ದರ್ಶನ್-ಸುದೀಪ್ ದೋಸ್ತಿ ಬ್ರೇಕ್ ಆಗಿದ್ದು ಜಗಳದಿಂದ ಅಲ್ಲ: ಅಸಲಿ ಕಾರಣ ಬಿಚ್ಚಿಟ್ಟ 'ನವಗ್ರಹ' ನಟ ಧರ್ಮ ಕೀರ್ತಿರಾಜ್
ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರಾದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ತೂಗುದೀಪ ಮತ್ತು 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರ ಸ್ನೇಹ ಹಾಗೂ ಮುನಿಸಿನ ಕುರಿತು ಸ್ಯಾಂಡಲ್‌ವುಡ್‌ನಲ್ಲಿ ಸದಾ ಚರ್ಚೆ ನಡೆಯುತ್ತಲೇ ಇರುತ್ತದೆ. ಒಂದು ಕಾಲದಲ್ಲಿ "ಕುಚಿಕು ಗೆಳೆಯರಂತೆ" ಇದ್ದ ಇವರಿಬ್ಬರು ಇದ್ದಕ್ಕಿದ್ದಂತೆ ದೂರಾಗಿದ್ದು ಇಡೀ ಚಿತ್ರರಂಗ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿತ್ತು. ಇಬ್ಬರ ನಡುವೆ ಏನಾಯಿತು? ಮುನಿಸಿಗೆ ಅಸಲಿ ಕಾರಣವೇನು? ಎಂಬ ಪ್ರಶ್ನೆಗೆ ದರ್ಶನ್ ಅವರ ಆಪ್ತ ಗೆಳೆಯ, ನಟ ಧರ್ಮ ಕೀರ್ತಿರಾಜ್ ಕೊನೆಗೂ ಬಹಿರಂಗಪಡಿಸಿದ್ದಾರೆ.
ದೊಡ್ಡ ಗಲಾಟೆ ಅಥವಾ ವಾಗ್ವಾದ ನಡೆದಿಲ್ಲ
ದರ್ಶನ್ ಅವರೊಂದಿಗೆ 'ನವಗ್ರಹ' ಸಿನಿಮಾದಲ್ಲಿ ನಟಿಸಿದ್ದ ಧರ್ಮ ಕೀರ್ತಿರಾಜ್, ಇಬ್ಬರು ಸ್ಟಾರ್ ನಟರ ಮುನಿಸಿನ ಕುರಿತು ಮಾತನಾಡಿದ್ದಾರೆ. ದರ್ಶನ್ ಮತ್ತು ಸುದೀಪ್ ಅವರು ದೂರಾಗಲು ಯಾವುದೇ ದೊಡ್ಡ ಜಗಳ ಅಥವಾ ವೈಯಕ್ತಿಕ ದ್ವೇಷ ಕಾರಣವಲ್ಲ ಎಂದು ಧರ್ಮ ಕೀರ್ತಿರಾಜ್ ಸ್ಪಷ್ಟಪಡಿಸಿದ್ದಾರೆ. "ನನ್ನ ಪ್ರಕಾರ ವೈಯಕ್ತಿಕವಾಗಿ ಈ ಫ್ರೆಂಡ್‌ಶಿಪ್ ಬ್ರೇಕ್ ಆಗಲೇಬೇಕು, ನಮಗೆ ಈ ಸ್ನೇಹವೇ ಬೇಡ ಎಂದು ಇಬ್ಬರೂ ನಿರ್ಧರಿಸಿ ದೂರಾಗಿಲ್ಲ. ಅವರ ನಡುವೆ ಯಾವುದೇ ದೊಡ್ಡ ಮಟ್ಟದ ಮಾತಿನ ಚಕಮಕಿ ಅಥವಾ ವಾಗ್ವಾದವೂ ನಡೆದಿಲ್ಲ. ಒಬ್ಬರ ಮೇಲೆ ಒಬ್ಬರು ಕೆಟ್ಟದಾಗಿ ಮಾತನಾಡಿಕೊಂಡಿದ್ದೂ ಇಲ್ಲ" ಎಂದು ಧರ್ಮ ಯೂಟ್ಯೂಬ್ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

'ಮಿಸ್ ಕಮ್ಯುನಿಕೇಷನ್' ತಂದಿಟ್ಟ ಆಪತ್ತು
ಇಬ್ಬರ ನಡುವಿನ ಬಿರುಕಿಗೆ ಮುಖ್ಯ ಕಾರಣ 'ಸಹಜ ಮನಸ್ತಾಪ ಮತ್ತು ಸಂವಹನದ ಕೊರತೆ' (Miss Communication) ಇರಬಹುದು ಎಂದು ಧರ್ಮ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರ ನಡುವೆ ಯಾವುದೋ ಒಂದು ವಿಷಯದಲ್ಲಿ ಸರಿಯಾದ ಕ್ಲಾರಿಟಿ ಸಿಗದೆ ಅಪಾರ್ಥವಾಗಿರಬಹುದು. ಸಿನಿಮಾ ರಂಗದಲ್ಲಿ ಒಬ್ಬರ ವಿಷಯ ಮತ್ತೊಬ್ಬರ ಕಿವಿಗೆ ತಲುಪಿಸುವಾಗ ಹಾದಿ ತಪ್ಪಿಸುವ ಸಾಧ್ಯತೆ ಇರುತ್ತದೆ. ಒಂದು ವಿಚಾರ ಒಬ್ಬರಿಗೆ ತಲುಪಬೇಕಾದ ರೀತಿಯಲ್ಲಿ ತಲುಪದೆ, ತಪ್ಪಾಗಿ ಅರ್ಥವಾಗಿರಬಹುದು ಎಂದಿದ್ದಾರೆ.
ಈ ಸಣ್ಣಪುಟ್ಟ ಗೊಂದಲಗಳಿಂದ ಬೇಸತ್ತು, "ಆಯ್ತಪ್ಪ, ನಾನು ನನ್ನ ಪಾಡಿಗೆ ಇರುತ್ತೇನೆ, ನೀನು ನಿನ್ನ ಪಾಡಿಗೆ ಇರು" ಎಂದು ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಂಡಿರಬಹುದು ಎಂದಿದ್ದಾರೆ ಧರ್ಮ. ದರ್ಶನ್ ಹಾಗೂ ಸುದೀಪ್ ಅವರು ದೂರಾಗಲು ನಿಖರವಾದ ಕಾರಣ ಇಲ್ಲ. ಒಬ್ಬರ ಮೇಲೆ ಒಬ್ಬರು ಮಾತನಾಡುವುದು ಅದೇನಿಲ್ಲ. ನನ್ನ ಪ್ರಕಾರ ಪರ್ಸನಲ್ ಆಗಿ ಈ ಫ್ರೆಂಡ್‌ಶಿಪ್ ಬ್ರೇಕ್ ಆಗಬೇಕು, ಈ ಸ್ನೇಹ ಬೇಡ ಅನ್ನೋದು, ಅಥವಾ ಯಾವುದೇ ವಾಗ್ವಾದ ಕೂಡ ಆಗಿಲ್ಲ ಎಂದಿದ್ದಾರೆ.
ಮುಂದೊಂದು ದಿನ ಒಂದಾಗಬಹುದು
ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗಲಿದ್ದಾರಾ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಧರ್ಮ ಕೀರ್ತಿರಾಜ್ ಭರವಸೆಯ ಉತ್ತರ ನೀಡಿದ್ದಾರೆ. "ಮುಂದಿನ ದಿನಗಳಲ್ಲಿ ಇಬ್ಬರೂ ಮತ್ತೆ ಒಂದಾಗುವ ಸಾಧ್ಯತೆ ಖಂಡಿತ ಇದೆ. ಎಲ್ಲದಕ್ಕೂ ಸಮಯವೇ ಉತ್ತರ ಕೊಡಬೇಕಿದೆ. ಇವರಿಬ್ಬರೂ ಒಂದಾದರೆ ಅದು ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಮತ್ತು ಒಳ್ಳೆಯ ಬೆಳವಣಿಗೆ. ಚಿತ್ರರಂಗದಲ್ಲಿ ಇಬ್ಬರು ದೊಡ್ಡ ನಾಯಕರನ್ನು ಒಟ್ಟಿಗೆ ನೋಡುವುದೇ ಕಣ್ಣಿಗೆ ಹಬ್ಬ. ಇದು ಚಿತ್ರರಂಗಕ್ಕೂ ಒಳ್ಳೆಯದು, ಅಭಿಮಾನಿಗಳಿಗೂ ಹಬ್ಬದ ಸಂಭ್ರಮ ತರುತ್ತದೆ" ಎಂದು ಧರ್ಮ ಆಸೆ ಬಿಚ್ಚಿಟ್ಟಿದ್ದಾರೆ. ದರ್ಶನ್ ಮತ್ತು ಸುದೀಪ್ ನಡುವೆ ಯಾವುದೇ ಗಂಭೀರ ಶತ್ರುತ್ವ ಇಲ್ಲ, ಕೇವಲ ಸಣ್ಣ ಅಪಾರ್ಥಗಳಿಂದ ದೂರಾಗಿದ್ದಾರೆ ಎಂಬ ಧರ್ಮ ಕೀರ್ತಿರಾಜ್ ಅವರ ಹೇಳಿಕೆ, ಇಬ್ಬರು ನಟರು ಮತ್ತೆ ಒಂದಾಗಲಿದ್ದಾರೆ ಎಂದು ಕಾಯುತ್ತಿರುವ ಕೋಟ್ಯಂತರ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.













Click it and Unblock the Notifications