Darshan: ದರ್ಶನ್ ಈ ರೀತಿ ಬದಲಾಗಲು ಆ ಒಂದು ಘಟನೆ ಕಾರಣ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಮಂದಿ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟು ಸಾಯಿಸಲಾಗಿದೆ ಎಂದು ಹೇಳಲಾಗಿದೆ. ಪತ್ನಿ, ಮಗ ಇದ್ದರೂ ಪವಿತ್ರಾ ಗೌಡ ಸ್ನೇಹ ಮಾಡಿದ್ದು ಈಗ ದರ್ಶನ್‌ಗೆ ಸಂಕಷ್ಟ ತಂದೊಡ್ಡಿದೆ.

ಸಿನಿಮಾರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ನಟ ದರ್ಶನ್ ಈ ರೀತಿ ಇರಲಿಲ್ಲ, ಅವರ ಹಳೆಯ ಸಂದರ್ಶನದ ವಿಡಿಯೋಗಳನ್ನು ನೋಡಿದರೆ ಅವರಲ್ಲಿನ ಮುಗ್ದತೆಯನ್ನು ಗಮನಿಸಬಹುದು. ಆದರೆ ಈಗಿರುವ ದರ್ಶನ್ ಅದಕ್ಕೆ ಸಂಪೂರ್ಣ ತದ್ವಿರುದ್ಧ.
ದರ್ಶನ್ ಬದಲಾಗಿದ್ದೇಕೆ?
ನಟ ದರ್ಶನ್ ಅವರಿಗೆ ಭಾರಿ ಹೆಸರು ತಂದುಕೊಟ್ಟ ಸಿನಿಮಾ ಕಲಾಸಿಪಾಳ್ಯ. ಆರಂಭದಲ್ಲಿ ಪತ್ನಿ ವಿಜಯಲಕ್ಷ್ಮಿಯನ್ನು ಪ್ರೀತಿಸುತ್ತಿದ್ದ ದರ್ಶನ್ ಪತ್ನಿ ಹೆಸರಿನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹಣ ತೊಡಗಿಸಿದ್ದರು ಎನ್ನಲಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಪತ್ನಿ ಜೊತೆ ಭಿನ್ನಾಭಿಪ್ರಾಯ ಉಂಟಾಗುತ್ತದೆ.
ಪತ್ನಿಗೆ ಥಳಿಸಿದ ಪ್ರಕರಣದಲ್ಲಿ 2011ರಲ್ಲಿ ದರ್ಶನ್ 28 ದಿನ ಜೈಲಿಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಬಿಡುಗಡೆಯಾದ ಸಾರಥಿ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು.
ಜೈಲಿಗೆ ಹೋದ ಬಳಿಕ ದರ್ಶನ್ ಜೊತೆಯಿದ್ದ ಉತ್ತಮ ಸ್ನೇಹಿರು ದೂರವಾದರು. ಜೈಲಿಗೆ ಹೋದ ಘಟನೆ ಬಳಿಕ ದರ್ಶನ್ ರಾಜಕೀಯ ವ್ಯಕ್ತಿಗಳನ್ನು ಹೆಚ್ಚಾಗಿ ಪರಿಚಯ ಮಾಡಿಕೊಂಡರು. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಅವರು ಹಲವು ರಾಜಕಾರಣಿಗಳ ಪರ ಪ್ರಚಾರ ಮಾಡಿದ್ದು ಇದಕ್ಕೆ ಸಾಕ್ಷಿ.
ಅಂಬರೀಷ್ ಇದ್ದಾಗ ದರ್ಶನ್‌ಗೆ ಬೈದು ಬುದ್ದಿ ಹೇಳುವ ಸಲುಗೆ ಹೊಂದಿದ್ದರು. ಆದರೆ ಅಂಬರೀಷ್ ಸಾವಿನ ಬಳಿಕ ದರ್ಶನ್‌ಗೆ ಬುದ್ಧಿ ಹೇಳುವವರು ಕೂಡ ಇಲ್ಲದಂತಾಗಿದೆ ಎನ್ನುವ ಮಾತು ಗಾಂಧಿನಗರದಿಂದ ಕೇಳಿಬಂದಿದೆ.
ಸಹವಾಸ ದೋಷ ಕಾರಣ?
ದರ್ಶನ್ ಅವರ ಈ ಸ್ಥಿತಿಗೆ ಅವರ ಸ್ನೇಹಿತ ವಲಯ ಕೂಡ ಕಾರಣ ಎನ್ನುವ ಮಾತಿದೆ. 2011ರಲ್ಲಿ ಜೈಲಿಗೆ ಹೋಗಿ ಬಂದ ನಂತರ ಅನೇಕ ಉತ್ತಮ ಸ್ನೇಹಿತರು ಅವರಿಂದ ದೂರವಾಗುತ್ತಾರೆ. ಬಳಿಕ ಅವರ ಜೊತೆ ಸೇರುವವರು ದರ್ಶನ್ ಅವರಿಗೆ ಬುದ್ದಿ ಹೇಳುವ ಬದಲು ಏನೇ ಮಾಡಿದರೂ ನಡೆಯುತ್ತದೆ ಎನ್ನುವ ಪಟಾಲಂನಿಂದ ದರ್ಶನ್ ದಾರಿ ತಪ್ಪಿದರು ಎನ್ನುವ ಮಾತಿದೆ.
ಏನಾದರೂ ಆಗಲಿ, ಒಂದು ಜೀವ ತೆಗೆದಿರುವ ಆರೋಪ ಇಂದು ದರ್ಶನ್ ಮೇಲಿದೆ. ಕೋಟ್ಯಂತರ ಅಭಿಮಾನಿಗಳಿಗೆ ಆದರ್ಶಪ್ರಾಯರಾಗಬೇಕಿದ್ದ ನಟನೊಬ್ಬ ಹೀಗೆ ಬಂಧನವಾಗಿದ್ದು ದೊಡ್ಡ ದುರಂತವೇ ಸರಿ.












Click it and Unblock the Notifications