ಶಿವಣ್ಣನಿಗಿಂತ ದರ್ಶನ್ ಪರವಾಗಿಲ್ಲ: ಕಾಂಗ್ರೆಸ್ ಶಾಸಕ ಹೀಗಂದಿದ್ದೇಕೆ?
ಕಾಂಗ್ರೆಸ್ ಶಾಸಕ ರವಿ ಗಣಿಗ ಅವರು ಸ್ಯಾಂಡಲ್‌ವುಡ್ ನಟ-ನಟಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡದಿಂದ ಅನ್ನ ತಿಂದವರು ಕನ್ನಡಕ್ಕೆ ಧಕ್ಕೆಯಾದಾಗಲೂ ಬೇರೆಯವರಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ಮೊದಲು ಇದನ್ನ ಬಿಡಬೇಕು ಎಂದು ಗರಂ ಆಗಿದ್ದಾರೆ. ಇನ್ನು ಈಗಿನ ನಟರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗಣಿಗ, ನಟ ಶಿವರಾಜ್‌ಕುಮಾರ್ ಅವರಿಗಿಂತ ನಟ ದರ್ಶನ್ ತೂಗುದೀಪ ಅವರೇ ಎಷ್ಟೋ ಪರವಾಗಿಲ್ಲ ಎಂದು ಶಾಕಿಂಗ್ ವಿಚಾರವೊಂದನ್ನು ತಿಳಿಸಿದ್ದಾರೆ.
ಕನ್ನಡದ ವಿಚಾರವಾಗಿ ತಮಿಳು ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕಮಲ್ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದರೆ, ನಟ ಮಾತ್ರ ನನ್ನ ತಪ್ಪಿಲ್ಲ, ನಾನು ಹೇಳಿದ್ದು ಸರಿ, ಯಾವ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಮೊಂಡುವಾದ ಮುಂದುವರಿಸಿದ್ದಾರೆ. ಇನ್ನೊಂದೆಡೆ ಕಮಲ್ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಲು ಬಿಡೋದಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ ಯಾವ ಬೆದರಿಕೆಗಳಿಗೂ ಜಗ್ಗಲ್ಲ ಎಂದು ಕಮಲ್ ನೇರವಾಗಿ ಡೋಂಟ್ ಕೇರ್ ಎಂದಿದ್ದಾರೆ.

ಕಮಲ್ ಹಾಸನ್ ಅವರು ಕನ್ನಡದ ವಿಚಾರದಲ್ಲಿ ಕೀಳಾಗಿ ಮಾತನಾಡಿದಾಗಲೂ ಅಲ್ಲೇ ಇದ್ದ ಕನ್ನಡದ ನಟ ಶಿವರಾಜ್‌ಕುಮಾರ್ ಅವರು ಒಂದೂ ಮಾತಾಡಿಲ್ಲ, ಅದನ್ನು ಅಲ್ಲೇ ವಿರೋಧ ಮಾಡಬೇಕಿತ್ತು. ಅದನ್ನು ಬಿಟ್ಟು ಕಮಲ್ ಅವರ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ್ದಾರೆ ಎಂದೂ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಶಾಸಕ ರವಿ ಗಣಿಗ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಕಮಲ್ ಹಾಸನ್ ದುರಹಂಕಾರದಿಂದಲೇ ಈ ಮಾತು ಹೇಳಿದ್ದಾರೆ. ಮಾತನಾಡುವಾಗ ನಾಲಿಗೆ ಬಿಗಿ ಹಿಡಿಯಬೇಕು. ಮತ್ತೊಂದು ಬೇಜಾರಿನ ವಿಚಾರ ಅಂದ್ರೆ ಶಿವರಾಜ್‌ಕುಮಾರ್ ಅವರು ಅದೇ ವೇದಿಕೆಯಲ್ಲಿದ್ದಿದ್ದೂ ಅಲ್ಲದೆ, ಇನ್ನೂ ಅವರನ್ನ ರಕ್ಷಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ಜೊತೆ ಸ್ನೇಹ ಇದ್ರೆ ನಿಮ್ಮ ಮನೆಗೆ ಕರೆಸಿಕೊಂಡು ಊಟ ಹಾಕಿ. ಆದರೆ ಕನ್ನಡದ ಅನ್ನ ತಿನ್ನುತ್ತಿರುವ ನಟ ನೀವು, ಆದರೂ ಕನ್ನಡದ ಬಗ್ಗೆ ದುರಹಂಕಾರದ ಮಾತಾಡಿದಾಗ ಅವರನ್ನೇ ಅಪ್ಪಿಕೊಳ್ಳುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅವಮಾನ ಎಂದು ದೂರಿದ್ದಾರೆ.
ಸುಮ್ಮನೆ ನಾನು ಕನ್ನಡಕ್ಕಾಗಿ ಸಾಯ್ತೀನಿ, ಕನ್ನಡವನ್ನ ಪ್ರೀತಿಸ್ತೀನಿ ಅನ್ನೋ ಹೇಳಿಕೆ ನೀಡಿದ್ದೀರಿ. ಆದರೆ ಕನ್ನಡದ ತಾಯಿಗೆ ತಮಿಳುನಾಡಿನಲ್ಲಿ ಅವಮಾನ ಆದಾಗ ನೀವು ಸುಮ್ಮನೆ ಕುಳಿತು, ಈಗಲೂ ಅವರನ್ನೇ ರಕ್ಷಣೆ ಮಾಡುತ್ತಿರುವುದು ಒಪ್ಪುವಂತದ್ದಲ್ಲ. ಕಮಲ್ ಈ ಕೂಡಲೇ ಕ್ಷಮೆ ಕೇಳದಿದ್ರೆ ಅವರ ಥಗ್ ಲೈಫ್ ಸಿನಿಮಾ ರಿಲೀಸ್ ಆಗೋಕೆ ಬಿಡಲ್ಲ, ಫಿಲ್ಮ್ ಚೇಂಬರ್ ಕೂಡ ಕಮಲ್ ಹಾಸನ್‌ಗೆ ಬೆಣ್ಣೆ ಹಚ್ಚುವ ಕೆಲಸ ಮಾಡದೆ ಕೂಡಲೆ ಕಮಲ್ ಅವರನ್ನ ಬ್ಯಾನ್ ಮಾಡುವ ಆದೇಶ ಹೊರಡಿಸಿ ಎಂದಿದ್ದಾರೆ.
ಶಿವರಾಜ್‌ಕುಮಾರ್ ಹಾಗೂ ರಮ್ಯಾ ಅವರ ಮನಸಲ್ಲಿ ಏನಿದೆಯೋ ಗೊತ್ತಿಲ್ಲ, ಕರ್ನಾಟಕದ ಅನ್ನ ತಿನ್ನುವವರು ಕನ್ನಡದ ಬಗ್ಗೆ ಅನ್ಯಾಯವಾದಾಗ ಮಾತನಾಡಬೇಕು. ಈ ವಿಚಾರದಲ್ಲಿ ನಟ ದರ್ಶನ್ ಅದೆಷ್ಟೋ ಪರವಾಗಿಲ್ಲ. ಕನ್ನಡಿಗರು ಎಲ್ಲರೂ ಒಂದಾಗಬೇಕು ಎಂದಿದ್ದಾರೆ. ಫಿಲ್ಮ್ ಚೇಂಬರ್ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ರೆ ಸರ್ಕಾರದಿಂದಲೇ ಅವರ ಸಿನಿಮಾ ಬ್ಯಾನ್ ಮಾಡಿಸ್ತೀವಿ ಎಂದು ರವಿ ಗಣಿಗ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications