ರಾಕೇಶ್ ಪೂಜಾರಿ ಸಾವಿನ ಬೆನ್ನಲ್ಲೇ ವಿಶೇಷ ಕರೆ ಕೊಟ್ಟ ಕ್ರೇಜಿಸ್ಟಾರ್
ಇತ್ತೀಚೆಗೆ ಅಕಾಲಿಕ ನಿಧನರಾದ ಕಾಮಿಡಿ ಕಿಲಾಡಿಗಳು ಸೀಸನ್-3ರ ವಿನ್ನರ್ ರಾಕೇಶ್ ಪೂಜಾರಿ ಅವರ ನೆನಪು ಇನ್ನೂ ಮಾಸಿಲ್ಲ. ಜೀ ವೇದಿಕೆಯಲ್ಲೂ ರಾಕೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸ್ಮರಿಸಲಾಗಿದೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಮನೆಮಾತಾಗಿದ್ದ ರಾಕೇಶ್‌ನನ್ನು ಅವರ ಸ್ನೇಹಿತರೆಲ್ಲ ನೆನೆದು ಕಣ್ಣೀರಿಟ್ಟಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ವಿಶೇಷವಾಗಿ ರಾಕೇಶ್‌ಗೆ ನಮನ ಸಲ್ಲಿಸಲಾಗಿದೆ. ಇದೇ ವೇಳೆ ಈ ಶೋನ ಜಡ್ಜ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ರಾಕೇಶ್ ಬಗ್ಗೆ ಕೆಲವು ಭಾವುಕ ಮಾತುಗಳನ್ನಾಡಿದ್ದಾರೆ.
ʼನಾವೆಲ್ಲ ಮೌನಾಚರಣೆ ಮಾಡಿದಾಗಲೂ ನಮಗೆ ಕಂಡಿದ್ದು ರಾಕೇಶ್ ನಗು ಮಾತ್ರ. ಮೊದಲನೇ ಸಲ ಅವನು ನಗಿಸುತ್ತಿದ್ದಾನೆ, ಆದ್ರೆ ನಾವು ನಗೋಕೆ ಆಗ್ತಿಲ್ಲ. ಬಹುಶಃ ವಯಸ್ಸಿಗೂ ಆಯಸ್ಸಿಗೂ ನಂಟು ಮುಗಿದಿದೆ. ಹಿಂದೆ ವಯಸ್ಸಾದರೆ ಮಾತ್ರ ಆಯಸ್ಸು ಮುಗಿಬೇಕು, ಉಸಿರು ನಿಲ್ಲಬೇಕು ಎನ್ನುತ್ತಿದ್ದರು. ಈಗ ದೇವರ ಲೆಕ್ಕಾಚಾರ ತಪ್ಪುತ್ತಿದೆ. ಗ್ರಹಚಾರ ಆಟ ಆಡುತ್ತಿದೆ, ಇದಂತೂ ಸತ್ಯ. ಇಂತದ್ದೆಲ್ಲ ನಡೆದಾಗ ನಮಗೆ ನಂಬಿಕೆ ದೂರ ಆಗ್ತಿದೆ. ಇಲ್ಲಿರೋ ಎಲ್ಲರಿಗೂ ಹೇಳೋದಿಷ್ಟೇ, ಇರುವಷ್ಟು ದಿನ ಬದುಕಿ, ನಗಿ, ಚೆನ್ನಾಗಿರಿʼ ಎಂದು ನಟ ಕ್ರೇಜಿಸ್ಟಾರ್ ರವಿಚಂದ್ರನ್ ಭಾವುಕರಾಗಿದ್ದಾರೆ.

ಯೋಗರಾಜ್ ಭಟ್ ಕೂಡ ಮಾತನಾಡಿ, ಯಾವುದೇ ಒಬ್ಬ ಕಲಾವಿದ ಅಕಾಲಿಕವಾಗಿ ನಿಧನರಾದಾಗ ಅವನು ಹೋದ ಎಂದು ಅಂದುಕೊಳ್ಳಬಾರದು. ಅವರ ನೆನಪುಗಳಲ್ಲಿ ಜೀವಂತವಾಗಿರುತ್ತಾರೆ. ರಾಕೇಶ್ ಇಡೀ ನಾಡನ್ನು ಸತತವಾಗಿ ನಗಿಸಿದವನು. ಅದು ಈ ವೇದಿಕೆಯ ಕೂಸು. ಪ್ರಕೃತಿಗೆ ನಾವು ಬೆಲೆ ಕೊಡಬೇಕು. ಪ್ರಕೃತಿ ಇವನನ್ನು ಕರೀತೋ ಅಥವಾ ಇವನು ಸ್ವಲ್ಪ ತಡೀ ಎಂದು ಹೇಳಬಹುದಿತ್ತೋ ಗೊತ್ತಿಲ್ಲ. ಅದನ್ನೂ ರಾಕೇಶ್ ಕಾಮಿಡಿ ತರ ತೆಗೆದುಕೊಂಡುಬಿಟ್ಟನೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹೋಗಿ ಬಾ, ಮತ್ತೆ ಬಾ ಇಷ್ಟೇ ಹೇಳಲು ಸಾಧ್ಯ. ಅವನು ನಮ್ಮ ನಾಡಿನ ಅತ್ಯಂತ ಮುದ್ದಿನ ನಟ. ಅವನ ನೆನೆಪುಗಳಲ್ಲಾದರೂ ಅವನನ್ನ ಸದಾಕಾಲ ಬದುಕಿಸಿಕೊಳ್ಳೋಣ ಎಂದಿದ್ದಾರೆ.
ಕಾಮಿಡಿ ಕಿಲಾಡಿಗಳು ಸೀಸನ್ 3 ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದ್ದ ಹಾಸ್ಯನಟ ರಾಕೇಶ್ ಪೂಜಾರಿ ತಮ್ಮ ಕಾಮಿಡಿಯಿಂದಲೇ ಕರ್ನಾಟಕದ ಮನೆಮಾತಾಗಿದ್ದರು. ಈ ಸೀಸನ್ ಬಳಿಕ ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲೂ ನಟಿಸಿ ಗಮನ ಸೆಳೆದಿದ್ದರು. ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್-1 ಸಿನಿಮಾ ಶೂಟಿಂಗ್‌ನಲ್ಲೂ ಭಾಗವಹಿಸಿದ್ದರು. ಕೈತುಂಬಾ ಅವಕಾಶಗಳು ಅರಸಿ ಬರುತ್ತಿರುವ ಹೊತ್ತಲ್ಲೇ ಅವರು ಇತ್ತೀಚೆಗೆ ಹೃದಯಾಘಾತದಿಂದ ಹಠಾತ್ ಸಾವನ್ನಪ್ಪಿದ್ದರು.
ರಾಕೇಶ್ ಪೂಜಾರಿ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ ಮೇ 11ರಂದು ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ರಾಕೇಶ್ ಪೂಜಾರಿ ಪಾಲ್ಗೊಂಡು ಸಖತ್ ಡ್ಯಾನ್ಸ್ ಕೂಡ ಮಾಡಿದ್ದರು. ಇದಾದ ಮೇಲೆ ರಾಕೇಶ್‌ಗೆ ದಿಢೀರ್ ಸುಸ್ತು ಕಾಣಿಸಿಕೊಂಡಿತ್ತು. ಅವರಿಗೆ ಲೋ ಬಿಪಿ, ಪಲ್ಸ್ ರೇಟ್ ಕೂಡ ಕಡಿಮೆ ಆಗಿತ್ತು. ಕೂಡಲೇ ರಾಕೇಶ್ ಪೂಜಾರಿ ಅವರನ್ನ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ರಾಕೇಶ್ ನಸುಕಿನ ಜಾವದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.












Click it and Unblock the Notifications