Chaitra Vasudevan: ಮದುವೆಯಾಗುವ ಹುಡುಗನ ಫೋಟೊ ಹಂಚಿಕೊಂಡ ಚೈತ್ರಾ ವಾಸುದೇವನ್
ಬಿಗ್ ಬಾಸ್ ಮಾಜಿ ಸ್ಪರ್ಧಿ, ಆಂಕರ್ ಚೈತ್ರಾ ವಾಸುದೇವನ್ ಮದುವೆಯ ತಯಾರಿಯಲ್ಲಿದ್ದಾರೆ. ಲಂಡನ್‌ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ನಡೆಸಿದ್ದ ಅವರು, ಮಾರ್ಚ್‌ನಲ್ಲಿ ಮದುವೆಯಾಗುತ್ತಿರುವುದಾಗಿ ಮಾಹಿತಿ ನೀಡಿದ್ದರು. ಆದರೆ ಹುಡುಗ ಯಾರು ಎನ್ನುವ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಆದರೆ ಶನಿವಾರ ಅವರು ತಾವು ಮದುವೆಯಾಗುವ ಹುಡುಗನ ಜೊತೆ ಫೋಟೊ ಹಂಚಿಕೊಂಡಿದ್ದಾರೆ.
ಮದುವೆಯಾಗುತ್ತಿರುವ ಹುಡುಗನ ಜೊತೆ ಫೋಟೊ ಹಂಚಿಕೊಂಡಿರುವ ಅವರು, ಪ್ರೀತಿಯಿಂದಲೇ ತುಂಬಿರುವ ಹೊಸ ಬದುಕಿಗೆ ಕಾಲಿಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿರುವ ಫೊಟೊಗೆ 20 ಸಾವಿರಕ್ಕೂ ಹೆಚ್ಚು ಮೆಚ್ಚುಗೆಗಳು ಬಂದಿದ್ದು ನೂರಾರು ಅಭಿಮಾನಿಗಳು, ಸ್ನೇಹಿತರು ಶುಭ ಹಾರೈಸಿದ್ದಾರೆ.

ಚೈತ್ರಾ ವಾಸುದೇವನ್ ಮದುವೆಯಾಗುತ್ತಿರುವ ಹುಡುಗನ ಹೆಸರು ಜಗದೀಪ್, ಇದನ್ನು ಹೊರತುಪಡಿಸಿ ಅವರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಅವರು ಸೋಷಿಯಲ್ ಮೀಡಿಯಾದಲ್ಲಿ ಅಕೌಂಟ್ ಹೊಂದಿದ್ದರು ತಮ್ಮ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಜಗದೀಪ್ ಅವರು ಆರ್ ಸಿಬಿ ಜೆರ್ಸಿ ತೊಟ್ಟಿರುವ ಫೋಟೊ ಹಾಕಿಕೊಂಡಿದ್ದು ಅವರು ಆರ್ ಸಿಬಿ ಅಭಿಮಾನಿ ಎನ್ನುವುದು ಮಾತ್ರ ಗೊತ್ತಾಗಿದೆ.
ಎರಡನೇ ಮದುವೆಗೆ ಸಜ್ಜಾದ ಚೈತ್ರಾ ವಾಸುದೇವನ್
ಪದವಿ ಮುಗಿಯುತ್ತಿದ್ದಂತೆ ಮನೆಯಲ್ಲಿ ತೋರಿಸಿದ ಹುಡುಗನನ್ನು ಮದುವೆಯಾಗಿದ್ದು ಚೈತ್ರಾ ವಾಸುದೇವನ್ ಬಳಿಕ ಮಾನಸಿಕ ಹಿಂಸೆ ಅನುಭವಿಸಿದ್ದರು. ಐದು ವರ್ಷ ಮೊದಲನೇ ಪತಿ ಜೊತೆ ಸಂಸಾರ ನಡೆಸಿದ್ದ ಅವರು, ವಿಚ್ಛೇದನ ಪಡೆದಿದ್ದರು. ಆದರೆ ಅಷ್ಟಕ್ಕೆ ಕುಗ್ಗದೆ ಆತ್ಮವಿಶ್ವಾಸದಿಂದ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಹಲವು ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ತಮ್ಮದೇ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಕೂಡ ಆರಂಭಿಸಿದ್ದು ಲಕ್ಷಾಂತರ ರೂಪಾಯಿ ದುಡಿಯುವ ಜೊತೆಗೆ ಅನೇಕರಿಗೆ ಕೆಲಸ ಕೂಡ ಕೊಟ್ಟಿದ್ದಾರೆ.
ಚೈತ್ರಾ ವಾಸುದೇವನ್‌ಗೆ ಇನ್ನೊಂದು ಮದುವೆಯಾಗುವಂತೆ ಚಿತ್ರರಂಗದ ಅನೇಕ ಹಿರಿಯರು ಸಲಹೆ ಕೊಟ್ಟಿದ್ದರು. ಆದರೂ ತಮ್ಮ ಬದುಕನ್ನು ಒಂದು ಹಂತಕ್ಕೆ ತರಲು ಕಷ್ಟ ಪಟ್ಟ ಅವರು ಈಗ ಮದುವೆಗೆ ಓಕೆ ಅಂದಿದ್ದಾರೆ. ಅದರಂತೆ ಜಗದೀಪ್‌ರನ್ನು ವರಿಸಲು ಸಜ್ಜಾಗಿದ್ದಾರೆ.
ಈಗಾಗಲೇ ಈ ಜೋಡಿ ಪ್ಯಾರಿಸ್‌ನಲ್ಲಿ ಅದ್ದೂರಿ ಫೋಟೊ ಶೂಟ್ ಮಾಡಿಸಿದೆ. ಮಾರ್ಚ್‌ನಲ್ಲಿ ಮದುವೆ ನಡೆಯಲಿದ್ದು ದಿನಾಂಕವನ್ನು ಇನ್ನೂ ತಿಳಿಸಿಲ್ಲ. ಎಲ್ಲವನ್ನೂ ಮರೆತು ಹೊಸ ಜೀವನ ಆರಂಭಿಸಲು ತಯಾರಿ ಮಾಡಿಕೊಳ್ಳುತ್ತಿರುವ ಚೈತ್ರಾ ವಾಸುದೇವನ್ ಅವರಿಗೆ ಅಭಿಮಾನಿಗಳು, ಹಿತೈಷಿಗಳು ಶುಭ ಕೋರಿದ್ದಾರೆ.












Click it and Unblock the Notifications