Daali Dhananjay: ಸಿದ್ದರಾಮಯ್ಯಗೆ ಮದುವೆಯ ಮೊದಲ ಆಮಂತ್ರಣ ಪತ್ರಿಕೆ ನೀಡಿದ ಡಾಲಿ ಧನಂಜಯ
ಬೆಂಗಳೂರು,ಡಿಸೆಂಬರ್ 15: ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರು ಕೆಲ ವಾರಗಳ ಹಿಂದಷ್ಟೆ ಸಖತ್ ಸಿಂಪಲ್ ಆಗಿ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಫೆಬ್ರವರಿ ತಿಂಗಳಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಫೆಬ್ರವರಿ 16ರಂದು ಬಾಳ ಬಂಧನಕ್ಕೆ ಕಾಲಿಡಲಿರುವ ನಟ ಧನಂಜಯ್ ಮತ್ತು ಸಂಗಾತಿ ಧನ್ಯತಾ ಜೋಡಿ, ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನಿಸಿದೆ.
ನಟ ಡಾಲಿ ಧನಂಜಯ್ ಅವರು ನಿಶ್ಚಿತಾರ್ಥದ ನಂತರ ಮದುವೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಪೂಜೆ ಮಾಡಿಸುವ ಮೂಲಕ ಮದುವೆಯ ಕೆಲಸ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮೊದಲು ಬಂಡೆ ಮಹಾಕಾಳಿ ದೇವಿಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮದುವೆ ಆಮಂತ್ರಣ ಪತ್ರಿಕೆಗೆ ಪೂಜೆ ಮಾಡಿಸಿಕೊಂಡು ದೇವಿಯ ಆಶೀರ್ವಾದ ಪಡೆದಿದ್ದಾರೆ.

ನಂತರ ಮದುವೆಯ ಮೊದಲ ಇನ್ವಿಟೇಷನ್ ಅನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ ಡಾಲಿ ಮತ್ತು ಧನ್ಯತಾ ಆಶೀರ್ವಾದ ಪಡೆದಿದ್ದಾರೆ. ಡಾಲಿ ಧನಂಜಯ ಅವರು ಸಿನಿಮಾ ಕ್ಷೇತ್ರದಲ್ಲಿದ್ದರೂ ರಾಜಕೀಯ ಗಣ್ಯರ ಜೊತೆಯೂ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಹೀಗಾಗಿ ಮೊದಲು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಅವರಿಗೂ ಮದುವೆಯ ಆಮಂತ್ರಣವನ್ನ ನೀಡಿದ್ದಾರೆ. ಸಿಎಂ ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ನೀಡಿ ಆಶೀರ್ವಾದ ಪಡೆದಿದ್ದಾರೆ.
ಕೈಬರಹದ ಆಮಂತ್ರಣ ಪತ್ರ
ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆ ವಿಭಿನ್ನವಾಗಿ ಡಿಸೈನ್ ಮಾಡಿಸಬೇಕು ಅನ್ನೋ ಆಲೋಚನೆ ಎಲ್ಲಾರಲ್ಲೂ ಇರುತ್ತದೆ. ಆದರೆ, ಸರಳವಾದ ಪೋಸ್ಟ್ ಕಾರ್ಡ್ ಮಾದರಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಡಿಸೈನ್ ಮಾಡಿದ್ದು, ಆಮಂತ್ರಣ ಪತ್ರಿಕೆಯ ಒಳಗೆ ಸ್ವತಃ ವಧು-ವರರು ಆಪ್ತವಾಗಿ ಪತ್ರ ಬರೆದಿರುವ ರೀತಿಯ ಸಾಲುಗಳನ್ನು ಬರೆಯಲಾಗಿದೆ.
'ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ. ತಾವು ಎಲ್ಲಿದ್ದರೂ ಜಗದ ಯಾವುದೇ ಮೂಲೆಯಲ್ಲಿ ಇದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವದಿಸಬೇಕು.
ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ, ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ ಹಾಗೂ ಧನ್ಯತಾ' ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಈ ಬರೆಹ ಸಹ ಕೈಬರಹದ ಫಾಂಟ್ನಲ್ಲಿಯೇ ಇದೆ.
ಡಾಲಿ ಧನಂಜಯ ಅವರು ಫೆಬ್ರವರಿ 16ರಂದು ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಗ್ರೌಂಡ್ ನಲ್ಲಿ ಮದುವೆ ನಡೆಯಲಿದೆ. ಶನಿವಾರ ಆರತಕ್ಷತೆ ಭಾನುವಾರ ವಿವಾಹ ನೆರವೇರಲಿದೆ. ಸದ್ಯ ಇಂದಿನಿಂದ ಪತ್ರಿಕೆ ಹಂಚಲು ಶುರು ಮಾಡಿದ್ದು, ಡಾಲಿ ಮದುವೆಗೆ ಕೇಲವ ಸಿನಿಮಾ ಗಣ್ಯರು ಮಾತ್ರವಲ್ಲದೇ ರಾಜಕೀಯ ಗಣ್ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.











Click it and Unblock the Notifications