Bigg Boss: ಬಿಗ್‌ಬಾಸ್ ವಿನ್ನರ್ ಕಾರ್ತಿಕ್‌ಗೆ ನಿಜವಾಗಿ ಬಂದ ಹಣವೆಷ್ಟು? ಮದುವೆ ಬಗ್ಗೆ ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಇನ್ನು ಕೆಲವೇ ದಿನ ಬಾಕಿ ಇದೆ. ಕಳೆದ ಸೀಸನ್‌ನಲ್ಲಿ ಹನುಮಂತ ಬಿಗ್‌ಬಾಸ್ ಟ್ರೋಫಿ ಗೆದ್ದಿದ್ದರು. ಸೀಸನ್-10ರ ವಿನ್ನರ್ ಆಗಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ವಿನ್ ಆಗಿದ್ದರು. ಅವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಸಹ ಘೋಷಿಸಲಾಗಿತ್ತು. ಇದರಲ್ಲಿ ಕಾರ್ತಿಕ್ ಅವರಿಗೆ ನಿಜವಾಗಿ ಕೈಸೇರಿದ ಹಣವೆಷ್ಟು? ಎಷ್ಟೆಲ್ಲ ಹಣ ಕಡಿತವಾಗಿ ಕೊನೆಗೆ ಎಷ್ಟು ಕೊಡುತ್ತಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ತಮ್ಮ ವಿಚಾರದ ಬಗ್ಗೆಯೂ ಕಾರ್ತಿಕ್ ಬಾಯ್ಬಿಟ್ಟಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್-10ರಲ್ಲಿ ಕಾರ್ತಿಕ್ ಮಹೇಶ್ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ನಿರೀಕ್ಷೆಯಂತೆ ಆ ಸೀಸನ್‌ನಲ್ಲಿ ಟ್ರೋಫಿ ಕೂಡ ಗೆದ್ದಿದ್ದರು. ಪ್ರತಿ ಸೀಸನ್‌ನಲ್ಲೂ ಬಿಗ್‌ಬಾಸ್ ವಿಜೇತರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಆದರೆ ಈ ಪೂರ್ತಿ ಹಣ ವಿಜೇತರ ಕೈಸೇರೋದಿಲ್ಲ. ಸರ್ಕಾರದ ನಿಯಮಾನುಸಾರ ತೆರಿಗೆ ಕಡಿತವಾಗಿ ಬಾಕಿ ಹಣವಷ್ಟೇ ನೀಡಲಾಗುತ್ತದೆ. ಈ ಬಗ್ಗೆ ಕಾರ್ತಿಕ್ ಮಹೇಶ್ ಮಹತ್ವದ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಸರ್ಕಾರದ ನಿಯಮಗಳ ಪ್ರಕಾರ ಬಿಗ್‌ಬಾಸ್‌ನಲ್ಲಿ ಗೆಲ್ಲುವ ಹಣದಲ್ಲಿ 30 ಪರ್ಸೆಂಟ್ ತೆರಿಗೆ ಹಾಕ್ತಾರೆ. ಬಾಕಿ ಹಣ ಬಂದೇ ಬರುತ್ತೆ. ಅದರೊಂದಿಗೆ ನಾನು ಒಂದು ಬಿಸಿನೆಸ್ ಕೂಡ ಶುರು ಮಾಡಿದ್ದೀನಿ. ಜೀವನಕ್ಕಾಗಿ ಏನಾದ್ರೂ ಮಾಡಬೇಕಲ್ಲ? ಹಾಗಾಗಿ ಕೆಲಸಗಳು ನಡೆದುಕೊಂಡು ಹೋಗ್ತಿವೆ. ನೀರು ಹರಿಯುತ್ತಾ ಇರ್ಬೇಕು, ಜೀವನ ಕೂಡ ಸಾಗುತ್ತಾ ಇರ್ಬೇಕು ಎಂದಿದ್ದಾರೆ ಕಾರ್ತಿಕ್.
ಕಾರ್ತಿಕ್ ಮದುವೆ ಯಾವಾಗ?
ಕಾರ್ತಿಕ್ ಅವರ ತಾಯಿ ಮಗನ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮಗ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾನೆ. ಮದುವೆ ಖಂಡಿತವಾಗಿ ಮಾಡಲೇಬೇಕು. ಈಗ ಸಿನಿಮಾ ಮಾಡ್ತಿರೋದ್ರಿಂದ ಅದು ಮುಗಿದ ಕೂಡಲೇ ಮದುವೆ ಖಂಡಿತ ಮಾಡೋಣ, ಅವನೂ ಮದುವೆಗೆ ಒಪ್ಪಿದ್ದಾನೆ ಎಂದಿದ್ದಾರೆ. ಮದುವೆ ಹೇಗಿದ್ರೂ ಆಗ್ತಾನೆ, ಅವನಿಗೆ ಇನ್ನೂ ದೊಡ್ಡ ಸಕ್ಸಸ್ ಸಿಗಬೇಕು ಎಂದು ಕುಟುಂಬಸ್ಥರು ಆಶಿಸಿದ್ದಾರೆ.
ನಾನು ಮದುವೆ ಆಗಬೇಕು ಅನ್ನೋದು ಕುಟುಂಬದವರ ಆಸೆ. ಆದರೆ ಸಿನಿಮಾ ಮಾಡಬೇಕು, ಅದು ರಿಲೀಸ್ ಆಗಬೇಕು ಅನ್ನೋದು ನನ್ನ ಆಸೆ. ಹಾಗಾಗಿ ಇದೆಲ್ಲ ಮುಗಿದ ಮೇಲೆ ಮದುವೆ ಬಗ್ಗೆ ಮಾತನಾಡೋಣ ಅಂತ ಹೇಳಿದ್ದೀನಿ. ಮನೆಯವರು ಕೂಡ ಆ ದಿನಕ್ಕಾಗಿ ಕಾಯುತ್ತಿದ್ದಾರೆ ಎಂದು ಕಾರ್ತಿಕ್ ತಮ್ಮ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಬ್ಯಾಚುಲರ್ ಆಗಿರುವ ಕಾರ್ತಿಕ್ ಕಿರುತೆರೆಯಲ್ಲಿ ಮಿಂಚಿದ್ದರು. ಇದೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಹೀರೋ ಆಗಿ ಸೌಂಡ್ ಮಾಡಲು ಮುಂದಾಗಿದ್ದಾರೆ. ಆದಷ್ಟು ಬೇಗ ಕಾರ್ತಿಕ್ ಮದುವೆ ನೆರವೇರಲಿ ಅನ್ನೋದು ಅವರ ಅಭಿಮಾನಿಗಳ ಆಸೆ.












Click it and Unblock the Notifications