Darshan Arrest: ಸಿನಿಮಾ ಆಗುತ್ತಾ ರೇಣುಕಾಸ್ವಾಮಿ ಕೊಲೆ ಪ್ರಕರಣ? ಈ ಟೈಟಲ್‌ಗಳಿಗೆ ಮುಗಿಬಿದ್ದ ನಿರ್ಮಾಪಕರು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್ ಆದಷ್ಟು ಬೇಗನೆ ಹೊರಬಂದರೆ ಸಾಕು ಎಂದು ಅಭಿಮಾನಿಗಳು ಕಾಯುತ್ತಿದ್ದರೆ, ಕೆಲವು ನಿರ್ಮಾಪಕರು ಈ ಘಟನೆ ಆಧರಿಸಿ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಚಲನಚಿತ್ರ ನಿರ್ಮಾಪಕರು ಈಗಾಗಲೇ ಅನೇಕ ಶೀರ್ಷಿಕೆಗಳನ್ನು ನೊಂದಾಯಿಸಲು ಆಸಕ್ತಿ ಹೊಂದಿದ್ದು, ಫಿಲಂ ಚೇಂಬರ್ ಕದ ತಟ್ಟಿದ್ದಾರೆ. ಆದರೆ ದರ್ಶನ್ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇರುವ ಕಾರಣ ಇದಕ್ಕೆ ಸಂಬಂಧಪಟ್ಟ ಯಾವುದೇ ಶೀರ್ಷಿಕೆ ನೀಡದಿರಲು ಫಿಲಂ ಚೇಂಬರ್ ನಿರ್ಧರಿಸಿದ್ದು, ಶಿರ್ಷಿಗಳನ್ನು ತಿರಸ್ಕರಿಸಿದೆ.

ಈ ಶೀರ್ಷಿಕೆಗಳಿಗೆ ಹೆಚ್ಚು ಬೇಡಿಕೆ!
ಕೆಲವು ವರದಿಗಳ ಪ್ರಕಾರ ಹಲವು ನಿರ್ಮಾಪಕರು, ಡಿ-ಗ್ಯಾಂಗ್, ಪಟ್ಟಣಗೆರೆ ಶೆಡ್, ಖೈದಿ ನಂ 6106 ಶೀರ್ಷಿಕೆಗಳನ್ನು ನೋಂದಾಯಿಸಲು ಪ್ರಯತ್ನಪಟ್ಟಿದ್ದಾರೆ. ಡಿ-ಗ್ಯಾಂಗ್ ಎನ್ನುವುದು ದರ್ಶನ್ ಮತ್ತು ಅವರ ಸಹಚರರನ್ನು ಗುರುತಿಸಲು ಬಳಸುವ ಪದವಾಗಿದೆ. ಪಟ್ಟಣಗೆರೆ ಶೆಡ್ ರೇಣುಕಾಸ್ವಾಮಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿರುವ ಸ್ಥಳವಾಗಿದೆ.
ಖೈದಿ ನಂ 6106 ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಅವರಿಗೆ ನೀಡಿರುವ ವಿಚಾರಣಾಧೀನ ಖೈದಿ ಸಂಖ್ಯೆಯಾಗಿದೆ. ಈ ಟೈಟಲ್‌ಗಳು ವಿವಾದ ಸೃಷ್ಟಿಸುವ ಜೊತೆಗೆ ಕಾನೂನಾತ್ಮಕ ಸಮಸ್ಯೆಗಳನ್ನು ತರಬಹುದು ಎನ್ನುವ ಕಾರಣದಿಂದ ಶೀರ್ಷಿಕೆ ನೀಡಲು ಫಿಲಂ ಚೇಂಬರ್ ನಿರ್ಧಾರ ಮಾಡಿದೆ.
ಖೈದಿ ನಂ 6016 ಎನ್ನುವುದು ಈಗ ಸಖತ್ ಟ್ರೆಂಡಿಂಗ್ ಆಗಿದೆ. ಕೆಲವು ದರ್ಶನ್ ಅಭಿಮಾನಿಗಳು ಈಗಾಗಲೇ ಖೈದಿ ನಂ 6016 ಎನ್ನುವ ಸ್ಟಿಕ್ಕರ್ ಗಳನ್ನು ಬೈಕ್, ಆಟೋ, ಕಾರು ಸೇರಿದಂತೆ ತಮ್ಮ ವಾಹನಗಳ ಮೇಲೆ ಹಾಕಿಸಿಕೊಳ್ಳುವ ಮೂಲಕ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ.
2013ರಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. 28 ದಿನ ಪರಪ್ಪನ ಅಗ್ರಹಾರದಲ್ಲಿದ್ದ ಅವರು ಆಚೆ ಬಂದಿದ್ದರು. ಅದೇ ಸಮಯದಲ್ಲಿ ಬಿಡುಗಡೆಯಾಗಿದ್ದ ಅವರ ಸಾರಥಿ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಈಗಲೂ ದರ್ಶನ್ ಜೈಲುಪಾಲಾಗಿದ್ದಾರೆ. ಡೆವಿಲ್ ಸಿನಿಮಾ ಚಿತ್ರೀಕರಣ ಈಗಾಗಲೇ ಅರ್ಧ ಮುಗಿದಿದ್ದು, ಅವರು ಜಾಮೀನಿನ ಮೇಲೆ ಹೊರಬಂದರೂ ಚಿತ್ರಿಕರಣ ಮುಗಿಸುವ ಸಾಧ್ಯತೆ ಇದೆ. ಡೆವಿಲ್ ಕೂಡ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತದೆ ಎಂದು ಅಭಿಮಾನಿಗಳು ವಿಶ್ವಾಸ ಹೊಂದಿದ್ದಾರೆ.
ದರ್ಶನ್ ಜೈಲಿನಲ್ಲಿದ್ದರೂ ಅಭಿಮಾನಿಗಳು ಮಾತ್ರ ದರ್ಶನ್‌ರನ್ನು ಕೈಬಿಡುವ ಮಾತೇ ಇಲ್ಲ ಎನ್ನುತ್ತಿದ್ದಾರೆ. ಅನೇಕ ಅಭಿಮಾನಿಗಳು ಪರಪ್ಪನ ಅಗ್ರಹಾರದ ಬಳಿಗೆ ತೆರಳಿ ದರ್ಶನ್‌ರನ್ನು ತೋರಿಸಿ ಎಂದು ಒತ್ತಾಯ ಕೂಡ ಮಾಡುತ್ತಿದ್ದು, ಪೊಲೀಸರು ಅಭಿಮಾನಿಗಳನ್ನು ಸಮಾಧಾನ ಮಾಡಿ ಕಳುಹಿಸುತ್ತಿದ್ದಾರೆ.












Click it and Unblock the Notifications