Rachita Ram: ರಚಿತಾ ರಾಮ್ ಮೇಲೂ ಕೇಸ್ ಹಾಕ್ತೀವಿ: ಡಿಂಪಲ್ ಕ್ವೀನ್ ಮೇಲಿನ ಆರೋಪವೇನು?
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯ ಕಲಾವಿದರಿಗೆ ಅದೇನೋ ಗ್ರಹಚಾರವೇ ಸರಿ ಇಲ್ಲ. ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಜೈಲು ದರ್ಶನ ಮಾಡಿದರು. ಇದೀಗ ಬಿಗ್‌ಬಾಸ್ ಸ್ಪರ್ಧಿಗಳು ಕೂಡ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರು ಮಚ್ಚು ತೋರಿಸಿ ಪೊಲೀಸರ ಕೈಗೆ ಲಾಕ್ ಆದರೆ, ರಕ್ಷಕ್ ಬುಲೆಟ್ ಮೇಲೆ ಕೂಡ ಗಂಭೀರ ಆರೋಪ ಕೇಳಿಬಂದಿದೆ. ಹಿಂದೂ ಕಾರ್ಯಕರ್ತರು ರಕ್ಷಕ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಈಗ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ವಿರುದ್ಧವೂ ದೂರು ದಾಖಲಾಗಲಿದೆ. ಇಷ್ಟಕ್ಕೂ ರಚಿತಾ ರಾಮ್ ಕೇಳಿಬಂದಿರುವ ಆರೋಪವೇನು ಗೊತ್ತಾ?
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್ ಅವರು ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಮಿಂಚುತ್ತಿದ್ದಾರೆ. ಈಗ ಇದೇ ಇವರ ಪಾಲಿಗೆ ಕಂಟಕ ತಂದಿಟ್ಟಿದೆ. ಹೌದು ಡಿಂಪಲ್ ವಿರುದ್ಧ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ರಚಿತಾ ರಾಮ್ ಬಗ್ಗೆ ಗಂಭೀರ ಆರೋಪ ಮಾಡಿರುವ ಹಿಂದೂ ಮಖಂಡರು ಅವರ ಮೇಲೂ ದೂರು ಕೊಡುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಕ್ಷಕ್ ಮಾಡಿರುವ ಎಡವಟ್ಟಿಗೆ ಇದೀಗ ರಚಿತಾ ರಾಮ್ ಕೂಡ ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದೆ.

ಕನ್ನಡದ ಖ್ಯಾತ ರಿಯಾಲಿಟಿ ಶೋನಲ್ಲಿ ರಕ್ಷಕ್ ಅವರು ಮೈಸೂರಿನ ತಾಯಿ ಚಾಮುಂಡೇಶ್ವರಿ ಬಗ್ಗೆ ಅವಹೇಳನಕಾರಿ ಡೈಲಾಗ್ ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ದರ್ಶನ್ ಅವರಂತೆ ಬುಲ್ ಬುಲ್ ಸಿನಿಮಾದ ಡೈಲಾಗ್ ಹೊಡೆದಿರುವ ರಕ್ಷಕ್, ತನ್ನ ಸಹಸ್ಪರ್ಧಿಯನ್ನು ಅಟ್ಟಕ್ಕೇರಿಸುವ ಭರದಲ್ಲಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎಂದು ಹಿಂದೂ ಮುಖಂಡರು ಆರೋಪ ಮಾಡಿದ್ದಾರೆ.
"ನಿಮ್ಮನ್ನು ನೋಡ್ತಿದ್ರೆ, ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟು ಶರ್ಟು ಹಾಕ್ಕೊಂಡು ಸ್ವಿಟ್ಜರ್ಲೆಂಡ್‌ನಲ್ಲಿ ಟ್ರಿಪ್ ಹೊಡೆದಂತೆ ಅನಿಸುತ್ತಿದೆ ಎಂದು ರಕ್ಷಕ್ ಡೈಲಾಗ್ ಹೊಡೆದಿದ್ದರು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲೂ ಖಂಡನೆ ವ್ಯಕ್ತವಾಗಿದೆ. ಬಳಿಕ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಅಲ್ಲದೆ ರಕ್ಷಕ್ ಕೂಡಲೇ ಕ್ಷಮೆ ಕೇಳದಿದ್ದರೆ, ಮಸಿ ಹಾಕ್ತೀವಿ ಎಂದೂ ವಾರ್ನಿಂಗ್ ಕೊಟ್ಟಿದ್ದಾರೆ.

ಇದು ರಕ್ಷಕ್ ಕಥೆಯಾದ್ರೆ, ಈ ರಿಯಾಲಿಟಿ ಶೋ ಜಡ್ಜ್ ಆಗಿದ್ದ ರಚಿತಾ ರಾಮ್ ಅವರಿಗೂ ಇದೀಗ ಆಪತ್ತು ಎದುರಾಗಿದೆ. ರಚಿತಾ ರಾಮ್ ಅವರು ಹಲವು ಬಾರಿ ತಾನು ಚಾಮುಂಡಿ ತಾಯಿಯ ಪರಮಭಕ್ತೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರಿದ್ದ ವೇದಿಕೆಯಲ್ಲೇ ಚಾಮುಂಡಿದೇವಿಗೆ ಅವಮಾನವಾಗುವಂತೆ ರಕ್ಷಕ್ ಮಾತನಾಡಿದರೂ ಅವರು ಖಂಡಿಸಲಿಲ್ಲ. ಇದನ್ನು ನೋಡಿದರೆ ರಕ್ಷಕ್ ಅವರಿಗೆ ರಚಿತಾ ಅವರೂ ಉತ್ತೇಜನ ನೀಡಿದ್ದಾರೆ. ರಕ್ಷಕ್ ಈ ಡೈಲಾಗ್ ಕೇಳಿ ರಚಿತಾ ರಾಮ್ ಕೂಡ ನಕ್ಕಿದ್ದಾರೆ. ಭಕ್ತಿ ಕೇವಲ ಬಾಯಿ ಮಾತಿಗೆ ಮಾತ್ರ ಸೀಮಿತವಾಗಿದೆ. ಅವರು ಅಲ್ಲೇ ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಅವರ ಭಕ್ತಿಯನ್ನ ಒಪ್ಪಿಕೊಳ್ಳುತ್ತಿದ್ವಿ. ಆದರೆ ಅವರು ಆ ಕೆಲಸ ಮಾಡಲಿಲ್ಲ. ಹಾಗಾಗಿ ರಚಿತಾ ರಾಮ್ ಅವರ ಮೇಲೂ ದೂರು ಕೊಡಲು ನಿರ್ಧರಿಸಿದ್ದೇವೆ ಎಂದು ಹಿಂದೂ ಮುಖಂಡ ತೇಜಸ್ ಹೇಳಿದ್ದಾರೆ.












Click it and Unblock the Notifications