ಚಾನೆಲ್ ಮನೆ ಮಗಳಾದ್ರೆ ಬಿಗ್‌ಬಾಸ್‌ನಲ್ಲಿ ಉಳಿಯಲ್ಲ, ಜನರ ಮನೆ ಮಗಳಾಗಬೇಕು: ಸ್ಪಂದನಾ
ಬಿಗ್‌ಬಾಸ್ ಮನೆಯಿಂದ ಈ ವಾರ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿ ಹೊರಬಂದರು. ಸತತ 99 ದಿನಗಳ ಕಾಲ ಸ್ಪಂದನಾ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಟ್ರೋಲ್‌ಗಳ ಸುರಿಮಳೆಯೇ ಹರಿದಿತ್ತು. 'ಸ್ಪಂದನಾ ಚಾನಲ್‌ನ ಮನೆ ಮಗಳು, ಅದಕ್ಕೇ ಉತ್ತಮವಾಗಿ ಆಡದಿದ್ದರೂ ಬಿಗ್‌ಬಾಸ್‌ನಲ್ಲಿ ಇನ್ನೂ ಉಳಿದಿದ್ದಾರೆ' ಎಂದು ಗೇಲಿ ಮಾಡಿದ್ದರು. 'ಸ್ಪಂದನಾ ಅದೃಷ್ಟದಿಂದ ಸೇಫ್ ಆಗಿದ್ದಾರೆ' ಎಂದಿದ್ದರು. ಈ ಎಲ್ಲ ಟೀಕೆಗಳಿಗೆ ಸ್ಪಂದನಾ ಖಡಕ್ ಉತ್ತರ ಕೊಟ್ಟಿದ್ದಾರೆ.
'ಇಲ್ಲಿ ಯಾರೂ ಮನೆ ಮಗಳು, ಸೊಸೆ, ಮಗ ಅನ್ನೋ ಕಾರಣಕ್ಕೆ ಉಳಿದುಕೊಳ್ಳಲು ಆಗಲ್ಲ. ನಾವೆಲ್ಲ ಜನರ ಮನೆ ಮಗಳಾಗಬೇಕು. ಚಾನಲ್ ಮನೆ ಮಗಳಾದ್ರೆ ಅಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಜಾಹ್ನವಿ ಅವರಿಗೂ ಆ ಅಭಿಪ್ರಾಯ ಬದಲಾಯಿತು ಅನಿಸುತ್ತೆ. ಟಾಸ್ಕ್‌ವೊಂದರಲ್ಲಿ ಅವರೇ ನನಗೆ ವೋಟ್ ಮಾಡಿ, ಒಂದಷ್ಟು ಒಳ್ಳೆಯ ಮಾತುಗಳನ್ನ ಹೇಳಿದ್ರು' ಎಂದಿದ್ದಾರೆ.

ಜಾಹ್ನವಿ ಕೂಡ ಅದೇ ಮನೆ ಮಗಳು
'ಸ್ಪಂದನಾ ಸಹಸ್ಪರ್ಧಿಯಾಗಿದ್ದ ಜಾಹ್ನವಿ ಕೂಡ ಇದೇ ಮಾತನ್ನಾಡಿದ್ದರು. ಚಾನಲ್‌ನ ಮನೆ ಮಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸ್ಪಂದನಾ, ನನಗೆ ನಗು ಬರುತ್ತೆ, ಹಾಗೆ ನೋಡುವುದಾದ್ರೆ ಜಾಹ್ನವಿ ಕೂಡ ಇದೇ ಮನೆಯ ಮಗಳು. ಅವರು ಈ ಈ ರೀತಿಯ ಹೇಳಿಕೆ ಕೊಟ್ಟಿದ್ದು ನಿಜಕ್ಕೂ ನನಗೆ ಶಾಕಿಂಗ್' ಎಂದಿದ್ದಾರೆ.
'ಬಿಗ್‌ಬಾಸ್ ಮನೆಯಲ್ಲಿ ನಾನು ತುಂಬಾ ತಾಳ್ಮೆಯಿಂದ ಇದ್ದೆ. ಅಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕರು. ನಾನು ಹೊರಗಡೆ ಬಂದಾಗಲೂ ನನ್ನ ವ್ಯಕ್ತಿತ್ವ ಹಾಗೇ ಉಳಿಸಿಕೊಂಡೆ ಎಂದು ತಂದೆ ತಾಯಿ ಕೂಡ ಹೆಮ್ಮೆಪಟ್ಟರು. ಸೋಷಿಯಲ್ ಮೀಡಿಯಾದಲ್ಲೂ ಅನೇಕರು ನನಗೆ ಇದೇ ಕಾಮೆಂಟ್ ಮಾಡಿದ್ದಾರೆ. ಇದರ ಬಗ್ಗೆ ಖುಷಿ ಇದೆ' ಎಂದಿದ್ದಾರೆ.
ಮದುವೆ ಗುಟ್ಟು ಬಿಚ್ಚಿಟ್ಟ ಸ್ಪಂದನಾ
ತಮ್ಮ ಮದುವೆ ಬಗ್ಗೆಯೂ ಸ್ಪಂದನಾ ಪ್ರತಿಕ್ರಿಯಿಸಿದ್ದಾರೆ. 'ಇನ್ನೂ ಮದುವೆ ಯಾವಾಗ ಎಂದು ಗೊತ್ತಿಲ್ಲ. ನನಗೆ ಇಷ್ಟೊಂದು ದೊಡ್ಡ ವೇದಿಕೆ ಸಿಕ್ಕಿದೆ. ಮುಂದೆ ಏನೆಲ್ಲ ಅವಕಾಶಗಳು ಸಿಗುತ್ತೋ ನೋಡಬೇಕು. ನಾನು ಅದಕ್ಕಾಗಿ ಕಾಯುತ್ತಿದ್ದೇನೆ. ಹಾಗಾಗಿ ಮದುವೆ ಬಗ್ಗೆ ಸದ್ಯಕ್ಕೆ ನನಗೆ ಏನೂ ಗೊತ್ತಿಲ್ಲ ಎಂದಿದ್ದಾರೆ. ನಾನು ಮದುವೆಯಾಗುವ ಹುಡುಗ ಮುಖ್ಯವಾಗಿ ನನ್ನ ತಂದೆ ತಾಯಿಯನ್ನೂ ಅವರ ಮನೆಯವರಷ್ಟೇ ಇಷ್ಟಪಡಬೇಕು. ನಾನು ಇಂಡಸ್ಟ್ರಿಯಲ್ಲಿರುವುದರಿಂದ ಸಪೋರ್ಟ್ ಮಾಡುವ ಹುಡುಗ ಬೇಕು. ನೋಡಲು ಚೆನ್ನಾಗಿರಬೇಕು, ತಮಾಷೆ ಮಾಡುತ್ತಿರಬೇಕು. ತುಂಬಾ ಸೀರಿಯಸ್ ಆಗಿ ಇರೋಕಾಗಲ್ಲ, ಹಾಗಾಗಿ ನಗಬೇಕು' ಎಂದೂ ಕ್ವಾಲಿಟಿಗಳನ್ನು ಹೇಳಿಕೊಂಡಿದ್ದಾರೆ.
ಕಳೆದ ವಾರ ಎಲಿಮಿನೇಟ್ ಆಗಿದ್ದ ಮಾಳು ಬಿಗ್‌ಬಾಸ್‌ನಿಂದ ಹೊರಬಂದು ಅಸಮಾಧಾನ ಹೊರಹಾಕಿದ್ರು. ಬೇರೆ ಯಾರೇ ಕಪ್ ಗೆದ್ದರೂ ಒಪ್ಪಲ್ಲ ಎಂದಿದ್ದರು. ಈ ವಿಚಾರ ತಿಳಿದು ಸ್ಪಂದನಾ ಶಾಕ್ ಆಗಿದ್ದಾರೆ. 'ಮಾಳು ಹೀಗೆ ಹೇಳಿದ್ದಾರೆ ಅನ್ನೋದು ನನಗೆ ಸರ್ಪ್ರೈಸ್ ಆಗಿದೆ. ಮಾಳುಗೆ ಈ ಮೊದಲೇ ಎಲಿಮಿನೇಷನ್ ಭಯ ಇತ್ತು, ಅವರು ಎಲಿಮಿನೇಟ್ ಆಗುವುದ್ದಕ್ಕಿಂತ ಒಂದು ವಾರದ ಹಿಂದೆಯೇ ಇದರ ಬಗ್ಗೆ ಮಾತನಾಡಿದ್ರು. ಈ ವಾರ ನಾಮಿನೇಟ್ ಆಗಿದ್ದೇನೆ. ನಾನೇ ಹೊರಗೆ ಹೋಗೋದು ಅಂತ ಅನಿಸುತ್ತಿದೆ ಎಂದು ನನ್ನ ಬಳಿ ಹೇಳಿದ್ರು. ಮಾಳು ತುಂಬಾ ಸ್ಟ್ರಾಂಗ್, ಆದರೆ ತಮ್ಮ ಜನಪ್ರಿಯತೆ ಸರಿಯಾಗಿ ಬಳಸಿಕೊಂಡಿಲ್ಲ' ಎಂದು ಸ್ಪಂದನಾ ಹೇಳಿದ್ದಾರೆ.












Click it and Unblock the Notifications