಇದೇ ರೀತಿಯ ಮಾರ್ಕ್‌ ಮಾಡಿದ್ದರಂತೆ. ಅದಾದ ಮೇಲೆ ಸಾಕಷ್ಟು ಕಾನೂನು ಹೋರಾಟಗಳು ಕೂಡ ನಡೆದಿವೆ. ವಿಪರ್ಯಾಸವೆಂದರೆ ಈ ಬಫರ್‌ ಝೋನ್‌ ಗಡಿಯ ಗುರುತು ಕೆಲವೇ ದಿನಗಳಲ್ಲಿ ಮಾಯವಾಗಿಬಿಡುತ್ತವೆ'.

'ಆಗ ನನಗನಿಸಿದ ವಿಚಾರವೇನೆಂದರೆ, ಯಾವುದಾದರೂ ವಲಯಕ್ಕೆ ಹೊಸ ಪೇಮೆಂಟ್‌ ಗಿರಾಕಿ ಅಧಿಕಾರಿಯ ವರ್ಗಾವಣೆಯಾದಾಗ ಈ ರೀತಿ ಬಫರ್‌ ಝೋನ್‌ ಗುರುತು ಪ್ರಕ್ರಿಯೆ ನಡೆಯುತ್ತದೆ. ನಂತರ ಅವರ ಕಚೇರಿಗಳಿಗೆ ಸಲ್ಲಬೇಕಾದ ಎಲ್ಲ ʼಗೌರವʼಗಳು ತಲುಪುತ್ತವೆ. ನಂತರ ಬಫರ್‌ ಝೋನ್‌ ಮಾಯವಾಗಿಬಿಡುತ್ತದೆ. ಕೆಲ ವರ್ಷಗಳಲ್ಲಿ ಕೆರೆಯೇ ಮಾಯವಾದರೂ ಆಶ್ಚರ್ಯವಿಲ್ಲ. ಇಲ್ಲವಾದಲ್ಲಿ ಪ್ರಾಮಾಣಿಕ ಅಧಿಕಾರಿಯೂ ಈ ಕೆಲಸ ಮಾಡಬಹುದು. ಇದರಿಂದ ಆಕ್ರೋಶಗೊಳ್ಳುವ ಭ್ರಷ್ಟ ವ್ಯವಸ್ಥೆಯು, ಅವರನ್ನು ಬೇರೆಡೆ ವರ್ಗಾಯಿಸರಲೂಬಹುದು. ಆದರೆ ಬೆಂಗಳೂರಿನ ಬಫರ್‌ ಝೋನ್‌ಗಳು ಹಫ್ತಾ ವಸೂಲಿಗೆ ಕಾರಣವಾಗುತ್ತಿರುವುದಂತೂ ನಿಜ'.

ಹಫ್ತಾ ವಸೂಲಿಗೆ ನಾನಾ ಮುಖವಾಡ

'ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಒಂದೊಂದು ವಿಭಾಗದಲ್ಲೂ ಹಫ್ತಾ ವಸೂಲಿಗೆ ಒಂದೊಂದು ಗ್ರೇಟ್‌ ಐಡಿಯಾಗಳಿವೆ. ನಿಮ್ಮ ಮನೆಯ ರಸ್ತೆ ಸುಂದರವಾಗಿಡುತ್ತೇವೆ, ನಿಮ್ಮ ಬಡಾವಣೆಗೆ ಎಲ್ಲ ಸವಲತ್ತು ನೀಡುತ್ತೇವೆ ಎಂದು ತೆರಿಗೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಬಳಿಕ ಅದೇ ರಸ್ತೆ, ಚರಂಡಿಯನ್ನು ಅಗೆದು ಹಾಕಿ ಹೋಗುತ್ತಾರೆ. ತೆರೆದ ಚರಂಡಿಯನ್ನು, ಅಗೆದ ರಸ್ತೆಯನ್ನು ಬೇಗ ಸರಿ ಮಾಡಬೇಕು ಎಂದಾದರೆ ಅದೇ ಜಿಬಿಎಯ ಗುತ್ತಿಗೆದಾರರು ಮನೆ ಅಥವಾ ಅಂಗಡಿಗಳ ಮಾಲೀಕರ ಬಳಿ ಹಫ್ತಾ ವಸೂಲಿ ಮಾಡುತ್ತಾರೆ. ನೀವು ಹಣ ಕೊಟ್ಟಿಲ್ಲವೆಂದರೆ ಚರಂಡಿ ಮೇಲಿನ ಕಲ್ಲನ್ನು ಮತ್ತೆ ಹಾಕುವುದೇ ಇಲ್ಲ. ಆ ಯೋಜನೆಗೆ ಜಿಬಿಎಯಿಂದಲೂ ಗುತ್ತಿಗೆದಾರರಿಗೆ ಹಣ ಬರುತ್ತದೆ. ಅದೇ ಕೆಲಸಕ್ಕೆ ನಾವು ತೆರಿಗೆ ಕಟ್ಟಿಯೂ ಹಣವನ್ನು ಕೊಡಬೇಕು. ಜಿಬಿಎ ಟೆಂಡರ್‌ ಅಥವಾ ನಮ್ಮ ಹಣದಲ್ಲಿ ಒಂದು ಭಾಗವು ಪ್ರಭಾವಿಗಳ ಕಮೀಷನ್‌ಗೆ ಸಂದಾಯವಾಗುತ್ತದೆ. ಶೇ 40ರಷ್ಟು ಕಮೀಷನ್‌ ಎಲ್ಲಿದೆ ಎಂದು ಕೇಳುವವರು ಒಮ್ಮೆ ಈ ಹಫ್ತಾ ವಸೂಲಿದಾರರನ್ನು ಕೇಳಿನೋಡಿ'.

'ಕೊನೆಯದಾಗಿ: ಕೆಲ ವರ್ಷಗಳ ಹಿಂದೆ ರಾಜ್ಯದ ಓರ್ವ ಪ್ರಭಾವಿ ವ್ಯಕ್ತಿಯು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆರೆ ಸಂರಕ್ಷಣೆಯ ಬಗ್ಗೆ ಭಯಾನಕ ಎಚ್ಚರಿಕೆಗಳನ್ನು ಬಿಲ್ಡರ್‌ಗಳಿಗೆ ನೀಡಿದ್ದರು. ಆ ಸುದ್ದಿಯನ್ನು ನಾವು ಖುಷಿಯಿಂದ ಬರೆದು ಪ್ರಕಟಿಸಿದ್ದೆವು. ಕೊನೆಗೂ ಬೆಂಗಳೂರು ಕೆರೆಯ ರಕ್ಷಣೆಗೆ ಮುಹೂರ್ತ ಬಂತು ಎಂದು ಖುಷಿಪಟ್ಟಿದ್ದೆವು. ವಿಪರ್ಯಾಸವೆಂದರೆ ಪತ್ರಿಕಾಗೋಷ್ಠಿಯು ಆ ಪ್ರಭಾವಿ ವ್ಯಕ್ತಿಗೆ ಹಫ್ತಾ ವಸೂಲಿಯ ಬಹಿರಂಗ ಆಹ್ವಾನವಾಗಿತ್ತು. ಆ ವ್ಯಕ್ತಿಯ ಮಗನು ವಿಧಾನಸೌಧದ ಹತ್ತಿರದಲ್ಲಿರುವ ಹೋಟೆಲ್‌ನಲ್ಲಿ ಹಫ್ತಾ ವಸೂಲಿಗೆ ಕಚೇರಿ ತೆರೆದಿದ್ದನಂತೆ. ಕೆರೆಯನ್ನು ನುಂಗಿ ಅಕ್ರಮ ಮಾಡಿದ್ದವರೆಲ್ಲ ಅಲ್ಲಿಗೆ ಬಂದು ಅಕ್ರಮ-ಸಕ್ರಮದ ದಂಡವನ್ನು ಪಾವತಿಸಿದ್ದರು. ಇಂದಿಗೂ ಶಕ್ತಿಸೌಧಗಳಲ್ಲಿ ಇಂತಹ ಹಲವಾರು ಸುದ್ದಿಗೋಷ್ಠಿಗಳು ನಡೆಯುತ್ತವೆ ಎಂದು ನನ್ನ ಪತ್ರಕರ್ತ ಸ್ನೇಹಿತರು ಹೇಳುತ್ತಿರುತ್ತಾರೆ'.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+