ಒಂದು ದಿನ..ಒಂದು ವಾರ..ಫಿನಾಲೆಗೆ ಕರೆದರೂ ಬಿಗ್ ಬಾಸ್‌ಗೆ ಬರುತ್ತೇನೆ: ಹುಚ್ಚ ವೆಂಕಟ್ ಮನವಿ
ಬಿಗ್ ಬಾಸ್ ಕನ್ನಡ ಸೀಸನ್ 10 ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಈ ಬಿಗ್ ಹಿಟ್ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 11ರನ್ನು ಕೂಡ ದೊಡ್ಡ ಮಟ್ಟದಲ್ಲಿ ಜನರ ಮುಂದೆ ತರಲು ಬಿಗ್ ಬಾಸ್ ತಂಡ ಪ್ಲ್ಯಾನ್ ಮಾಡುತ್ತಿದೆ. ಇದೀಗ ಹೊಸ ಸೀಸನ್ ಆಗಮನಕ್ಕೆ ಕೌಂಟ್‌ಡೌನ್ ಶುರುವಾಗಿದ್ದು ಬಿಗ್ ಬಾಸ್ ಕನ್ನಡ ಸೀಸನ್ 11 ಸೆಪ್ಟೆಂಬರ್ 29ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದೆ.
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸಿದ್ಧತೆಗಳು ಜೋರಾಗಿದ್ದು, ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಗಮನ ಸೆಳೆಯುತ್ತಿದೆ. ನೋಡುಗರ ಕುತೂಹಲ ಹೆಚ್ಚಿಸಿರುವ ಈ ಬಾರಿಯ ಬಿಗ್ ಬಾಸ್‌ನಲ್ಲಿ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಲು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ತಂಡಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಈ ಸಾಲಿಗೆ ನಟ ಹುಚ್ಚ ವೆಂಕಟ್ ಕೂಡ ಸೇರಿಕೊಂಡಿದ್ದಾರೆ.

ಮಾಜಿ ಬಿಗ್ ಬಾಸ್ ಸ್ಪರ್ಧಿಯಾಗಿರುವ ಹುಚ್ಚ ವೆಂಕಟ್ ಎರಡು ಸೀಸನ್‌ನಲ್ಲಿ ಬಿಗ್ ಬಾಸ್ ಮನೆಯೊಳೆಗೆ ಪ್ರವೇಶಿಸಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ಮೂರನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದ ಹುಚ್ಚ ವೆಂಕಟ್, ಕಿಚ್ಚ ಸುದೀಪ್ ಎದುರಲ್ಲೇ ರವಿ ಮೂರೂರ್ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಬಂದಿದ್ದರು. ಬಳಿಕ ಬಿಗ್ ಬಾಸ್‌ನ ನಾಲ್ಕನೇ ಸೀಸನ್‌ನಲ್ಲಿ ಕೂಡ ಪ್ರವೇಶ ಪಡೆದಿದ್ದ ಹುಚ್ಚ ವೆಂಕಟ್, ನಟ ಪ್ರಥಮ್ ಅವರ ಮೇಲೆ ಹಲ್ಲೆ ನಡೆಸಿ ಹೊರ ಬಂದಿದ್ದರು.
ಈ ಎಲ್ಲಾ ಗಲಾಟೆಗಳನ್ನು ಮಾಡಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಹುಚ್ಚ ವೆಂಕಟ್ ಮತ್ತೆ ಬಿಗ್ ಬಾಸ್‌ಗೆ ಹೋಗುವ ಆಸೆ ಹೊರಹಾಕಿದ್ದಾರೆ. ವಿಡಿಯೋ ಮೂಲಕ ಕಲರ್ಸ್ ಕನ್ನಡ ಹಾಗೂ ಕಿಚ್ಚ ಸುದೀಪ್‌ಗೆ ಮನವಿ ಮಾಡಿಕೊಂಡಿರುವ ಹುಚ್ಚ ವೆಂಕಟ್, 'ಬಿಗ್ ಬಾಸ್‌ಗೆ ಮತ್ತೆ ಬರಲು ಒಂದು ಅವಕಾಶ ಕೊಡಿ. ಖಂಡಿತ ನಾನು ಅದನ್ನು ಉಳಿಸಿಕೊಳ್ಳುತ್ತೇನೆ. ನಾನು ಯಾವುದೇ ತರ ಗಲಾಟೆಗಳನ್ನು ಮಾಡುವುದಿಲ್ಲ. ನಾನು ಎಲ್ಲಾ ಟಾಸ್ಕ್‌ಗಳನ್ನು ಮಾಡುತ್ತೇನೆ. ನನಗೆ ಒಂದು ಅವಕಾಶ ಕೊಡಿ' ಎಂದು ಮನವಿ ಮಾಡಿದ್ದಾರೆ.
'ಒಂದು ದಿನಕ್ಕೆ ಕರೆದರೂ ಬರುತ್ತೇನೆ. ಒಂದು ವಾರಕ್ಕೆ ಕರೆದರೂ ಬರುತ್ತೇನೆ. ಅಥವಾ ಫುಲ್ ಇರೋದಕ್ಕೆ ಕರೆದರೂ ಕೂಡ ನಾನು ಬರುತ್ತೇನೆ. ಅಥವಾ ಫಿನಾಲೆಗೆ ಕರೆದರೂ ಬರುತ್ತೇನೆ. ಒಟ್ಟಾರೆ ನನ್ನನ್ನು ಕರೆಯಿರಿ. ಯಾಕೆಂದರೆ ಎಲ್ಲಾರೂ ನನ್ನ ಬಿಗ್ ಬಾಸ್ ಹುಚ್ಚ ವೆಂಕಟ್ ಅಂತಾ ಕರೆಯುತ್ತಾರೆ. ಈ ಬಿಗ್ ಬಾಸ್ ಶೋ ಬರುವ ಸಮಯದಲ್ಲಿ ಎಲ್ಲರೂ ನೀವು ಹೋಗಲ್ವಾ ನೀವು ಹೋಗಲ್ವಾ ಅಂತಾ ಕೇಳುತ್ತಾರೆ. ನನಗೆ ಒಂದು ಅವಕಾಶ ಕೊಡಿ. ಸುದೀಪ್ ಅವರೇ ನೀವು ಮನಸ್ಸು ಮಾಡಿದರೆ ಆಗುತ್ತದೆ' ಎಂದು ಹುಚ್ಚ ವೆಂಕಟ್ ಬಿಗ್‌ಬಾಸ್ ತಂಡಕ್ಕೆ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications