Coolie: ಕೂಲಿ ಸಿನಿಮಾ ಸಂಭಾವನೆ: ಅಮೀರ್ ಖಾನ್‌ಗೆ 15 ನಿಮಿಷಕ್ಕೇ ₹20 ಕೋಟಿ, ಉಪ್ಪಿಗೆ ಕೇವಲ ₹4 ಕೋಟಿ!
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ "ಕೂಲಿ" ಸಿನಿಮಾ ರಿಲೀಸ್‌ಗೂ ಮುನ್ನವೇ ಕ್ರೇಜ್ ಹುಟ್ಟಿಸಿದೆ. ಈ ಸಿನಿಮಾ ಆಗಸ್ಟ್ 14ರಂದು ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಹಲವು ಚಿತ್ರರಂಗಗಳ ಬಿಗ್‌ಸ್ಟಾರ್‌ಗಳ ಸಮಾಗಮವೇ ಇದೆ. ಕನ್ನಡದಿಂದ ರಿಯಲ್ ಸ್ಟಾರ್ ಉಪೇಂದ್ರ, ಟಾಲಿವುಡ್‌ನ ಅಕ್ಕಿನೇನಿ ನಾಗಾರ್ಜುನ, ಬಾಲಿವುಡ್‌ನ ಅಮಿರ್‌ಖಾನ್ ಸೇರಿದಂತೆ ದೊಡ್ಡ ಸ್ಟಾರ್‌ಗಳು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ಈ ಎಲ್ಲ ನಟರ ಸಂಭಾವನೆ ರಿವೀಲ್ ಆಗಿದ್ದು, ಕೇವಲ 15 ನಿಮಿಷದ ಸೀನ್‌ಗಳಲ್ಲಿ ಕಾಣಿಸಿಕೊಳ್ಳುವ ಅಮೀರ್ ಖಾನ್‌ಗೂ, ಮುಖ್ಯ ಪಾತ್ರದಲ್ಲಿರುವ ಉಪೇಂದ್ರ ಅವರ ಸಂಭಾವನೆಗೂ ಅಜಗಜಾಂತರ ವ್ಯತ್ಯಾಸ ಇದೆ.
ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಕೂಲಿ' ಬಿಡುಗಡೆಯ ಮುನ್ನವೇ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಪ್ರೀ-ರಿಲೀಸ್ ಮೂಲಕವೇ ದಾಖಲೆಯಷ್ಟು ಲಾಭ ಗಳಿಸಿದೆ. ರಜನಿಕಾಂತ್-ಲೋಕೇಶ್ ಕಾಂಬಿನೇಷನ್ ಹೊಸ ದಾಖಲೆ ಬರೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ಜೋರಾಗಿದೆ. ಚಿತ್ರದ ಲೀಡ್ ಪಾತ್ರವಾದ ನಟ ರಜನಿಕಾಂತ್ ಅವರ ಸಂಭಾವನೆ ಪ್ರಾರಂಭದಲ್ಲಿ ₹150 ಕೋಟಿ ಎಂದು ಹೇಳಲಾಗಿತ್ತು. ಪ್ರೀ-ರಿಲೀಸ್ ಯಶಸ್ಸಿನ ಬಳಿಕ ಇದು ₹200 ಕೋಟಿಗೆ ಏರಿದೆ ಎಂದು ವರದಿಯಾಗಿದೆ.

ಭಾರೀ ಸ್ಟಾರ್ ಕಾಸ್ಟ್, ಹೈ ಆಕ್ಷನ್ ದೃಶ್ಯಗಳು ಹಾಗೂ ದೊಡ್ಡ ಮಟ್ಟದ ನಿರ್ಮಾಣದಿಂದ 'ಕೂಲಿ' ಈ ವರ್ಷದ ಅತಿ ದೊಡ್ಡ ಸಿನಿಮಾ ಆಗುವ ನಿರೀಕ್ಷೆಯಲ್ಲಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಕನ್ನಡ ಪ್ರೇಕ್ಷಕರಿಗೂ ವಿಶೇಷ ಸಿನಿಮಾವಾಗಲಿದೆ. ಇದಕ್ಕೆ ಕಾರಣ ಕನ್ನಡದ ಕಲಾವಿದರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿರುವುದು. ರಜನಿಕಾಂತ್ ಕೂಡ ಮೂಲತಃ ಕನ್ನಡಿಗರು, ಇದಲ್ಲದೆ ನಟ, ನಿರ್ದೇಶಕ ಉಪೇಂದ್ರ, ನಟಿ ರಚಿತಾ ರಾಮ್ ಕೂಡ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈಗ ಗಮನ ಸೆಳೆಯುತ್ತಿರುವುದು ಇವರ ಸಂಭಾವನೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ರಜನಿಕಾಂತ್ ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 250 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ಹಿಂದೆ ಆಮಿರ್ ಖಾನ್ ಈ ಚಿತ್ರದಲ್ಲಿ ಕೇವಲ 15 ನಿಮಿಷ್ ಕಾಣಿಸಿಕೊಂಡಿದ್ದಕ್ಕಾಗಿ 20 ಕೋಟಿ ರೂಪಾಯಿ ಚೆಕ್ ಪಡೆದಿದ್ದಾರೆ ಎಂದು ವರದಿಗಳಿವೆ. ಆದರೆ ಅವರ ಆಪ್ತ ಮೂಲಗಳ ಪ್ರಕಾರ ತಮ್ಮ ಪಾತ್ರಕ್ಕೆ ಹಣ ಪಡೆದಿಲ್ಲ ಎನ್ನುವ ಮಾತೂ ಇದೆ.
ಕೂಲಿ ಚಿತ್ರದಲ್ಲಿ ಸೈಮನ್ ಪಾತ್ರದಲ್ಲಿರುವ ನಾಗಾರ್ಜುನ ಅಕ್ಕಿನೇನಿ ಆ ಚಿತ್ರದ ಅಭಿನಯಕ್ಕಾಗಿ 10 ಕೋಟಿ ಪಡೆದಿದ್ದಾರೆ. ನಟಿ ಶ್ರುತಿ ಹಾಸನ್ ಸಂಭಾವನೆ 4 ಕೋಟಿ ರೂ, ನಟ ಸತ್ಯರಾಜ್ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರೆ, ಕನ್ನಡದ ಸ್ಟಾರ್ ನಟ ಉಪೇಂದ್ರ ಅವರಿಗೂ ಕೇವಲ 4 ಕೋಟಿ ರೂ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.
ಉಳಿದ ಕಲಾವಿದರ ಸಂಭಾವನೆ ಎಷ್ಟು?
ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರಾದ ಲೋಕೇಶ್ ಕನಗರಾಜ್, ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗಿನ ಅವರ ಮೊದಲ ಸಹಯೋಗದ ಕೂಲಿ ಚಿತ್ರಕ್ಕಾಗಿ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಜೈಲರ್ ನಂತರ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಕೂಲಿಯಲ್ಲಿ ಮತ್ತೆ ರಜನಿಕಾಂತ್ ಜೊತೆ ಕೈಜೋಡಿಸಿದ್ದು, ಇವರ ಸಂಭಾವನೆ 15 ಕೋಟಿ ಎಂದು ತಿಳಿದುಬಂದಿದೆ. ಇನ್ನು ಮೋನಿಕಾ ಹಾಡಿನಲ್ಲಿ ಸೊಂಟ ಬಳುಕಿಸುವ ಮೂಲಕ ಕನ್ನಡದ ಪೂಜಾ ಹೆಗ್ಡೆ ಅವರ ಅಭಿನಯಕ್ಕಾಗಿ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.












Click it and Unblock the Notifications