Bigg Boss: ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಹೋಗಿದ್ದಕ್ಕೆ ಬಿಜೆಪಿ ಹೇಳಿದ್ದೇನು?
ಬಿಗ್‌ಬಾಸ್ ಸೀಸನ್-10 ನಿನ್ನೆಯಿಂದ ಅದ್ಧೂರಿಯಾಗಿ ಆರಂಭವಾಗಿದ್ದು, ಹಾಗೇ ಸ್ಪರ್ಧಿಗಳ ನಿಜಮುಖ ಹೊರಗೆ ಬರುವ ಕ್ಷಣ ಶುರುವಾಗಿದೆ. ಈ ಸಮಯದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಆಯೋಜಕರು ಸರ್ಪ್ರೈಸ್ ಕೊಟ್ಟಿದ್ದಾರೆ. ಇದ್ದಕ್ಕಿದ್ದಂತೆ ಶಾಸಕ ಪ್ರದೀಪ್ ಈಶ್ವರ್ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ವಿಚಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಮಾಡಿದೆ. ಅಲ್ಲದೆ ಈ ಬಗ್ಗೆ ಕರ್ನಾಟಕ ಬಿಜೆಪಿ ಕೂಡ ಖಡಕ್ ರಿಯಾಕ್ಷನ್ ಕೊಟ್ಟಿದೆ.
ಮೊದಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಗ್ಯಾರಂಟಿ ವಿಚಾರಕ್ಕೆ ವಾರ್ ನಡೆಯುತ್ತಿದ್ದು, ಈ ಮಧ್ಯೆ ಶಿವಮೊಗ್ಗ ಘಟನೆ ಕೂಡ ಕಿಚ್ಚು ಹೊತ್ತಿಸಿತ್ತು. ಇಷ್ಟು ಸಾಲದು ಎಂಬಂತೆ ಈಗ ಹೊಸ ಅಸ್ತ್ರವೂ ಸಿಕ್ಕಿದೆ. ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಹೋಗಿರುವ ವಿಚಾರವನ್ನೇ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದೆ. ಪ್ರದೀಪ್ ಈಶ್ವರ್ ಸ್ವಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲಿ ಈ ಬಗ್ಗೆ ಪರ, ವಿರೋಧದ ಮಾತು ಕೇಳಿಬರುತ್ತಿದೆ. ಅಲ್ಲದೆ ರಾಜ್ಯದ ಹಲವೆಡೆ ಈ ಬಗ್ಗೆ ರಿಯಾಕ್ಷನ್ ಬರುತ್ತಿರುವ ಸಮಯಕ್ಕೆ ಬಿಜೆಪಿ ಕೂಡ ಪ್ರತಿಕ್ರಿಯೆ ನೀಡಿದೆ.

'ಅಭಿವೃದ್ಧಿ ನಿಂತು ವಿಧಾನಸೌಧವೇ ಮನರಂಜನೆಗಷ್ಟೇ...'
ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಹೋಗಿರುವ ಬಗ್ಗೆ ಬಿಜೆಪಿ ಈ ರೀತಿ ಪ್ರತಿಕ್ರಿಯೆ ನೀಡಿದ್ದು, 'ರಾಜ್ಯದ ಅಭಿವೃದ್ಧಿ ಸಂಪೂರ್ಣ ನಿಂತು ವಿಧಾನಸೌಧವೇ ಮನರಂಜನೆಗಷ್ಟೇ ಮೀಸಲಾದ ಬಿಗ್ ಬಾಸ್ ಮನೆಯಂತಾಗಿದೆ. ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಸಲುವಾಗಿ ಈಗ @siddaramaiah ಅವರು ಅವರ ಸಂಪುಟ ಸಹೋದ್ಯೋಗಿಗಳನ್ನು ಬಿಗ್ ಬಾಸ್ ಮನೆಗೇ ಕಳಿಸಿಕೊಟ್ಟು ಕೃತಾರ್ಥರಾಗಿದ್ದಾರೆ.' ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಇದೀಗ ವಾಗ್ದಾಳಿ ನಡೆಸಿದೆ ರಾಜ್ಯ ಬಿಜೆಪಿ ಘಟಕ. ಈಗಾಗಲೇ ಗ್ಯಾರಂಟಿಗಳ ವಿಚಾರದಲ್ಲಿ ವಾರ್ ಮಾಡ್ತಿದ್ದ ಬಿಜೆಪಿಗೆ, ಈ ಮೂಲಕ ಕಾಂಗ್ರೆಸ್ ವಿರುದ್ಧ ಹೊಸ ಅಸ್ತ್ರ ಸಿಕ್ಕಂತಾಗಿದೆ.
ರಾಜ್ಯದ ಅಭಿವೃದ್ಧಿ ಸಂಪೂರ್ಣ ನಿಂತು ವಿಧಾನಸೌಧವೇ ಮನರಂಜನೆಗಷ್ಟೇ ಮೀಸಲಾದ ಬಿಗ್ ಬಾಸ್ ಮನೆಯಂತಾಗಿದೆ.
— BJP Karnataka (@BJP4Karnataka) October 9, 2023
ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಸಲುವಾಗಿ ಈಗ @siddaramaiah ಅವರು ಅವರ ಸಂಪುಟ ಸಹೋದ್ಯೋಗಿಗಳನ್ನು ಬಿಗ್ ಬಾಸ್ ಮನೆಗೇ ಕಳಿಸಿಕೊಟ್ಟು ಕೃತಾರ್ಥರಾಗಿದ್ದಾರೆ. https://t.co/L21s2rsK4S
ಮಾಜಿ ಸಚಿವ ಸುಧಾಕರ್ ಹೇಳಿದ್ದೇನು?
ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಹೋಗಿರುವ ಬಗ್ಗೆ ಮಾಜಿ ಸಚಿವ ಸುಧಾಕರ್ ಕೂಡ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಬರ ಸ್ಥಿತಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ರಾಜಕಾರಣಿಗೆ ಈ ಶೋ ಬೇಕಿತ್ತಾ ಎಂದು ಮಾಜಿ ಸಚಿವ ಡಾ. ಕೆ. ಸುಧಾಕರ್ ಕಿಡಿಕಾರಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸುಧಾಕರ್, ಒಬ್ಬ ರಾಜಕಾರಣಿ ಈ ರೀತಿ ಶೋಗೆ ಹೋಗಿದ್ದು ಇದೇ ಮೊದ್ಲು. ಬಿಗ್ ಬಾಸ್‌ಗೆ ಹೋಗುವ ಮೂಲಕ ನಗೆಪಾಟಲಿಗೆ ಅವರು ಈಡಾಗಿದ್ದಾರೆ ಎಂದು ಕುಟುಕಿದ್ದಾರೆ.
ಅಲ್ಲದೆ, ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್‌ಗೆ ಹೋಗಿದ್ದು ನಾಚಿಕೆಗೇಡಿನ ಸಂಗತಿ. ಬಿಗ್ ಬಾಸ್‌ನಲ್ಲಿ ಭಾಗಿಯಾಗುವ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾನ ಮರ್ಯಾದೆ ಕಳೆದಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರನ್ನೂ ಹಾಳು ಮಾಡಿದ್ದಾರೆ. ಜನರಿಗೆ ನಾವು ತಪ್ಪು ಮಾಡಿದ್ದೇವೆ ಎಂದು ಅರಿವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಟ್ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಹೋದ ವಿಚಾರ ಇದೀಗ ಸಂಚಲನ ಸೃಷ್ಟಿಮಾಡಿದೆ. ಅಲ್ಲದೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಕಿತ್ತಾಟಕ್ಕೂ ಇದು ದಾರಿ ಮಾಡಿಕೊಟ್ಟಿದೆ. ಆದರೆ ಕಾಂಗ್ರೆಸ್ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಆರೋಪಗಳಿಗೆ ಕಾಂಗ್ರೆಸ್ ನಾಯಕರು ಯಾವ ರೀತಿ ಉತ್ತರ ನೀಡುತ್ತಾರೆ? ಅಂತಾ ಕಾದು ನೋಡಬೇಕಿದೆ. ಬಿಬಿಎಂಪಿ ಹಾಗೂ ಲೋಕಸಭೆ ಚುನಾವಣೆ ಹೊತ್ತಲ್ಲೇ ಕಿತ್ತಾಟವು ಮತ್ತಷ್ಟು ಜೋರಾಗುವ ಸಾಧ್ಯತೆ ದಟ್ಟವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಟಾಕ್ ವಾರ್ ಗ್ಯಾರಂಟಿ.











Click it and Unblock the Notifications