Bigg Boss Kannada: ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಚೈತ್ರಾ ಕುಂದಾಪುರ ಜೈಲು ವಾಸ ಅನುಭವಿಸಿದ್ದೇಕೆ..?
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಈ ಬಾರಿ ದೊಡ್ಮನೆ ಪ್ರವೇಶಿಸುವ ನಾಲ್ಕು ಜನರ ಹೆಸರು ರಿವೀಲ್ ಆಗಿದ್ದು, ಉಳಿದ ಸ್ಪರ್ಧಿಗಳು ಯಾರು ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ.
ಈಗಾಗಲೇ ನಿನ್ನೆ ನಡೆದ ರಾಜಾರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ಕು ಜನರ ಹೆಸರನ್ನು ರಿವೀಲ್ ಮಾಡಲಾಗಿದೆ. ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯ ನಡು ನಡುವೆ ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳ ಪ್ರೋಮೋ ರಿಲೀಸ್ ಆಗಿತ್ತು. ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ನಾಲ್ಕು ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ.

ಇದೀಗ ಚೈತ್ರಾ ಕುಂದಾಪುರ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚೈತ್ರಾ ಕುಂದಾಪುರ ಹಿಂದೂ ಪರ ಭಾಷಣಗಳ ಮೂಲಕ ಗುರುತಿಸಿಕೊಂಡಿದ್ದರು. ಆದರೆ ಕಳೆದ ವರ್ಷ ಚೈತ್ರಾ ಕುಂದಾಪುರ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಜೈಲು ವಾಸ ಕೂಡ ಅನುಭವಿಸಿ ಹೊರ ಬಂದಿದ್ದರು. ಭಾರೀ ಮೊತ್ತದ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಜೈಲು ಪಾಲಾಗಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ ಕುಂದಾಪುರ ಭಾಗದ ಜನಪ್ರಿಯ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಎನ್ನುವವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿರುವ ಆರೋಪ ಕೇಳಿಬಂದಿತ್ತು. 7 ಕೋಟಿ ರೂಪಾಯಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿದ್ದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಕಲಿ ನಾಯಕರನ್ನು ಸೃಷ್ಟಿ ಮಾಡಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಜೈಲು ಪಾಲಾಗಿದ್ದರು. ಬಳಿಕ ಬಿಡುಗಡೆಗೊಂಡು ಕೆಲವು ದಿನಗಳು ತೆರೆಮರೆಗೆ ಸರಿದಿದ್ದರು. ಇದೀಗ ಬಿಗ್ ಬಾಸ್‌ಗೆ ಹೋಗುವ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.












Click it and Unblock the Notifications