Darshan Thoogudeepa: ಬಳ್ಳಾರಿ ಜೈಲಿನಿಂದ ದರ್ಶನ್ ದಿಢೀರ್ ಶಿಫ್ಟ್!
ನಟ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಮೂರು ತಿಂಗಳಿಗಿಂತಲೂ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ದರ್ಶನ್ ಆರೋಗ್ಯ ಸಮಸ್ಯೆ ಬಿಗಡಾಯಿಸುತ್ತಿದೆ. ಮಂಗಳವಾರ ಸಂಜೆ ಸಹ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮಂಗಳವಾರ ರಾತ್ರಿ ದರ್ಶನ್ ಅವರನ್ನು ಏಕಾಏಕಿ ಬಳ್ಳಾರಿ ಜೈಲಿನಿಂದ ಶಿಫ್ಟ್ ಮಾಡಲಾಗಿದೆ. ತಡರಾತ್ರಿ ಆಂಬ್ಯುಲೆನ್ಸ್ ಮೂಲಕ ಅವರನ್ನು ಕರೆದುಕೊಂಡು ಹೋಗಲಾಗಿದೆ. ಕಳೆದ ಹಲವು ದಿನಗಳಿಂದ ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರು ಬೆನ್ನು ನೋವಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಳಿತುಕೊಳ್ಳಲು ಆಗದೆ, ನಿಲ್ಲಲು ಸಹ ಆಗದೆ ಪರದಾಡುತ್ತಿದ್ದಾರೆ. ಬೆನ್ನು ನೋವು ತೀವ್ರವಾಗಿರುವ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಮಾಡುವ ಉದ್ದೇಶದಿಂದ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಹೇಳಲಾಗಿದೆ. ಅಭಿಮಾನಿಗಳು ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನ ಸುತ್ತಮುತ್ತ ಹಾಗೂ ಆಸ್ಪತ್ರೆ ಭಾಗದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.

ದರ್ಶನ್ ವಿಮ್ಸ್‌ಗೆ ಯಾಕೆ: ಕಳೆದ ಕೆಲವು ದಿನಗಳಿಂದ ದರ್ಶನ್ ಅವರ ಆರೋಗ್ಯ ಸರಿ ಇಲ್ಲ. ಜೈಲಿನ ವಾತಾವರಣಕ್ಕೆ ಅಥವಾ ಅನ್ಯ ಕಾರಣದಿಂದ ಅವರ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಾಣಿಸಿಕೊಂಡಿದೆ. ಈಚೆಗಷ್ಟೇ ಅವರು ಬೆನ್ನು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದಾರೆ ಎನ್ನಲಾಗಿದ್ದ ಮಾಹಿತಿ ಹೊರ ಬಿದ್ದಿತ್ತು. ಇದೀಗ ಅವರಿಗೆ ಬೆನ್ನು ನೋವು ತೀವ್ರವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈಚೆಗೆ ದರ್ಶನ್ ಅವರು ಬೆನ್ನು ನೋವಿನಿಂದ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಬಂದಿದ್ದ ವೈದ್ಯರು ದರ್ಶನ್ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಇದಾದ ನಂತರ ದರ್ಶನ್ ಅವರಿಗೆ ಎಂಆರ್ಐ ಸ್ಕ್ಯಾನಿಂಗ್ ಸೇರಿದಂತೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ವಿಮ್ಸ್‌ಗೆ ಕರೆದುಕೊಂಡು ಹೋಗಲು ವೈದ್ಯರು ಸಲಹೆ ನೀಡಿದ್ದರು ಎಂದು ಹೇಳಲಾಗಿದೆ. ಇದೀಗ ಮಂಗಳವಾರ ತಡರಾತ್ರಿ ದರ್ಶನ್ ಅವರಿಗೆ ಹೆಲ್ತ್ ಚೆಕಪ್ ಮಾಡುವುದಕ್ಕಾಗಿ ವಿಮ್ಸ್‌ಗೆ ಅವರನ್ನು ಕರೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತಿದೆ.
ಭಾರೀ ಪೊಲೀಸ್ ಭದ್ರತೆ: ಇನ್ನು ದರ್ಶನ್ ಅವರನ್ನು ವಿಮ್ಸ್‌ಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಬಳ್ಳಾರಿ ಪೊಲೀಸರು ಭಾರೀ ಭದ್ರತೆ ಕಲ್ಪಿಸಿದ್ದಾರೆ. ಅಭಿಮಾನಿಗಳಿಂದ ಸಮಸ್ಯೆ ಆಗಬಹುದು ಅಥವಾ ಆಂಬ್ಯುಲೆನ್ಸ್ ಮುಂದೆ ಬರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ ಬಳ್ಳಾರಿ ಜೈಲಿನ ಸುತ್ತಮುತ್ತಲಿನ ಪ್ರದೇಶ ಹಾಗೂ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಪೊಲೀಸ್ ಆಂಬ್ಯುಲೆನ್ಸ್ ಮೂಲಕ ಶಿಫ್ಟ್: ದರ್ಶನ್ ಅವರನ್ನು ವಿಮ್ಸ್‌ಗೆ ಒಳ್ಳಾರಿ ಪೊಲೀಸ್ ಠಾಣೆಯ ಪೊಲೀಸ್ ಆಂಬ್ಯುಲೆನ್ಸ್ ನ ಮೂಲಕವೇ ಕರೆದುಕೊಂಡು ಹೋಗಲಾಗಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ದರ್ಶನ್ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.
ದರ್ಶನ್ ಅರ್ಜಿ ವಿಚಾರಣೆ ಮುಂದಕ್ಕೆ: ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 28ಕ್ಕೆ ಮುಂದೂಡಿಕೆಯಾಗಿದೆ. ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲೂ ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದೆ. ಹೀಗಾಗಿ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದು, ಜಾಮೀನು ನೀಡಬೇಕು ಎಂದು ದರ್ಶನ್ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.












Click it and Unblock the Notifications